Lok Sabha Elections 2024: ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಯಾರಿಗೆ ಹೆಚ್ಚು ಲಾಭ? ವಿವರ, ವಿಶ್ಲೇಷಣೆ
ಬೆಂಗಳೂರು, ಜುಲೈ 12: ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯಲಿದೆ. ಇದು ಕಾಂಗ್ರೆಸ್ ನೇತೃತ್ವದಲ್ಲಿ ನಡೆಯುತ್ತಿದ್ದು, ಸಭೆಗೆ ಸಮಾನ ಮನಸ್ಕ ಪಕ್ಷಗಳನ್ನು ಆಹ್ವಾನಿಸಲಾಗಿದೆ. ಬಿಹಾರದ ಪಟ್ನಾದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ಕಳೆದ ತಿಂಗಳು ನಡೆದಿತ್ತು. ಇತ್ತ ಕಡೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸಹ ತನ್ನ ಸಮಾನ ಮನಸ್ಕ ಪಕ್ಷಗಳನ್ನು ಒಂದುಗೂಡಿಸುವಲ್ಲಿ ನಿರತವಾಗಿದೆ.
ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ನಾಯಕ, ನಟ ಪವನ್ ಕಲ್ಯಾಣ್ ಜೊತೆ ಬಿಜೆಪಿ ಉತ್ತಮ ಸಂಬಂಧ ಹೊಂದಿದೆ. ಈ ಮೂವರೊಂದಿಗೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಹಾಗೂ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಮುನ್ನೆಲೆಗೆ ಬಂದ ಮೈತ್ರಿ ಮಾತುಕತೆ
ಕರ್ನಾಟಕದ ವಿಷಯಕ್ಕೆ ಬಂದರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದರಿಂದ ಎರಡೂ ಪಕ್ಷಗಳಿಗೆ ಒಳ್ಳೆಯದು ಎಂದು ಹಲವು ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಮೈತ್ರಿಯಿಂದ ಬಿಜೆಪಿಗೆ ಅಲ್ಪ ಪ್ರಮಾಣದ ಲಾಭವಾಗಲಿದೆ. ಈ ಹಿನ್ನೆಲೆಯಲ್ಲಿ ಮೈತ್ರಿ ಬೇಡವೆಂದು ಕೆಲವು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿಯನ್ನು ಮಾಡಿಕೊಂಡಿದ್ದವು. ಆದರೆ, ಕರ್ನಾಟಕದಲ್ಲಿ ಕೇವಲ ಒಂದು ಸ್ಥಾನ ಗಳಿಸುವಲ್ಲಿ ಮೈತ್ರಿಕೂಟ ಯಶಸ್ವಿಯಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಕರ್ನಾಟಕದಲ್ಲಿ ಮೈತ್ರಿ ರಾಜಕಾರಣ ಸಫಲವಾಗುವುದಿಲ್ಲವೆಂಬ ಮಾತುಗಳೂ ಕೇಳಿಬಂದಿವೆ.

ಇದೀಗ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ, ಎರಡು ಪಕ್ಷಗಳು ಪರಸ್ಪರ ಮತಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.
ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.36 ಹಾಗೂ ಜೆಡಿಎಸ್ ಶೇ.14ರಷ್ಟು ಮತಗಳನ್ನು ಪಡೆದಿದ್ದವು. ಆದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಾತ್ರ ಶೇ.52 ರಷ್ಟು ಗಳಿಸಿತ್ತು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಜೆಡಿಎಸ್‌ಗೆ ಬಿಜೆಪಿ ಅಗತ್ಯವಿದೆ. ಆದರೆ, ಬಿಜೆಪಿಗೆ ಜೆಡಿಎಸ್ ಅನಿವಾರ್ಯವಲ್ಲವೆಂಬುದು ತಿಳಿದುಬರುತ್ತದೆ.
ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಯಾವುದೇ ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿಲ್ಲ. ವಿಚಿತ್ರವೆಂದರೆ, ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದ್ದರೂ ಜೆಡಿಎಸ್‌ನ ಕುಮಾರಸ್ವಾಮಿ ಹೆಚ್ಚು ಧ್ವನಿ ಎತ್ತುತ್ತಿದ್ದಾರೆ. ಇದು ಬಿಜೆಪಿಗೆ ಸಹಾಯ ಮಾಡುವ ತಂತ್ರವೂ ಆಗಿರಬಹುದು ಎಂದು ಮೂಲಗಳು ತಿಳಿಸಿವೆ.
ಮೈತ್ರಿಯಿಂದ ಜೆಡಿಎಸ್‌ಗೆ ಲಾಭ, ಬಿಜೆಪಿಗೆ ನಷ್ಟ
ಕಳೆದ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಬಿಜೆಪಿ ಮತ್ತೊಮ್ಮೆ ಹೋರಾಡಲು ಅಣಿಯಾಗುತ್ತಿದೆ. ಆದರೆ, ಜೆಡಿಎಸ್ ತನ್ನ ಭದ್ರ ಕೋಟೆಯಲ್ಲೇ ನೆಲಕಚ್ಚಿದೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಜೆಡಿಎಸ್ ಸಾಧನೆ ಅಷ್ಟೊಂದು ಉತ್ತಮವಾಗಿಲ್ಲ.
ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಮೈತ್ರಿಯೂ ಜೆಡಿಎಸ್‌ಗೆ ಹೆಚ್ಚು ಲಾಭ ತಂದು ಕೊಡಲಿದೆ ಎಂದು ಹೇಳಬಹುದು. ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳಿಂದ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಈಗ ಬಿಜೆಪಿಯಿಂದ ಆಯ್ಕೆಯಾಗಿರುವ ಸಂಸದರು ಹಿಂದೆ ಸರಿಯಬೇಕಾಗುತ್ತದೆ. ಇದರಿಂದ ಜೆಡಿಎಸ್‌ಗೆ ಲಾಭವಾಗುತ್ತದೆ.
ಉತ್ತರ ಕರ್ನಾಟಕ, ಕರಾವಳಿ ಭಾಗಗಳಲ್ಲಿ ಪ್ರಾಬಲ್ಯವಿರದ ಜೆಡಿಎಸ್‌ನಿಂದ ಬಿಜೆಪಿಗೆ ಹೆಚ್ಚು ಮತಗಳು ಬರುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ, ಬಿಜೆಪಿ ನಷ್ಟವನ್ನು ಅನುಭವಿಸಬೇಕಾಗತ್ತದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications