ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕು ಬಿದ್ದ ಡಿಕೆಶಿಗೆ ಮುಜಗರ ಇಲ್ಲ ನಮಗೇಕೆ ಮುಜುಗರಾ?: ಈಶ್ವರಪ್ಪ
ಯಾವ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ದ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ
ಮೈಸೂರು,ಮಾರ್ಚ್ 3: ವಿಧಾನಸಭಾ ಚುನಾವಣೆ ಅಬ್ಬರದ ಪ್ರಚಾರ ನಡೆಸುತ್ತಿದ ಬಿಜೆಪಿ ನಾಯಕರಿಗೆ ಲೋಕಾಯುಕ್ತ ದಾಳಿಯಿಂದ ಶಾಕ್ ಕೊಟ್ಟಿದ್ದು, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದ ವೇಳೆ ಕೋಟ್ಯಾಂತರ ರೂಪಾಯಿ ಪತ್ತೆಯಾಗಿದೆ. ಈ ಕುರಿತು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಿಜೆಪು ವಿರುದ್ದ ತಿರುಗಿ ಬಿದ್ದಿದ್ದು, ಇದು 40% ಸರ್ಕಾರ ಎಂದು ಟೀಕೆಯನ್ನ ಮುಂದುವರೆಸಿದೆ.
ಈ ಕುರಿತು ಮಾಜಿ ಸಚಿವ ಈಶ್ವರಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ದ ಕೆಂಡಕಾರಿದ್ದಾರೆ. ಸಾವಿರಾರು ಕೋಟಿ ಲೂಟಿ ಮಾಡಿ ಸಿಕ್ಕು ಬಿದ್ದ ಡಿ ಕೆ ಶಿವಕುಮಾರ್ ಗೆ ಮುಜಗರ ಇಲ್ಲ ನಮಗೇಕೆ ಮುಜುಗರಾ? ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋಗಿ ಬಂದಿದ್ದಾರೆ. ತಿಹಾರ್ ಜೈಲಿಗೆ ಹೋಗಿ ಬಂದಿರುವವರ ಪ್ರಶ್ನೆಗೆ ಉತ್ತರಿಸುವ ಅಗತ್ಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ತಿಹಾರ್ ಜೈಲಿನಿಂದ ಬಂದವರು ಈ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ. ಶಿವಕುಮಾರ್ ಮನೆಯಲ್ಲಿ ಎಷ್ಟು ಬಂಡಲ್ ಹಣ ಇತ್ತು. ಎಷ್ಟು ಅಕ್ರಮ ದಾಖಲೆ ಇತ್ತು ಎಂಬುದು ಜನರು ನೋಡಿದ್ದಾರೆ, ಇಂತವರು ಲೋಕಾಯುಕ್ತ ದಾಳಿ ಬಗ್ಗೆ ಮಾತಾಡುತ್ತಿದ್ದಾರೆ. ದಾಳಿ ಬಗ್ಗೆ ಸ್ಪಷ್ಟವಾದ ತನಿಖೆ ಆಗಬೇಕು. ಸಿಕ್ಕಿರುವ ಹಣದ ಬಗ್ಗೆ ನಮಗೆ ಎಬಿಸಿಡಿ ಗೊತ್ತಿಲ್ಲ. ತನಿಖೆ ಆಗಲಿ. ಯಾರೇ ತಪ್ಪು ಮಾಡಿದರು ಶಿಕ್ಷೆ ಆಗುತ್ತದೆ ಎಂದು ಹೇಳಿದರು.

ಬಿಜೆಪಿಗರ ಅಕ್ರಮ ಬಯಲಾದರೆ ಅವರನ್ನು ಇಡಲು 15 ಪರಪ್ಪನ ಅಗ್ರಹಾರ ಬೇಕು ಎಂಬ ಎಚ್ಡಿಕೆ ಹೇಳಿಕೆ ಕುರಿತು ಮಾತನಾಡಿ, ಅಕ್ರಮಗಳ ಬಗ್ಗೆ ತನಿಖೆ ಆದರೆ, ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬದವರೆಲ್ಲಾ ಜೈಲಿಗೆ ಹೋಗುತ್ತಾರೆ. ಅವರನ್ನು ಕುಟುಂಬದವರನ್ನು ಜೈಲಿಗೆ ಕಳಿಸಲು 50 ಜೈಲು ಕಟ್ಟಬೇಕು. ಮಾಜಿ ಸಿಎಂ ಆಗಿದ್ದವರು ಈ ರೀತಿ ಸಾಕ್ಷಿ ಇಲ್ಲದೆ ಮಾತಾಡಬಾರದು ಎಂದು ಹೇಳಿದರು.
ಬಿಜೆಪಿ ಸರ್ಕಾರ ನುಡಿದಂತೆ ನಡೆದಿದೆ. ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇವೆ. ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಎಸ್ ಸಿ, ಎಸ್ ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ. ಹಿಂದುಳಿದ ವರ್ಗ ಹಾಗು ದಲಿತ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಪರಿಣಾಮ ಬಿಜೆಪಿ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಗೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಜನರು ನಮ್ಮ ಜೊತೆ ಇರುವುದು ಸ್ಪಷ್ಟವಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಕಾಂಗ್ರೆಸ್ ನವರು ಹಣ ಕೊಟ್ಟು ಜನರನ್ನು ಕರೆಸುವುದು ಅಭ್ಯಾಸವಾಗಿದೆ. ಹಾಗಾಗಿ ಬಿಜೆಪಿಯವರು ಹಣ ಕೊಟ್ಟು ಜನರನ್ನು ಕರೆಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ಸಿಗುತ್ತಿರುವ ಅಪಾರ ಬೆಂಬಲದಿಂದ ವಿಚಲಿತರಾಗಿರುವ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. 500 ರೂಪಾಯಿ ಕೊಟ್ಟು ಜನರನ್ನು ಸಭೆಗೆ ಕರೆ ತರುವಂತೆ ಸಿದ್ದರಾಮಯ್ಯ ಹೇಳಿರುವುದನ್ನು ಇಡೀ ದೇಶದ ಜನರು ನೋಡಿದ್ದಾರೆ.
ಅವರ ಮೇಲೆ ಬಂದಿರುವ ತಪ್ಪನ್ನು ಮರೆಮಾಚಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನರೇಂದ್ರ ಮೋದಿ, ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ನೇತೃತ್ವ, ಸಂಘಟನೆ ಹಾಗೂ ನಾವು ಮಾಡಿರುವ ಅಭಿವೃದ್ಧಿ, ಸಂಸ್ಕೃತಿ ಆಧಾರದ ಮೇಲೆ ಮತ ಕೇಳುತ್ತಿದ್ದೇವೆ. ನಾಲ್ಕು ಅಂಶದ ಮೇಲೆ ಮತ ಕೇಳುತ್ತಿದ್ದೇವೆ ಎಂದು ಹೇಳಿದರು.ಮುಂದಿನ ಎಲೆಕ್ಷನ್ ನಲ್ಲಿ ಜನರು ಬಿಜೆಪಿ ಗೆ ಹೆಚ್ಚು ಸ್ಥಾನ ನೀಡುತ್ತಾರೆ. ಖಂಡಿತವಾಗಿಯೂ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ ಅಂತ ಈಶ್ವರಪ್ಪ ಹೇಳಿದರು. t












Click it and Unblock the Notifications