ಸಿಎಂ ಆಗುವ ಸುಳಿವು ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 15: ಎರಡೂವರೆ ವರ್ಷಗಳ ನಂತರ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುವ ಕುರಿತು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಹೊತ್ತಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಹೌದು, ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಅದು ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. . ಅದೆಲ್ಲಾ ಹೈಕಮಾಂಡ್ ನಿರ್ಧಾರವನ್ನು ಅವಲಂಬಿಸಿರುತ್ತದೆ. ಹೈಕಮಾಂಡ್ ನಿರ್ಧರಿಸಿದರೆ ನಾನೇ ಮುಂದುವರಿಯುತ್ತೇನೆ. ಇಲ್ಲವಾದಲ್ಲಿ ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮತ್ತೆ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಏನು ಆಗಬೇಕೋ ಎಲ್ಲಾವೂ ತೀರ್ಮಾನವಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಯಾಗುವ ಸುಳಿವುವನ್ನ ಡಿ ಕೆ ಶಿವಕುಮಾರ್ ನೀಡಿದ್ದಾರೆ. ಮುಖ್ಯಮಂತ್ರಿಯಾಗುವ ಬಯಕೆಯನ್ನು ಮತ್ತೊಮ್ಮೆ ಪರೋಕ್ಷವಾಗಿ ಹೊರಹಾಕಿದ ಶಿವಕುಮಾರ್ ತಮ್ಮ ಸರ್ಕಾರ ಈ ಅವಧಿಗೆ ಮಾತ್ರ ಅಲ್ಲ ಮುಂದಿನ 5-ವರ್ಷದ ಅವಧಿಗೂ ಅಧಿಕಾರದಲ್ಲಿರುತ್ತದೆ ಎಂದರು
ಸಂವಿಧಾನ ಬದಲಿಸುತ್ತೇನೆ ಎಂಬ ಸಂಸದರನ್ನು ಯಾಕೆ ಉಚ್ಛಾಟನೆ ಮಾಡಲಿಲ್ಲ
ಬಿಜೆಪಿಗೆ 400 ಸೀಟು ಬಂದರೆ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದಾರೆ. ವ್ಯಾಪಕ ವಿರೋಧ ವ್ಯಕ್ತವಾದ ನಂತರ ಪ್ರಧಾನಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಪ್ರಧಾನಿಗಳಿಗೆ ಸಂವಿಧಾನದ ಬಗ್ಗೆ ಬದ್ಧತೆ ಇದ್ದರೆ ಸಂವಿಧಾನ ಬದಲಿಸುತ್ತೇನೆ ಎಂಬ ಸಂಸದರನ್ನು ಯಾಕೆ ಪಕ್ಷದಿಂದ ಉಚ್ಛಾಟನೆ ಮಾಡಲಿಲ್ಲ ಎಂದು ಕೇಳಲು ಬಯಸುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನಾವು ಎಲ್ಲೆಡೆ ಅಂಬೇಡ್ಕರ್ ಅವರ ಪುತ್ಥಳಿ ನೋಡುತ್ತೇವೆ. ಈ ದೇಶದಲ್ಲಿ ದೇವರ ಪ್ರತಿಮೆ ಹೊರತಾಗಿ ಯಾವುದಾದರೂ ನಾಯಕನ ಪ್ರತಿಮೆ ಹೆಚ್ಚಾಗಿದ್ದರೆ ಅದು ಅಂಬೇಡ್ಕರ್ ಅವರ ಪ್ರತಿಮೆ. ಈ ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜ ನೀಡಿದ್ದು ಕಾಂಗ್ರೆಸ್ ಕೊಡುಗೆ.
ನನಗೆ ಬಹಳ ದುಖಃ ತರುವ ಘಟನೆ ಇಂದು ನಡೆದಿದೆ. ನಮ್ಮ ಧರ್ಮ, ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ನಮ್ಮ ಹಳ್ಳಿಗಳಲ್ಲಿ ಗ್ರಾಮ ದೇವತೆಗಳನ್ನು ಪೂಜಿಸುತ್ತೇವೆ. ಆದರೆ ಇಂತಹ ಹೆಣ್ಣು ಮಕ್ಕಳ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಹಳ ಕೇವಲವಾಗಿ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳುತ್ತಿದ್ದಾರೆ. ಇದಕ್ಕಿಂತ ನೋವಿನ ವಿಚಾರ ಬೇರೇನೂ ಇಲ್ಲ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಮಾನವ ಕುಲಕ್ಕೆ ಅಪಮಾನ.
ಈ ವಿಚಾರದಲ್ಲಿ ನಾನು ಕುಮಾರಸ್ವಾಮಿ ಅವರಿಂದ ಕ್ಷಮೆಯನ್ನು ನಿರೀಕ್ಷೆ ಮಾಡುತ್ತಿಲ್ಲ. ಇಂದು ದೇಶದ ಪ್ರಧಾನಮಂತ್ರಿಗಳು ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಇಂತಹ ನಾಯಕರನ್ನು ಅವರು ಎನ್ ಡಿಎ ಮೈತ್ರಿಕೂಟದಲ್ಲಿ ಹೇಗೆ ಇಟ್ಟುಕೊಳ್ಳುತ್ತಾರೆ ಎಂದು ಕೇಳಲು ಬಯಸುತ್ತೇನೆ.
ನಿಮ್ಮ ವೈಯಕ್ತಿಕ ವಿಚಾರ ಏನೇ ಇರಲಿ, ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಆದರೆ ನನ್ನ ತಾಯಂದಿರು ತಮ್ಮ ಬದುಕನ್ನು ಕಟ್ಟುಕೊಳ್ಳಬೇಕು, ಅವರು ಹಸಿವಿನಿಂದ ಇರಬಾರದು ಎಂದು ನಮ್ಮ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಅವರಿಗೆ ನೆರವಾಗಿವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳ ಪೋಷಕರು ನಮ್ಮ ಗ್ಯಾರಂಟಿ ಯೋಜನೆಗಳಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಿಸಲು ನೆರವಾಗುತ್ತಿವೆ ಎಂದು ಹೇಳುತ್ತಿದ್ದಾರೆ ಎಂದರು.
ಇನ್ನು ರಾಜ್ಯದ ಮಹಿಳೆಯರು, ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್, ಟಿವಿ ಖರೀದಿ ಮಾಡಿದ್ದೇವೆ ಎಂದು ಯುಗಾದಿ ಹಬ್ಬದ ದಿನ ಪೂಜೆ ಮಾಡಿದ್ದಾರೆ. ಈ ರೀತಿಯಾಗಿ ನಾವು ಜನರ ಬದುಕಿನಲ್ಲಿ ಬದಲಾವಣೆ ತರಲು ಮುಂದಾಗಿದ್ದೇವೆ. ನಾವು ಭಾವನೆಗಳ ಮೇಲೆ ರಾಜಕಾರಣ ಮಾಡುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ತಿಂಗಳು 2 ಸಾವಿರ ಹಣ ಪಡೆಯುತ್ತಿರುವ 1.20 ಕೋಟಿ ಮಹಿಳೆಯರು ದಾರಿ ತಪ್ಪುತ್ತಿದ್ದಾರಾ ಕುಮಾರಸ್ವಾಮಿಯವರೇ? ಈ ಮಹಿಳೆಯರು ಧರ್ಮಸ್ಥಳ, ತಾಯಿ ಚಾಮುಂಡೇಶ್ವರಿ ಸೇರಿದಂತೆ ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ.
ರಾಜ್ಯಾದ್ಯಂತ ಮಹಿಳೆಯರು ದೊಡ್ಡ ಹೋರಾಟಕ್ಕೆ ಮುಂದಾಗಿದ್ದಾರೆ. ಅವರ ಹೋರಾಟವನ್ನು ನಾವು ತಡೆಯುವುದಿಲ್ಲ. ಆದರೆ ನೀವು ತಾಳ್ಮೆಯಿಂದ ಕಾನೂನು ಚೌಕಟ್ಟಿನಲ್ಲಿ ಹೋರಾಟ ಮಾಡಿ ಎಂದು ಮನವಿ ಮಾಡುತ್ತೇನೆ. ನಾವು ಮಾಡುವ ಪುಣ್ಯಕಾರ್ಯ ಹಾಗೂ ಪಾಪ ಕಾರ್ಯ ಎಲ್ಲವೂ ಲೆಕ್ಕದಲ್ಲಿರುತ್ತೆ ಎಂಬುದನ್ನು ಕುಮಾರಸ್ವಾಮಿಯವರು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.












Click it and Unblock the Notifications