ಲೋಕಸಭಾ ಚುನಾವಣೆ 2024: ಜೆಡಿಎಸ್ ಜೊತೆಗಿನ ಮೈತ್ರಿ ಬಿಜೆಪಿಗೆ ಅನಿವಾರ್ಯವೇಕೆ..?
ಬೆಂಗಳೂರು, ಸೆಪ್ಟೆಂಬರ್ 15: ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುವ ಸಲುವಾಗಿ ಮೈತ್ರಿ ಮಾಡಿಕೊಳ್ಳುವ ವಿಚಾರ ಪ್ರಚಲಿತದಲ್ಲಿದೆ. ಇದರಲ್ಲಿ ಒಂದಷ್ಟು ಗೊಂದಲಗಳು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ ಮೈತ್ರಿ ಆಗಲ್ಲ ಅಥವಾ ಆಗುತ್ತೆ ಎಂಬ ಖಡಕ್ ಉತ್ತರ ಎರಡು ಪಕ್ಷಗಳ ನಾಯಕರಿಂದ ಬಾರದ ಕಾರಣದಿಂದ ಈ ವಿಚಾರ ಯಾವಾಗ ಬೇಕಾದರೂ ಮುನ್ನಲೆಗೆ ಬರಬಹುದು ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ವಿರೋಧಿಗಳಂತೆ ಹೋರಾಟ ಮಾಡಿದ್ದವು. ಅದರ ಲಾಭ ಕಾಂಗ್ರೆಸ್ ಗೆ ಆಯಿತು ಎಂಬುದು ಎಷ್ಟು ಸತ್ಯವೋ ಹೀನಾಯ ಸೋಲು ಕಂಡಿದ್ದು ಜೆಡಿಎಸ್ ಎಂಬುದು ಅಷ್ಟೇ ಸತ್ಯ. ಇನ್ನು ಅಧಿಕಾರದಲ್ಲಿದ್ದ ಬಿಜೆಪಿ 65ಕ್ಕೆ ಕುಸಿಯಲು, ಕೇವಲ 19 ಸ್ಥಾನಗಳಿಗೆ ಜೆಡಿಎಸ್ ಸಮಾಧಾನಪಟ್ಟುಕೊಳ್ಳುವಂತಾಯಿತು. ಇಷ್ಟೆಲ್ಲ ಆಗಲು ಕಾಂಗ್ರೆಸ್ ಬರೋಬ್ಬರಿ 135 ಸ್ಥಾನ ಪಡೆದುಕೊಳ್ಳಲು ಗ್ಯಾರಂಟಿ ಯೋಜನೆ ಘೋಷಿಸಿದ್ದೇ ಕಾರಣ ಎಂದು ಮೇಲ್ನೋಟಕ್ಕೆ ಎಲ್ಲ ನಾಯಕರು ಹೇಳುತ್ತಾ ಬರುತ್ತಿದ್ದಾರೆಯಾದರೂ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಿಗೂ ಜೆಡಿಎಸ್ ಸೋಲು ಬೇಕಾಗಿತ್ತು. ಅದಕ್ಕೆ ಕಾರಣವೂ ಇತ್ತು.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು 2023ರ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಣಗಣಿಸಿದ್ದವು. ಅದರಲ್ಲೂ ಬಿಜೆಪಿಗಿಂತ ಹೆಚ್ಚಾಗಿ ಕಾಂಗ್ರೆಸ್ ಗೆಲುವಿಗೆ ಸರ್ವ ರೀತಿಯ ತಂತ್ರ ಮಾಡಿದ್ದರು. ಅವರಿಗೆ ಬಿಜೆಪಿ ಜತೆಗೆ ಜೆಡಿಎಸ್ ನ್ನು ಸೋಲಿಸುವುದು ಅಜೆಂಡಾ ಆಗಿತ್ತು. ಜೆಡಿಎಸ್ ಹೆಚ್ಚು ಸ್ಥಾನ ಗೆದ್ದಷ್ಟೂ ಅದರ ಲಾಭ ಬಿಜೆಪಿಗೆ ಆಗುತ್ತದೆ. ಹೀಗಾಗಿ ಜೆಡಿಎಸ್ ಗೆ ಹೆಚ್ಚಿನ ಸ್ಥಾನ ಬರಬಾರದಂತೆ ನೋಡಿಕೊಳ್ಳುತ್ತಾ ಜೆಡಿಎಸ್ ಶಕ್ತಿಯನ್ನು ಕುಂದಿಸುವ ಕೆಲಸವನ್ನು ಮಾಡುತ್ತಾ ಹೋದರು.
