ಲೋಕಸಭಾ ಚುನಾವಣೆ 2024: ಕಾಂಗ್ರೆಸ್ ಸರ್ಕಾರದ ಮೇಲಾಗುವ ಪರಿಣಾಮವೇನು?
ಬೆಂಗಳೂರು, ಅಕ್ಟೋಬರ್ 23: 2024 ರ ಲೋಕಸಭಾ ಚುನಾವಣೆಯ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಏಕೆಂದರೆ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಮಾತ್ರವಲ್ಲದೆ ಸಚಿವರಿಗೂ ಸಹ ಪಕ್ಷದ ಗೆಲುವಿಗೆ ಟಾಸ್ಕ್ ನೀಡಿದೆ.
ಕೊಟ್ಟಿರುವ ಟಾಸ್ಕ್ ಗೆಲ್ಲಲು ವಿಫಲರಾದವರಿಗೆ ಸಚಿವ ಸಂಪುಟದಿಂದ ಗೇಟ್ ಪಾಸ್ ಸಿಗುವ ಸಾಧ್ಯತೆಯಿದೆ. ಅಲ್ಲದೆ ಹೊಸ ಮುಖಗಳಿಗೆ ಅವಕಾಶ ನೀಡಲಾಗುವುದು ಎನ್ನಲಾಗಿದೆ. ಪಕ್ಷವು ಗಮನಾರ್ಹ ಸುಧಾರಣೆಯನ್ನು ಮಾಡಲು ವಿಫಲವಾದರೆ ಕೆಲವು ಮಂತ್ರಿಗಳನ್ನು ಬಲಿಪಶುಗಳಾಗಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಮೂಲಗಳು ತಿಳಿಸಿದೆ.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಬರಿ ಒಂದು ಸ್ಥಾನವನ್ನು ಗೆದ್ದಿದೆ (ಡಿಕೆ ಸುರೇಶ್ ಮೂಲಕ ಬೆಂಗಳೂರು ಗ್ರಾಮಾಂತರ). ಕೆಲವು ನಾಯಕರನ್ನು ಕಣಕ್ಕಿಳಿಸಲು ಕೆಲವು ಅಭ್ಯರ್ಥಿಗಳ ಸೋಲಿನಲ್ಲಿ ಪಕ್ಷದೊಳಗಿನ ಕೆಲವರು ನಕರಾತ್ಮಕವಾಗಿ ಪಾತ್ರ ವಹಿಸಬಹುದು ಎಂದು ಕೂಡ ಶಂಕಿಸಲಾಗಿದೆ.
ಈ ಮಧ್ಯೆ, ಹಳೇ ಮೈಸೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಕಠಿಣವಾಗಬಹುದು. ಹಾಗಾಗಿ, ಕೆಲವು ತಲೆಗಳು ರಾಜಕೀಯವಾಗಿ ಉರುಳಬೇಕಾಗಬಹುದು. ಲೋಕಸಭಾ ಚುನಾವಣೆಯ ನಂತರ ಹೊಸ ಮುಖಗಳಿಗೆ ದಾರಿ ಮಾಡಿಕೊಡಬಹುದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ. ಹೈಕಮಾಂಡ್ ಪುನಾರಚನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಕೆಲವು ನಾಯಕರು ಸಿದ್ದರಾಮಯ್ಯ ಸಂಪುಟಕ್ಕೂ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಲೋಕಸಭೆ ಚುನಾವಣೆ ನಂತರ ಖಂಡಿತ ಬದಲಾವಣೆ ಆಗಲಿದ್ದು, ಪಕ್ಷಕ್ಕೆ ಲೋಕಸಭೆ ಸ್ಥಾನ ಗೆಲ್ಲಲು ಸಾಧ್ಯವಾಗದಿದ್ದರೆ ಸಚಿವರಾಗಿ ಏಕೆ ಮುಂದುವರಿಯಬೇಕು ಎಂದು ಸಿದ್ದರಾಮಯ್ಯನವರ ನಿಷ್ಠಾವಂತ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ. ಆದರೆ ಅವರು ಸಿಎಂ ಹುದ್ದೆ ಬದಲಾವಣೆಗೆ ಸ್ಪಷ್ಟತೆ ಇಲ್ಲ. ಪಕ್ಷವು ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವತ್ತ ಗಮನಹರಿಸಿದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದರೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ತಮ್ಮ ಪಕ್ಷ 25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಸಂಪುಟ ಪುನಾರಚನೆಗೆ ಪೂಕರ ಎಂಬಂತೆ ಶಾಸಕ ಅಶೋಕ್ ಪಟ್ಟಣ ಮಾತನಾಡಿ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂಬುದು ನಿಜ. ಈಗಿನ ಸಂಪುಟಕ್ಕೆ ಎರಡೂವರೆ ವರ್ಷ ಆದ ತಕ್ಷಣ ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಅವರು ನಮಗೆ ಭರವಸೆ ನೀಡಿದ್ದಾರೆ ಎಂದರು. ಅಲ್ಲದೇ ಅದೃಷ್ಟವಿದ್ದವರು ಸಚಿವರಾಗುತ್ತಾರೆ. ಇಲ್ಲದವರು ಮಾತನಾಡುತ್ತೇವೆ. ನಮ್ಮ ತಂದೆ, ತಾಯಿ ಇಬ್ಬರೂ ಶಾಸಕರಾಗಿದ್ದರು. ಎಲ್ಲ ಇದ್ದರೂ, ಅದೃಷ್ಟ ಇಲ್ಲ. ನನ್ನ ನಕ್ಷತ್ರ ಸರಿಯಿಲ್ಲ ಎಂದು ಕಾಣುತ್ತದೆ. ಮುಂದೆ ಪೂಜೆ ಪುನಸ್ಕಾರ ಮಾಡಬೇಕು. ಆದರೆ ನಾವು ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ಅಸಮಾಧಾನ ವ್ಯಕ್ತಪಸಿದ್ದಾರೆ.












Click it and Unblock the Notifications