ಶಿಕ್ಷಕಿ ಮೇಲೆ ಆಸಿಡ್ ದಾಳಿ: ಭಗ್ನಪ್ರೇಮಿ ಬಂಧನ

ಹಿಂದಿನ ಸುದ್ದಿ : ಕರ್ನಾಟಕದಲ್ಲಿ ಆಸಿಡ್ ದಾಳಿ ಮರುಕಳಿಸಿದೆ. ತನ್ನನ್ನು ಮದುವೆಯಾಗೆಂದು ಶಿಕ್ಷಕಿಯನ್ನು ಪೀಡಿಸುತ್ತಿದ್ದ ಯುವಕನೊಬ್ಬ ಕೊನೆಗೆ ತನ್ನದು ವಿಫಲ ಪ್ರೇಮವೆಂದು ಅರಿತು ಆಕೆಯ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.
ಆಸಿಡ್ ದಾಳಿಯಿಂದ ಶಿಕ್ಷಕಿಗೂ ಗಾಯಗವಾಗಿದ್ದು, ಆಕೆಯ ಜತೆಗಿದ್ದ ಯುಕೆಜಿ ವಿದ್ಯಾರ್ಥಿಯ ಮೇಲೂ ಆಸಿಡ್ ಎರಚಿದ್ದು ಬಾಲಕ ಗಾಯಗೊಂಡಿದ್ದಾನೆ. ದೌರ್ಭಾಗ್ಯವೆಂದರೆ ಬಾಧಿತ ಶಿಕ್ಷಕಿಯ ಅಣ್ಣ ರಂಗಪ್ಪನ ಸ್ನೇಹಿತನೇ ಈ ಕುಕೃತ್ಯವೆಸಗಿದ್ದಾನೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಅಂಜನಾದೇವಿ ಕಾನ್ವೆಂಟ್ ಶಾಲೆಯ ಶಿಕ್ಷಕಿ ಎಚ್ ಕವಿತಾ ಹಾಗೂ ಅದೇ ಗ್ರಾಮದ ನಾಗರಾಜು ಎಂಬುವವರ ಪುತ್ರ ರಘು ಎಂಬ ಬಾಲಕ ಆಸಿಡ್ ದಾಳಿಯಲ್ಲಿ ಗಾಯಗೊಂಡವರು. ಇಬ್ಬರನ್ನೂ ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊನ್ನಾಳಿ ತಾಲೂಕಿನ ಕೋಣನತಲೆ ಗ್ರಾಮದ ಕವಿತಾ ಅವರು ಸೋದರಮಾವನ ಮನೆಯಲ್ಲಿದ್ದುಕೊಂಡು ಕೆಲಸಕ್ಕೆ ಹೋಗುತ್ತಿದ್ದರು. ಎಂದಿನಂತೆ ಕವಿತಾ ಸಂಜೆ 4.30ರ ಸಮಯದಲ್ಲಿ ಕೊಕ್ಕನೂರಿನ ರಥ ಬೀದಿ ಮಾರ್ಗವಾಗಿ ಮನೆಗೆ ವಾಪಸಾಗುತ್ತಿದ್ದರು. ಜತೆಗೆ ಕಾನ್ವೆಂಟ್ ವಿದ್ಯಾರ್ಥಿ ರಘು ಸಹ ಆಕೆಯ ಜತೆಗಿದ್ದ.
ಆ ಸಮಯದಲ್ಲಿ ಕವಿತಾರ ಸ್ವಗ್ರಾಮವಾದ ಕೋಣನ ತಲೆಯ ಮಹೇಶ ಎಂಬಾತ ಬೈಲಿನಲ್ಲಿ ಕವಿತಾ ಎದುರು ಪ್ರತ್ಯಕ್ಷವಾಗಿ ಕೈಲ್ಲಿದ್ದ ಆಸಿಡ್ ಬಾಟಲಿಯನ್ನು ಆಕೆಯ ಮೇಲೆ ಸುರಿದಿದ್ದಾನೆ. ಆಕೆಯ ಪಕ್ಕದಲ್ಲಿದ್ದ ಮಗುವಿನ ಮೇಲೂ ಆಸಿಡ್ ಎರಚಿದೆ. ಗಾಯಗೊಂಡ ಕವಿತಾ ಮತ್ತು ರಘು ಜೋರಾಗಿ ಕೂಗಿಕೊಂಡಿದ್ದಾರೆ.
ಕವಿತಾಗೆ ಮುಖ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದರೆ ಬಾಲಕ ರಘುಗೆ ಮುಖ ಮತ್ತು ಎದೆ ಭಾಗದಲ್ಲಿ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವರು ಆರೋಪಿ ಮಹೇಶನನ್ನು ಬೆನ್ನಟ್ಟಿ ಹಿಡಿಯಲು ಯತ್ನಿಸಿದ್ದಾರೆ. ಆದರೆ ಹೆಲ್ಮೆಟ್ ಧರಿಸಿದ್ದ ಆತ ಬೈಕಿನ ವೇಗ ಹೆಚ್ಚಿಸಿಕೊಂಡು ಹರಿಹರದತ್ತ ಪರಾರಿಯಾಗಿದ್ದಾನೆ.
ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಮಹೇಶನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.












Click it and Unblock the Notifications