Government employee; ಲೋಕಾಯುಕ್ತ ವಿಚಾರಣೆಗೆ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್ 04; ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ನೀಡಿರುವ ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಇಲಾಖಾ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸುತ್ತೋಲೆ ಪ್ರಕಟಿಸಿದೆ.
ಕರ್ನಾಟಕ ಲೋಕಾಯುಕ್ತ ಸರ್ಕಾರಿ ನೌಕರರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಗೌರವಾನ್ವಿತ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಹೊರಡಿಸಿರುವ ಸುತ್ತೋಲೆ ಬಳಿಕ ಇದನ್ನು ಪ್ರಕಟಿಸಲಾಗಿದೆ. ಸರ್ಕಾರದ ಸುತ್ತೋಲೆ 22/3/2014 ಕರ್ನಾಟಕ ಲೋಕಾಯುಕ್ತ ಸುತ್ತೋಲೆ ದಿನಾಂಕ 08/02/2023 ಉಲ್ಲೇಖ ಮಾಡಲಾಗಿದೆ.

ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಕರ್ನಾಟಕ ಲೋಕಾಯುಕ್ತ ಕಾಯ್ದೆ, 19840 ಕಲಂ 12(3)ರಡಿಯಲ್ಲಿ ಸಕ್ಷಮ ಪ್ರಾಧಿಕಾರವಾದ ಸರ್ಕಾರಕ್ಕೆ ಶಿಫಾರಸ್ಸುಗಳೊಂದಿಗೆ ತನಿಖಾ ವರದಿಯನ್ನು ಸಲ್ಲಿಸಿದ ನಂತರ, ಸರ್ಕಾರವು ತನಿಖಾ ವರದಿಯನ್ನು ಪರಿಶೀಲಿಸಿ, ಆರೋಪದ ಗಂಭೀರತೆಯನ್ನು ಪರಿಗಣಿಸಿ ಲಘು ದಂಡನೆಯನ್ನು ವಿಧಿಸಬಹುದಾದ ಪ್ರಕರಣವಾಗಿದ್ದಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 12 ರನ್ವಯ ಸಕ್ಷಮ ಶಿಸ್ತು ಪ್ರಾಧಿಕಾರಿಗೆ ವಿಚಾರಣೆ ನಡೆಸಲು ನಿರ್ದೇಶಿಸಬಹುದು.
ಒಂದು ವೇಳೆ ಸರ್ಕಾರಿ ನೌಕರರ ವಿರುದ್ಧ ಮಾಡಲಾದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಕಠಿಣ ದಂಡನೆಯನ್ನು ವಿಧಿಸಬಹುದಾದ ಪ್ರಕರಣವೆಂದು ಕಂಡು ಬಂದಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14ಎ ರ ಉಪನಿಯಮ (2)(ಎ)ರನ್ವಯ ಇಲಾಖಾ ವಿಚಾರಣೆ ಮಾಡಲು ಲೋಕಾಯುಕ್ತ ಅಥವಾ ಲೋಕಾಯುಕ್ತರಿಗೆ ವಹಿಸುವಂತೆ ಸರ್ಕಾರದ ಸುತ್ತೋಲೆಯಲ್ಲಿ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ ಎಂದು ಹೇಳಿದೆ.
ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರ ಹಾಗೂ ಇತರೆ ಆರೋಪಗಳ ಕುರಿತಂತೆ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14ಎ ರಡಿಯಲ್ಲಿ ವಿಚಾರಣೆಯನ್ನು ನಡೆಸಲು ಲೋಕಾಯುಕ್ತ ಸಂಸ್ಥೆಗೆ ವಹಿಸುವ ಸಂದರ್ಭದಲ್ಲಿ, ಅದೇ ಅರೋಪಗಳಿಗೆ ಸಂಬಂಧಿಸಿದಂತೆ ಈಗಾಗಲೇ ಇಲಾಖಾ ವಿಚಾರಣೆ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡಿದ್ದರೆ ಅಂತಹ ಪ್ರಕರಣಗಳನ್ನು ಪರಿಶೀಲನೆ ನಡೆಸದೆ ಯಾಂತ್ರಿಕವಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸುತ್ತಿರುವುದು ಕಂಡು ಬಂದಿರುತ್ತದೆ.
