Lok Sabha Election 2024: ಬಿಜೆಪಿ ಟಿಕೆಟ್‌ಗಾಗಿ ಸುಮಲತಾ ಪಟ್ಟು ಹಿಡಿಯಬೇಕಾದ ಅನಿವಾರ್ಯತೆ ಬಂದಿದ್ದೇಕೆ?

ಮಂಡ್ಯ, ಫೆಬ್ರವರಿ 22: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾದ ಬಳಿಕ ಮಂಡ್ಯ ಸಂಸದೆ ಸುಮಲತಾ ಅವರ ತೀರ್ಮಾನ ಏನಿರಬಹುದು ಎಂಬ ಕುತೂಹಲ ಜನರನ್ನು ಕಾಡುತ್ತಲೇ ಇತ್ತು. ಇದಕ್ಕೆ ಉತ್ತರ ಇವತ್ತಿನವರೆಗೂ ಸಿಕ್ಕಿಲ್ಲವಾದರೂ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ಪಕ್ಷೇತರರಾಗಿ ಗೆದ್ದು ಬೀಗಿದ ಅವರು ಬಿಜೆಪಿ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಹೇಳಿಕೆ ನೀಡುತ್ತಾ ಬಿಜೆಪಿಯ ಟಿಕೆಟ್‌ಗಾಗಿ ಪಟ್ಟು ಹಿಡಿಯಬೇಕಾದ ಅನಿವಾರ್ಯತೆ ಬಂದಿದ್ದೇಕೆ? ಎಂಬ ಪ್ರಶ್ನೆ ಮೂಡದಿರದು.

ಸುಮಲತಾ ಅಂಬರೀಶ್ ಅವರು ಹಾಲಿ ಸಂಸದರಾಗಿದ್ದಾರೆ. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಜತೆಗೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ ವಿನಃ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ. ಹೀಗಾಗಿ ಅವರು ಬಿಜೆಪಿ ಮೂಲಕ ಟಿಕೆರ್ಟ್‌ಗಾಗಿ ಇಷ್ಟೆಲ್ಲ ಸರ್ಕಸ್ ಮಾಡಬೇಕಾ? ಅವರು ಯಾವುದೇ ಪಕ್ಷದಿಂದ ಗೆದ್ದಿದ್ದರೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕಿತ್ತು. ಆದರೆ ಸುಮಲತಾ ಅವರು ಯಾರದ್ದೇ ಹಂಗಿನಲ್ಲಿಲ್ಲ. ಅವರು ಪಕ್ಷೇತರರಾಗಿ ಗೆದ್ದು ಬಂದವರು. ಅವರಿಗೆ ಜನ ಬೆಂಬಲವೇ ಅವರನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದೆ.

Lok Sabha Election 2024: Why is BJP Ticket Necessary For Sumalatha Ambareesh?

ಒಬ್ಬ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಐದು ವರ್ಷಗಳ ಕಾಲ ಸಂಸದರಾಗಿ ಕೆಲಸ ಮಾಡಿದವರು ಇವತ್ತು ಬಿಜೆಪಿ ನಾಯಕರ ಮುಂದೆ ಟಿಕೆಟ್ ಗಾಗಿ ಕೈಯೊಡ್ಡಿ ನಿಲ್ಲ ಬೇಕಾ? ಎಂಬ ಪ್ರಶ್ನೆಗಳನ್ನು ಅವರ ಅಭಿಮಾನಿಗಳು ಕೇಳುತ್ತಿದ್ದಾರೆ. ಕಳೆದ ಬಾರಿ ಅವರ ವಿರುದ್ಧ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಹೋರಾಟ ನಡೆಸಿದಾಗಲೂ ಅವರನ್ನು ಜನ ಬೆಂಬಲಿಸಿದ್ದರು. ಅವರಿಗೆ ಬೆಂಬಲವಾಗಿ ಕೇವಲ ಜನ ಮಾತ್ರವಲ್ಲದೆ, ಪಕ್ಷ ಬೇಧ ಮರೆತು ಕೆಲವು ನಾಯಕರು, ಚಿತ್ರರಂಗದ ಕಲಾವಿದರು ಹೀಗೆ ಪತ್ಯಕ್ಷ ಮತ್ತು ಪರೋಕ್ಷವಾಗಿ ಹಲವರು ತಮ್ಮ ಸಹಕಾರ ನೀಡಿದ್ದರು.

