
Breaking: ಡಿ.5ರಂದು ಮತ್ತೆ ವಾಯುಭಾರ ಕುಸಿತ, ಕರ್ನಾಟಕಕ್ಕೆ ಭಾರಿ ಮಳೆಯ ಆತಂಕ?
ಬೆಂಗಳೂರು, ಡಿಸೆಂಬರ್ 01: ರಾಜ್ಯದಲ್ಲಿ ಸೃಷ್ಟಿಯಾಗಿರುವ ಒಣಹವೆ ಮುಂದಿನ ಮೂರು ದಿನ ಮುಂದುವರಿಯಲಿದೆ. ನಂತರ ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಭಾರಿ ಮಳೆ ಆತಂಕ ಎದುರಾಗಿದೆ. ಕಾರಣ ಡಿ.5ರಂದು ಹವಾಮಾನದಲ್ಲಿ ತೀವ್ರ ಬದಲಾವಣೆಗಳು ಉಂಟಾಗಲಿವೆ.
ಕರ್ನಾಟಕ ಹವಾಮಾನ ಕೇಂದ್ರ ನೀಡಿರುವ ಮುನ್ಸೂಚನೆ ಪ್ರಕಾರ, ಡಿಸೆಂಬರ್ 4 ರಂದು ಅಂಡಮಾನ್ ದಕ್ಷಿಣ ಸಮುದ್ರಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣವಾಗಲಿದೆ. ಇದರ ಪ್ರಭಾವದಿಂದ ಮರುದಿನ ಡಿಸೆಂಬರ್ 5ರಂದು ಅದೇ ಪ್ರದೇಶದ ಸಮುದ್ರಮಟ್ಟದಲ್ಲಿ ವಾಯುಭಾರ ಕುಸಿತದ ಪ್ರದೇಶ ನಿರ್ಮಾಣವಾಗಲಿದೆ.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್
ಈ ವಾಯುಭಾರ ಕುಸಿತವು ಮೂಲ ಸ್ಥಳದಿಂದ ಪಶ್ಚಿಮ ದಿಕ್ಕಿನಲ್ಲಿ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ. ನಂತರ ಡಿಸೆಂಬರ್ 8ರ ಸುಮಾರಿಗೆ ನೆರೆಯ ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಕರಾವಳಿಗೆ ಬಂದು ಅಪ್ಪಳಿಸಲಿದೆ ಎಂದು ಹವಾಮಾನ ತಜ್ಞ ಹಾಗೂ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದ್ದಾರೆ.
ಈ ಹವಾಮಾನ ವೈಪರಿತ್ಯಗಳ ಪ್ರಭಾದಿಂದ ಕರ್ನಾಟಕದಲ್ಲಿ ಹಲವಡೆ ಭಾರಿ ಮಳೆ ನಿರೀಕ್ಷೆ ಇದೆ. ತಮಿಳುನಾಡು ಕರಾವಳಿಗೆ ಬಂದು ಸೇರುವ ವೈಪರಿತ್ಯಗಳು ಹೆಚ್ಚಾಗಿ ಕರ್ನಾಟಕದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾನಗರ, ಮಂಡ್ಯ, ಮೈಸೂರು ಜಿಲ್ಲೆಗಳು ಹಾಗೂ ಕರಾವಳಿ ಜಿಲ್ಲೆಗಳಿಗೆ ಅಧಿಕ ಮಳೆ ಸಾಧ್ಯತೆ ಇರುತ್ತದೆ. ಅದರಂತೆ ಈ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಬಹುದಾಗಿದೆ ಎಂದರು.
ಉತ್ತರ ಒಳನಾಡಿನಲ್ಲಿ ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆ
ಪ್ರಸ್ತುತದಲ್ಲಿ ಕರ್ನಾಟಕದಾದ್ಯಂತ ಒಣಹವೆ ಮುಂದುವರಿದೆ. ಈ ಪೈಕಿ ಕಳೆದ ಮೂರು ನಾಲ್ಕು ದಿನದಲ್ಲಿ ಉತ್ತರ ಒಳನಾಡಿನ ಭಾಗದಲ್ಲಿ ಚಳಿ ಪ್ರಮಾಣ ಏರಿಕೆ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗುರುವಾರ ಬಾಗಲಕೋಟೆಯಲ್ಲಿ ರಾಜ್ಯ ಕನಿಷ್ಠ ತಾಪಮಾನ 8ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಜಿಲ್ಲೆ ಸೇರಿದಂತೆ ಬೆಳಗಾವಿ, ವಿಜಯಪುರ ಇನ್ನಿತರ ಜಿಲ್ಲೆಗಳಲ್ಲಿ ಮುಂದಿನ ಮೂರು ತಾಪಮಾನದಲ್ಲಿ ಇಳಿಕೆ ಉಂಟಾಗುವ ಸಾಧ್ಯತೆ ಇದ್ದು, ಬೆಳಗ್ಗೆ ಮಂಜು ಹಾಗೂ ಚಳಿ ಹೆಚ್ಚಿರಲಿದೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನ ಮೋಡ ಕವಿದ ವಾತಾವರಣ ಕಂಡು ಬರಲಿದೆ. ಕೆಲವು ಕಡೆಗಳಲ್ಲಿ ಮಾತ್ರ ಹಗುರ ಮಳೆ ಸಾಧ್ಯತೆ ಇದೆ. ಬೆಳಗಿನ ಜಾವ ದಟ್ಟವಾಗಿ ಮಂಜು ಮುಸುಕುವ ಸಾಧ್ಯತೆ ಬಹಳಷ್ಟಿದೆ. ಈ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 27ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.