ಇಂತಹ ಸಂದರ್ಭಗಳಲ್ಲಿ ಈ ಸೂಚನೆಗಳನ್ನು ಪಾಲಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರಿಗೆ ತಿಳಿಸುವಂತೆ ಕೋರಲಾಗಿದೆ
* ಇಲಾಖಾ ವಿಚಾರಣೆಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸುವ ಪೂರ್ವದಲ್ಲಿ ಸದರಿ ನೌಕರರ ವಿರುದ್ಧ ಲೋಕಾಯುಕ್ತದ 12(3)ರ ತನಿಖಾ ವರದಿಯಲ್ಲಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದೆಯೇ?, ಇಲ್ಲವೇ? ಎಂಬುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.
* ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದ್ದರೆ, ಅದರ ಸಂಬಂಧ ಹೊರಡಿಸಿರುವ ಅಂತಿಮ ಆದೇಶದ ಪ್ರತಿಯನ್ನು ಲಗತ್ತಿಸಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ಒದಗಿಸುವುದು.
* ಮೇಲ್ಕಂಡಂತೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿ ಇಲಾಖಾ ವಿಚಾರಣೆ ಆರಂಭಗೊಂಡು ಇತ್ಯರ್ಥವಾಗದೇ ಇದ್ದ ಸಂದರ್ಭದಲ್ಲಿ ಇಲಾಖಾ ವಿಚಾರಣೆಯ ಪ್ರಸ್ತುತ ಹಂತದ ಮಾಹಿತಿಯನ್ನು ತಿಳಿಸುವುದು.
* ಒಂದು ವೇಳೆ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆಯುತ್ತಿದ್ದಲ್ಲಿ ಹಾಗೂ ಸರ್ಕಾರವು ಈ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಬೇಕೆಂದು ನಿರ್ಧರಿಸಿದಲ್ಲಿ ಹಾಗೆ ವಹಿಸುವ ಮುನ್ನ ಸಕ್ಷಮ ಪ್ರಾಧಿಕಾರದ ಹಂತದಲ್ಲಿ ನಡೆಯುತ್ತಿರುವ ಇಲಾಖಾ ವಿಚಾರಣೆಯನ್ನು ಮುಕ್ತಾಯಗೊಳಿಸಿ ಆದೇಶಿಸುವುದು. ಆ ಬಳಿಕವಷ್ಟೇ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಗೆ ವಹಿಸಿ ಆದೇಶ ಹೊರಡಿಸುವುದು.
* ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರವಷ್ಟೇ ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 14ಎ ರನ್ವಯ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸಲು ಕ್ರಮವಹಿಸುವುದು ಎಂದು ಹೇಳಿದೆ.
ಲೋಕಾಯುಕ್ತ ಹೇಳಿದ್ದೇನು?; ಸರ್ಕಾರಿ ನೌಕರರ ವಿರುದ್ಧದ ಆರೋಪಗಳ ಬಗ್ಗೆ ಇಲಾಖಾ ವಿಚಾರಣೆಯನ್ನು ಗೌರವಾನ್ವಿತ ಉಪಲೋಕಾಯುಕ್ತರಿಗೆ ವಹಿಸುವ ಬಗ್ಗೆ ಲೋಕಾಯುಕ್ತರು ಸುತ್ತೋಲೆ ಪ್ರಕಟಿಸಿದ್ದರು. ಲೋಕಾಯುಕ್ತ ಸಂಸ್ಥೆಯಿಂದ ಸರ್ಕಾರಿ ನೌಕರರ ವಿರುದ್ಧ ಭ್ರಷ್ಟಾಚಾರದ ಹಾಗೂ ಇತರೆ ಆರೋಪಗಳ ಕುರಿತಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ನಿಯಮ 14(ಎ) ಗೆಡಿಯಲ್ಲಿ ವಿಚಾರಣೆಯನ್ನು ನಡೆಸಲು ಮಾನ್ಯ ಉಪಲೋಕಾಯುಕ್ತರಿಗೆ ವಹಿಸುವ ಸಂದರ್ಭದಲ್ಲಿ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿರುತ್ತದೆ ಎಂದು ಹೇಳಿತ್ತು.
