ಲೋಕಸಭೆ ಚುನಾವಣೆ; ಕರ್ನಾಟಕದಲ್ಲಿ ಎಷ್ಟು ಬಿಜೆಪಿ ಅಭ್ಯರ್ಥಿ ಗೆಲುವು?
ಬೆಂಗಳೂರು, ಫೆಬ್ರವರಿ 27; ರಾಜಕೀಯ ಪಕ್ಷಗಳು ಮತ್ತು ಕೇಂದ್ರ ಚುನಾವಾಣಾ ಆಯೋಗ 2024ರ ಲೋಕಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಮಾರ್ಚ್ 10ರ ಬಳಿಕ ಚುನಾವಣೆ ವೇಳಾಪಟ್ಟಿ ಘೋಷಣೆ ಆಗಲಿದೆ ಎಂಬ ಸುದ್ದಿಗಳು ಹಬ್ಬಿವೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿಗೆ ಎಷ್ಟು ಸ್ಥಾನ?.
2024ರ ಲೋಕಸಭೆ ಚುನಾವಣೆ ಕುರಿತು Janmatpolls ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಕ್ಷೇತ್ರಗಳ ಕುರಿತು ಸಮೀಕ್ಷೆ ಮಾಡಿದೆ. ಇದರಲ್ಲಿ ಕರ್ನಾಟಕವೂ ಸೇರಿದೆ. ರಾಜ್ಯದಲ್ಲಿ 28 ಕ್ಷೇತ್ರಗಳಿದ್ದು, ಬಿಜೆಪಿ ರಾಜ್ಯದಲ್ಲಿ ಪ್ರತಿಪಕ್ಷವಾಗಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ. ಎಷ್ಟು ಸೀಟು ಜೆಡಿಎಸ್‌ಗೆ ಸಿಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಚುನಾವಣಾ ಪೂರ್ವ ಸಮೀಕ್ಷೆ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಿದ್ದು, ಕಾಂಗ್ರೆಸ್‌ಗೆ ತಲೆ ನೋವು ತಂದಿದೆ.
23 ಅಭ್ಯರ್ಥಿಗಳು ಗೆಲುವು: Janmatpolls ಎಲ್ಲಾ ರಾಜ್ಯಗಳಲ್ಲಿ ಎಷ್ಟು ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ? ಎಂದು ಸಮೀಕ್ಷೆ ಮಾಡಿದೆ. ಎನ್‌ಡಿಎ ಮೈತ್ರಿಕೂಟ ಹೊರತುಪಡಿಸಿ ಕೇವಲ ಬಿಜೆಪಿಯ 310 ಅಭ್ಯರ್ಥಿಗಳು ಗೆಲ್ಲಬಹುದು ಎಂದು ಸಮೀಕ್ಷೆಯ ವರದಿ ಅಂದಾಜಿಸಿದೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕನಿಷ್ಠ 23, ಗರಿಷ್ಠ 24 ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಸಮೀಕ್ಷೆ ಅಂದಾಜಿಸಿದೆ. ಈ ಮೂಲಕ ಕರ್ನಾಟಕದ ಆಡಳಿತ ಪಕ್ಷವಾದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾಗಲಿದೆ ಎಂದು ಸಮೀಕ್ಷೆ ಹೇಳಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಜಯಗಳಿಸಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಸ್ತಿತ್ವದಲ್ಲಿತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.
Lok Sabha Elections 2024 State Wise Opinion
— Janmat polls (@Janmatpolls) February 23, 2024
BJP is not seen crossing the 370 mark anywhere.#LokSabhaElection2024 pic.twitter.com/ZT2fQzRQtE
ಆದರೆ ಚುನಾವಣೆಯಲ್ಲಿ ಉಭಯ ಪಕ್ಷಗಳಿಗೆ ಭಾರೀ ಮುಖಭಂಗವಾಗಿತ್ತು. ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ, ಜೆಡಿಎಸ್ ಹಾಸನ ಕ್ಷೇತ್ರವನ್ನು ಮಾತ್ರ ಗೆದ್ದಿದ್ದವು. ತುಮಕೂರಿನಲ್ಲಿ ಎಚ್. ಡಿ. ದೇವೇಗೌಡ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಸಹ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಲ್ಲಿ ಸೋತಿದ್ದರು.
ಮಂಡ್ಯದಲ್ಲಿ ಬಿಜೆಪಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಬೆಂಬಲಿಸಿತ್ತು. ಈ ಬಾರಿ ಎಲ್ಲಾ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿ ರಾಜ್ಯದ ಪ್ರತಿಪಕ್ಷವಾಗಿದೆ. ಜೆಡಿಎಸ್ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದೆ. ಜೆಡಿಎಸ್ ರಾಜ್ಯದಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆ ಎದುರಿಸಲಿದೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕದ ಮತ್ತು ತೆಲಂಗಾಣ ಪ್ರಮುಖವಾಗಿವೆ. Janmatpolls ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ. ತೆಲಂಗಾಣದಲ್ಲಿ ಬಿಜೆಪಿ ಕನಿಷ್ಠ 3, ಗರಿಷ್ಠ 4 ಸ್ಥಾನ ಗೆಲ್ಲಲಿದೆ ಎಂದು ವರದಿ ಅಂದಾಜಿಸಿದೆ.
ಸಮೀಕ್ಷೆಯ ವರದಿಯಂತೆ ಆಂಧ್ರ ಪ್ರದೇಶದಲ್ಲಿ 2 ಸ್ಥಾನದಲ್ಲಿ ಬಿಜೆಪಿ ಗೆಲ್ಲಲಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಪಕ್ಷ ಖಾತೆಯನ್ನು ತೆರೆಯುವುದಿಲ್ಲ. ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿಯೇ ಬಿಜೆಪಿ ಪ್ರಬಲವಾಗಿದ್ದು, ಇಲ್ಲೇ ಹೆಚ್ಚಿನ ಸ್ಥಾನಗಳಿಸಲಿದೆ.
ಸೀಟು ಹಂಚಿಕೆ?; ಬಿಜೆಪಿ ಜೆಡಿಎಸ್ ಮೈತ್ರಿ ಬಳಿಕ ಕುತೂಹಲ ಮೂಡಿಸಿರುವುದು ಸೀಟು ಹಂಚಿಕೆ. ಜೆಡಿಎಸ್ 5 ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದೆ ಎಂಬ ಸುದ್ದಿಗಳಿವೆ. ಆದರೆ ಬಿಜೆಪಿ 3 ಸ್ಥಾನ ನೀಡಬಹುದು ಎಂಬ ಮಾತಿದೆ. ಹಾಸನ ಕ್ಷೇತ್ರ ಜೆಡಿಎಸ್‌ಗೆ ಸಿಗಲಿದೆ. ಮಂಡ್ಯದ ಕಡೆ ಎಲ್ಲರ ಕಣ್ಣಿದೆ. ಸೀಟು ಹಂಚಿಕೆ ಬಗ್ಗೆ ಶೀಘ್ರದಲ್ಲೇ ಉಭಯ ಪಕ್ಷಗಳ ನಾಯಕರು ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.












Click it and Unblock the Notifications