ಅಮಿತ್ ಶಾ ರಾಜ್ಯ ಭೇಟಿ ರದ್ದು, ಯಡಿಯೂರಪ್ಪಗೆ ಹೆಚ್ಚಿನ ಪವರ್!
ಬೆಂಗಳೂರು, ಆಗಸ್ಟ್ 03 : ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಉಸ್ತುವಾರಿ ಮುಂತಾದ ವಿಚಾರಗಳಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಪೂರ್ಣ ಸಂತಂತ್ರ್ಯ ನೀಡಲಾಗಿದೆ. ಆದ್ದರಿಂದ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರ್ನಾಟಕ ಭೇಟಿ ರದ್ದಾಗಿದೆ.
ಜುಲೈ ಅಂತ್ಯದಲ್ಲಿ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಬೇಕಿತ್ತು. ರಾಜ್ಯದ ನಾಯಕರ ಜೊತೆ ಲೋಕಸಭೆ ಚುನಾವಣೆ 2019ರ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ, ಲೋಕಸಭೆ ಕಲಾಪದ ಹಿನ್ನಲೆಯಲ್ಲಿ ಅಮಿತ್ ಶಾ ಭೇಟಿ ಮುಂದೂಡಿಕೆಯಾಗಿತ್ತು.
ಆಗಸ್ಟ್‌ನಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಅಮಿತ್ ಶಾ ರಾಜ್ಯ ಭೇಟಿ ಮುಂದಕ್ಕೆ ಹೋಗಿದೆ. ಯಡಿಯೂರಪ್ಪ ಅವರಿಗೆ ಚುನಾವಣೆ ತಯಾರಿಯ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಸುವುದಾಗಿ ಎರಡೂ ಪಕ್ಷಗಳು ಘೋಷಣೆ ಮಾಡಿವೆ. ಆದ್ದರಿಂದ, ಬಿಜೆಪಿ ಈ ಬಾರಿಯ ಚುನಾವಣೆಯನ್ನು ಪತಿಷ್ಠೆಯ ಪ್ರಶ್ನೆಯಾಗಿ ತೆಗೆದುಕೊಂಡಿದೆ...

ಅಮಿತ್ ಶಾ ಭೇಟಿ ರದ್ದು
ಜೂನ್ ತಿಂಗಳಿನಲ್ಲಿ ಅಹಮದಾಬಾದ್‌ನಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಆಗ ರಾಜ್ಯಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಜುಲೈ ಅಂತ್ಯಕ್ಕೆ ಅವರು ರಾಜ್ಯಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಅದನ್ನು ಮುಂದೂಡಲಾಗಿತ್ತು.
ಆದರೆ,ಲೋಕಸಭೆ ಕಲಾಪವಿದ್ದ ಕಾರಣ ಅಮಿತ್ ಶಾ ರಾಜ್ಯಕ್ಕೆ ಬಂದಿರಲಿಲ್ಲ. ಈಗ ಅವರ ಪ್ರವಾಸ ರದ್ದಾಗಿದೆ. ಯಡಿಯೂರಪ್ಪ ಅವರೇ ಲೋಕಸಭೆ ಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.

ಯಡಿಯೂರಪ್ಪ ಅವರಿಗೆ ಅಧಿಕಾರ
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20+ ಸ್ಥಾನಗಳನ್ನು ಗೆಲ್ಲಬೇಕು ಎಂದು ಅಮಿತ್ ಶಾ ಈಗಾಗಲೇ ಸೂಚನೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಚುನಾವಣಾ ತಂತ್ರ ರೂಪಿಸುವ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರ ತಂತ್ರ ಮುಂತಾದವುಗಳ ಬಗ್ಗೆ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿ ಪ್ರಚಾರವನ್ನು ನಡೆಸಿ ಹೋಗಲಿದ್ದಾರೆ. ಯಡಿಯೂರಪ್ಪ ಅವರ ಜೊತೆ ಹೈಕಮಾಂಡ್ ನಿರಂತರ ಸಂಪರ್ಕದಲ್ಲಿದ್ದು ನಿರ್ದೇಶನ ನೀಡಲಿದೆ.

ವಿಧಾನಸಭೆ ಚುನಾವಣೆ ಪಾಠ
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ, 104 ಸ್ಥಾನಗಳನ್ನುಗಳಿಸಲು ಮಾತ್ರ ಸಾಧ್ಯವಾಯಿತು. ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ನಾಯಕರನ್ನು ಕಡೆಗಣಿಸಲಾಯಿತು ಎಂಬ ಆರೋಪ ಕೇಳಿಬಂದಿತ್ತು.
ಆದ್ದರಿಂದ, ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ನಾಯಕರ ತಂತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಕೇಂದ್ರ ನಾಯಕರ ತಂಡ ಚುನಾವಣೆ ಘೋಷಣೆಯಾದ ಬಳಿಕ ರಾಜ್ಯಕ್ಕೆ ಬಂದು ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ.

ರಣ ತಂತ್ರ ರೂಪಿಸಲಿದ್ದಾರೆ
2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿದ್ದವು.
ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಲೋಕಸಭೆ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಆದ್ದರಿಂದ, ಬಿಜೆಪಿ ಈ ಬಾರಿಯ ಚುನಾವಣೆಗೆ ರಣತಂತ್ರ ರೂಪಿಸುತ್ತಿದೆ.












Click it and Unblock the Notifications