* ಇಲಾಖಾ ವಿಚಾರಣೆಯನ್ನು ಈ ಸಂಸ್ಥೆಗೆ ವಹಿಸುವ ಪೂರ್ವದಲ್ಲಿ ಸದರಿ ನೌಕರರ ವಿರುದ್ಧ ಒಂದೇ ತರಹದ ಆಪಾದನೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಸಕ್ಷಮ ಪ್ರಾಧಿಕಾರದ ಹಂತದಲ್ಲಿಯೇ ಇಲಾಖಾ ವಿಚಾರಣೆ ನಡೆದಿದೆಯೇ?, ಇಲ್ಲವೇ?
* ಒಂದು ವೇಳೆ ಇಲಾಖಾ ವಿಚಾರಣೆ ನಡೆದಿದ್ದರೆ, ಅದರ ಅಂತಿಮ ಆದೇಶದ ಪ್ರತಿಯನ್ನು ಲಗತ್ತಿಸಿ ಮಾಹಿತಿಯನ್ನು ಸಲ್ಲಿಸುವುದು.
* ಅಲ್ಲದೇ ಇಲಾಖಾ ವಿಚಾರಣೆ ಆರಂಭಗೊಂಡು ಇತ್ಯರ್ಥವಾಗದೇ ಇದ್ದ ಸಂದರ್ಭದಲ್ಲಿ, ಇಲಾಖಾ ವಿಚಾರಣೆ ಪ್ರಸ್ತುತ ಹಂತವನ್ನು ತಿಳಿಸುವುದು.
* ಮೇಲ್ಕಂಡ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಆನಂತರ ಸೂಕ್ತವಾದ ಆದೇಶವನ್ನು ಹೊರಡಿಸಲು, ಅಥವಾ ಇಲಾಖಾ ವಿಚಾರಣೆಗೆ ವಹಿಸುವುದು.
ಇನ್ನು ಮುಂದೆ ಈಗಾಗಲೇ ಇಲಾಖಾ ವಿಚಾರಣೆಗಳು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಅಥವಾ ಸಾರ್ವಜನಿಕ ನೌಕರರ ವಿರುದ್ಧ ನಡೆಯುತ್ತಿದ್ದರೆ ಅಥವಾ ಮುಕ್ತಾಯಗೊಂಡಿದ್ದರೆ, ಅಂಥಹ ಪ್ರಕರಣಗಳನ್ನು ಪರಿಶೀಲನೆ ನಡೆಸದೆ ಯಾಂತ್ರಿಕವಾಗಿ ಲೋಕಾಯುಕ್ತ ಸಂಸ್ಥೆಗೆ ಇಲಾಖಾ ವಿಚಾರಣೆ ನಡೆಸಲು ವಹಿಸುತ್ತಿರುವುದು ಕಂಡುಬಂದಿದ್ದರಿಂದ, ಈ ರೀತಿ ಆಗದಂತೆ ಇನ್ನು ಮುಂದೆ ಆದೇಶವನ್ನು ಹೊರಡಿಸುವ ಮುನ್ನ ಸೂಕ್ತ ಎಚ್ಚರಿಕೆ ಮತ್ತು ಜಾಗ್ರತೆಯಿಂದ ಸೂಚನೆಗಳನ್ನು ಪಾಲಿಸಿ ಕ್ರಮ ವಹಿಸುವಂತೆ ತಿಳಿಸಲಾಗಿತ್ತು.












Click it and Unblock the Notifications