ಅವತ್ತು ನಡೆದಿದ್ದು ಸ್ವಾಭಿಮಾನದ ಯುದ್ಧ

2019ರಲ್ಲಿ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆಯನ್ನು ನೆನಪಿಸಿಕೊಳ್ಳುವುದಾದರೆ ಅದು ಕೇವಲ ಚುನಾವಣೆಯಾಗಿ ಉಳಿದಿರಲಿಲ್ಲ ಅದು ರಾಜಕೀಯ ಮತ್ತು ಸ್ವಾಭಿಮಾನದ ಯುದ್ಧವಾಗಿ ಬಿಂಬಿತವಾಗಿತ್ತು. ಸುಮಲತಾ ಅವರು ಮಂಡ್ಯದಿಂದ ಸ್ಪರ್ಧಿಸಲೇ ಬೇಕೆಂಬ ಒತ್ತಾಸೆ ಮಂಡ್ಯದ ಜನರದ್ದಾಗಿತ್ತು. ಜತೆಗೆ ಅಂಬರೀಶ್ ಅವರ ನಿಧನದ ಅನುಕಂಪ ಇಡೀ ಜಿಲ್ಲೆಯನ್ನಾವರಿಸಿತ್ತು. ಜತೆಗೆ ಕುಟುಂಬ ರಾಜಕಾರಣದ ಆಕ್ರೋಶ ಜನರಲ್ಲಿ ಎದ್ದು ಕಾಣಿಸುತ್ತಿತ್ತು. ಇದೆಲ್ಲವೂ ಸುಮಲತಾ ಅವರನ್ನು ಗೆಲ್ಲಿಸಲು ಸಹಕಾರಿಯಾಯಿತು.

Lok Sabha Election 2024: Why is BJP Ticket Necessary For Sumalatha Ambareesh?

ಚುನಾವಣೆ ಬಳಿಕ ಪಕ್ಷೇತರರಾಗಿ ಉಳಿದ ಸುಮಲತಾ ಅವರು ಸಮಯ ಸಿಕ್ಕಾಗಲೆಲ್ಲ ತಮ್ಮ ಎದುರಾಳಿ ಜೆಡಿಎಸ್ ನ ನಾಯಕರಿಗೆ ಟಾಂಗ್ ನೀಡುತ್ತಲೇ ಬಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹತ್ತಿರವಾದ ಅವರು ತಮ್ಮ ಬೆಂಬಲವನ್ನು ಬಿಜೆಪಿಗೆ ನೀಡಿದ್ದರು. ಅದರ ಪರಿಣಾಮ ಮಂಡ್ಯದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಾಗದೆ ಹೋದರೂ ಜೆಡಿಎಸ್ ನ್ನು ಸೋಲಿಸಲು ದಾರಿ ಮಾಡಿಕೊಟ್ಟಿತು ಎನ್ನುವುದನ್ನು ತಳ್ಳಿಹಾಕಲಾಗದು.

ಇವತ್ತು ಗೆಲುವು ಅವತ್ತಿನಷ್ಟು ಸುಲಭವಲ್ಲ

ಇಷ್ಟಕ್ಕೂ ಪಕ್ಷೇತರರಾಗಿದ್ದ ಸುಮಲತಾ ಅವರು ಬಿಜೆಪಿ ಬೆಂಬಲಕ್ಕೆ ನಿಂತಿದ್ದೇಕೆ? ಪಕ್ಷೇತರರಾಗಿಯೇ ಉಳಿಯಬಹುದಿತ್ತಲ್ಲವೆ? ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಲೇ ಬರುತ್ತಿದ್ದಾರೆ. ಆದರೆ ರಾಜಕೀಯ ಪ್ರವೇಶ ಮಾಡಿದವರಿಗಷ್ಟೆ ಗೊತ್ತಾಗುತ್ತದೆ. ಪಕ್ಷದ ಬೆಂಬಲವಿಲ್ಲದೆ ಹೋದರೆ ಕ್ಷೇತ್ರದಲ್ಲಿ ಕೆಲಸ ಮಾಡುವುದಾಗಲೀ, ಅನುದಾನ ತರುವುದಾಗಲೀ ಎಷ್ಟೊಂದು ಕಷ್ಟವಿದೆ ಎನ್ನುವುದು ಗೊತ್ತಾಗುತ್ತದೆ.

