ಲೋಕಸಭೆ ಚುನಾವಣೆಯಲ್ಲಿ 11 ಸಚಿವರನ್ನು ಕಣಕ್ಕಿಳಿಸಲು ಕೈ ಹೈಕಮಾಂಡ್ ಪ್ಲಾನ್ ! ಯಾರು ಯಾವ ಕ್ಷೇತ್ರಕ್ಕೆ?
ಬೆಂಗಳೂರು, ಜನವರಿ 04: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದ ಆಡಳಿತರೂಢ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈ ಹಿನ್ನಲೆ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನಾದರೂ ಗೆಲ್ಲಲು ಕಾಂಗ್ರೆಸ್ ಹೈಕಮಾಂಡ್ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.
ಹೌದು, ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಬಾಕಿ ಇದೆ. ಹೀಗಾಗಿ ಕಾಂಗ್ರೆಸ್ ಈಗಿನಿಂದಲೇ ಗೆಲ್ಲಬಲ್ಲ ಅಭ್ಯರ್ಥಿಗಳ ಹುಡುಕಾಟ ಶುರು ಮಾಡಿದೆ. ಬಿಜೆಪಿ ಹಾಕಿದ ಮಂತ್ರವನ್ನೇ ತಿರುಮಂತ್ರ ಮಾಡಿ ಕರ್ನಾಟಕದಲ್ಲಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್ ಸಜ್ಜಾಗಿದೆ.

ಈಗಾಗಲೇ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕೇಂದ್ರ ಸಚಿವರನ್ನೇ ಸ್ಪರ್ಧೆಗೆ ಇಳಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿಯ ಕೇಂದ್ರ ಸಚಿವರು ಸ್ಪರ್ಧೆ ಮಾಡಿದ್ದರು.ಹೀಗಾಗಿ ಬಿಜೆಪಿ ಮೂರು ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಿ, ಅಧಿಕಾರಕ್ಕೆ ಏರಲು ನೆರವಾಗಿತ್ತು. ಈ ತಂತ್ರಗಾರಿಕೆಯನ್ನ ರಾಜ್ಯದಲ್ಲಿ ತರುವ ನಿಟ್ಟಿನಲ್ಲಿ ಕೈ ಹೈಕಮಾಂಡ್ ಮುಂದಾಗಿದೆ.
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದು ಬಿಜೆಪಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ತಂತ್ರ ಹಾಕಿಕೊಂಡಿರುವ ಕಾಂಗ್ರೆಸ್, ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅದರ ಭಾಗವಾಗಿ ರಾಜ್ಯದಲ್ಲಿ ಬರೋಬ್ಬರಿ 11 ಸಚಿವರನ್ನು ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸಿದೆ ಎಂದು ಹೇಳಲಾಗಿದೆ. ಅದರಂತೆ ಯಾವ ಕ್ಷೇತ್ರ ಕಾಂಗ್ರೆಸ್ ಕಠಿಣವಾಗಲಿದೆಯೋ ಆ ಕ್ಷೇತ್ರದಲ್ಲಿ ಪ್ರಭಾವಿ ಸಚಿವರನ್ನೇ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.
ಯಾರು, ಯಾವ ಕ್ಷೇತ್ರಕ್ಕೆ?
ಇನ್ನೂ ಯಾವ ಪ್ರಭಾವಿ ಸಚಿವರು ಯಾವ ಕ್ಷೇತ್ರದಿಂದ ಸ್ಪರ್ಧೆ ಎಂಬುದನ್ನ ನೋಡುವುದಾದರೇ, ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಸಂಸದರಿದ್ದಾರೆ. ಆದರೆ, ಮುಂದಿನ ಲೋಕಸಭಾ ಚುಣಾವಣೆಯಲ್ಲಿ ಮಂಗಳ ಸುರೇಶ್ ಅಂಗಡಿಯವರು ಸ್ಪರ್ಧಿಸುವುದು ಡೌಟ್ ಎನ್ನಲಾಗಿದೆ.
ಒಂದು ವೇಳೆ ಮಂಗಳ ಅಂಗಡಿಯವರು ಸ್ಪರ್ಧಿಸಿದರೇ ಗೆಲ್ಲುವು ಕಷ್ಟ ಸಾಧ್ಯ ಎನ್ನಲಾಗಿದೆ. ಹೀಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನ ಕೈ ತೆಕ್ಕೆಗೆ ತೆಗೆದುಕೊಳ್ಳಲು ಹೈಕಮಾಂಡ್ ತೆಗೆದುಕೊಳ್ಳಲು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸಲಿದೆ ಎನ್ನಲಾಗಿದೆ.

ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಒಲವು ತೋರಿರುವ ಸಚಿವ ಕೆ ಎನ್ ರಾಜಣ್ಣ ಅವರನ್ನ ತುಮಕೂರು ಲೋಕಸಭಾ ಕ್ಷೇತ್ರದಿಂದ ಹಾಗೂ ಚಾಮರಾಜನಗರ ಎಸ್ಸಿ ಮೀಸಲು ಕ್ಷೇತ್ರಕ್ಕೆ ಹೆಚ್.ಸಿ.ಮಹದೇವಪ್ಪ ಸ್ಪರ್ಧೆ ಮಾಡಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ತೀವ್ರ ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಾಗಮಂಗಲ ಶಾಸಕ ಹಾಗೂ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಸ್ಪರ್ಧೆ ಮಾಡೋ ಸಾಧ್ಯತೆ ಇದೆ. ಬಳ್ಳಾರಿಯಿಂದ ಸಚಿವ ಬಿ.ನಾಗೇಂದ್ರ, ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾರ್ಮಿಕಿ ಸಚಿವ ಸಂತೋಷ್ ಲಾಡ್ ಸ್ಪರ್ಧೆ ಮಾಡುವಂತೆ ಹೈಕಮಾಂಡ್ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೋಲಾರ ಮತ್ತು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಗೃಹ ಸಚಿವ ಡಾಕ್ಟರ್ ಜಿ.ಪರಮೇಶ್ವರ್, ಬೆಂಗಳೂರು ಉತ್ತರದಿಂದ ಕೃಷ್ಣಭೈರೇಗೌಡ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ 10 ಸಚಿವರನ್ನು ಪಟ್ಟಿ ಮಾಡುವಂತೆ ಸೂಚನೆ ನೀಡಿದೆ. ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಚಿವರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ. ಇತ್ತ 2021 ರ ಬೆಳಗಾವಿ ಉಪಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಸೋಲು ಅನುಭವಿಸಿದ್ದರು, ಹೀಗಾಗಿ ತನ್ನ ಬದಲಿಗೆ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಸತೀಶ್ ಜಾರಕಿಹೊಳಿ ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇತ್ತ ರಾಮಲಿಂಗಾರೆಡ್ಡಿ ಸಹ ಪುತ್ರಿ ಸೌಮ್ಯರೆಡ್ಡಿ ಅವರಿಗೆ ಟಿಕೆಟ್ ಕೇಳಿದ್ದಾರೆ ಎನ್ನಲಾಗಿದೆ.












Click it and Unblock the Notifications