ಈಗಿನ ಪರಿಸ್ಥಿತಿಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಆಡಳಿತದತ್ತ ಒಂದೊಳ್ಳೆಯ ಅಭಿಪ್ರಾಯವಿದೆ. ಜತೆಗೆ ಚುನಾವಣೆಗೆ ನಿಂತು ಗೆಲ್ಲುವ ತನಕ ಮತದಾರರು ಅನುಕಂಪದಿಂದ ಮನೆ ಮಗಳಂತೆ ನೋಡಿದರೂ ಆ ನಂತರ ರಾಜಕಾರಣಿಯನ್ನು ನೋಡುವಂತೆಯೇ ನೋಡುತ್ತಾರೆ. ಜತೆಗೆ ತಮಗೇನು ಮಾಡಿದ್ದೀರ ಎಂಬ ಪ್ರಶ್ನೆ ಕೇಳುತ್ತಾರೆ. ಹಿಂದಿನ ಅನುಕಂಪ ಮತ್ತು ಜನ ಬೆಂಬಲವನ್ನು ಐದು ವರ್ಷಗಳ ಕಾಲ ಉಳಿಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಹೀಗಾಗಿ 2024ರ ಲೋಕಸಭಾ ಚುನಾವಣೆಯನ್ನು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆಲ್ಲುವುದು ಅಷ್ಟೊಂದು ಸುಲಭವಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತು.

Lok Sabha Election 2024: Why is BJP Ticket Necessary For Sumalatha Ambareesh?

ಸುಮಲತಾರ ರಾಜಕೀಯ ಭವಿಷ್ಯ ಏನಾಗಬಹುದು?

2024ರ ವೇಳೆಗೆ ಬದ್ಧ ವೈರಿಗಳಾಗಿರುವ ಜೆಡಿಎಸ್ ಬಿಜೆಪಿ ಜತೆಗೆ ಕೈಜೋಡಿಸುತ್ತದೆ ಎಂದು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಹೀಗಾಗಿ ಬಿಜೆಪಿಗೆ ಬೆಂಬಲ ನೀಡಿ ಆ ಪಕ್ಷದೊಂದಿಗೆ ಗುರುತಿಸಿಕೊಂಡರೆ ತಮ್ಮ ಹಾದಿ ಸುಗಮ ಎಂದೇ ನಂಬಿದ್ದರು. ಆದರೆ ಆಗಿದ್ದೇ ಬೇರೆ. ಜೆಡಿಎಸ್ ಬಿಜೆಪಿ ಜತೆ ಕೈಜೋಡಿಸಿದೆ. ಜತೆಗೆ ಮಂಡ್ಯ ಕ್ಷೇತ್ರದ ಮೇಲೆ ಕಣ್ಣಿಟ್ಟಿದೆ. ಈಗ ಸುಮಲತಾ ಅವರು ನನಗೆ ನಿಮ್ಮ ಬೆಂಬಲ ಬೇಡ ನನ್ನ ಪಾಡಿಗೆ ನಾನು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುವ ಪರಿಸ್ಥಿತಿಯಲ್ಲಿಲ್ಲ.

ಈಗ ಅವರು ಬಿಜೆಪಿ ಜತೆಗಿದ್ದುಕೊಂಡು ಬಿಜೆಪಿ ಟಿಕೆಟ್ ಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅವರು ಅದಕ್ಕಾಗಿ ತಮ್ಮದೇ ಆದ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ಈ ವಿಷಯದಲ್ಲಿ ಬಿಜೆಪಿಯ ರಾಜ್ಯ ನಾಯಕರಾಗಲೀ, ಕೇಂದ್ರ ನಾಯಕರಾಗಲೀ ಎಲ್ಲಿಯೂ ಮಾತನಾಡುತ್ತಿಲ್ಲ. ಈಗಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಸುಮಲತಾ ಅವರಿಗೆ ಬಿಜೆಪಿಗೆ ಬೆಂಬಲ ನೀಡಿದ್ದೇ ತಪ್ಪಾಯಿತಾ? ಎಂಬ ಭಾವನೆ ಮೂಡಿದ್ದರೂ ಅಚ್ಚರಿಯಿಲ್ಲ. ಬಿಜೆಪಿಯ ಕೇಂದ್ರ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಸಂಸದೆ ಸುಮಲತಾ ಅವರ ರಾಜಕೀಯ ಭವಿಷ್ಯ ನಿಂತಿರುವುದಂತು ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+