ಅಲ್ಪಸಂಖ್ಯಾತರ ಸೆಳೆಯುವಲ್ಲಿ ಜೆಡಿಎಸ್ ವಿಫಲ
ಇನ್ನು ಕಳೆದ 2018ರ ಚುನಾವಣೆಯಲ್ಲಿ ಜೆಡಿಎಸ್ ನತ್ತ ಮೆದುಧೋರಣೆ ತೋರುತ್ತಾ ಕಾಂಗ್ರೆಸ್ ನ್ನು ಮಾತ್ರ ವಿರೋಧಿಸಿ, ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಕೈಹಿಡಿಯ ಬಹುದೆಂದು ನಂಬಿದ್ದ ಬಿಜೆಪಿಗೆ ಚುನಾವಣೆ ನಂತರ ಜೆಡಿಎಸ್ ಕೈಕೊಟ್ಟು ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಿತ್ತು. ಆ ನಂತರದ ಬೆಳವಣಿಗೆಯಲ್ಲಿ ಮೈತ್ರಿ ಸರ್ಕಾರ ಮುರಿದು ಬಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾವು-ಮುಂಗುಸಿಯಂತೆ ಕಿತ್ತಾಡಿದ್ದು ನಮ್ಮ ಮುಂದಿದೆ. ಇದೆಲ್ಲ ಬೆಳವಣಿಗೆಯಿಂದಲೇ ಜೆಡಿಎಸ್‌ನ್ನು ಎರಡು ರಾಷ್ಟ್ರೀಯ ಪಕ್ಷಗಳು ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವಂತೆ ನೋಡಿಕೊಂಡವು ಎನ್ನುವುದನ್ನು ತಳ್ಳಿಹಾಕಲಾಗದು.
ಇದರ ಜೊತೆಗೆ ಜೆಡಿಎಸ್ ನಾಯಕರು ಕೂಡ ಸ್ವಯಂ ಅಪರಾಧಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ ಹಿಂದೂ ಸಂಘಟನೆಗಳ ವಿರುದ್ಧ ಮಾತನಾಡಿದರೆ ಇತರೆ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಬಹುದು ಎಂಬ ಕಾರಣಕ್ಕೆ ಆಗಾಗ್ಗೆ ಹಿಂದೂ ಸಂಘಟನೆಗಳ ನಾಯಕರ ಬಗ್ಗೆ ಮಾತನಾಡಿದರು. ಇದರ ಪರಿಣಾಮ ಹಿಂದೂ ಮತಗಳಾಗಲೀ ಅತ್ತ ಅಲ್ಪಸಂಖ್ಯಾತ ಮತಗಳಾಗಲೀ ಅಂದುಕೊಂಡಂತೆ ಜೆಡಿಎಸ್ ಬೀಳಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಚುನಾವಣೆ ಸಮಯದಲ್ಲಿ ಜೆಡಿಎಸ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಪ್ರಚಾರ ನಡೆಸಿತ್ತಲ್ಲದೆ, ಅಂತಹ ಸ್ಥಳಗಳಲ್ಲಿ ಪ್ರಧಾನಿ ಮೋದಿಯನ್ನು ಕರೆಯಿಸಿ ಸಮಾವೇಶ ನಡೆಸಿತ್ತು.

ಬಿಜೆಪಿ ಜೆಡಿಎಸ್‌ನ ಮತ ಕಸಿಯುತ್ತಿದೆ
ಇದರ ಪರಿಣಾಮ ಆ ಕ್ಷೇತ್ರಗಳಲ್ಲಿ ಜೆಡಿಎಸ್ ನ ಒಂದಷ್ಟು ಮತಗಳು ವಿಭಜನೆಯಾಗಿ ಬಿಜೆಪಿಗೆ ಸೇರಿತು. ಇದರ ಲಾಭ ಕಾಂಗ್ರೆಸ್ ಗೆ ಆಯಿತು. ಇದು ಜೆಡಿಎಸ್ ಗೆ ಮನದಟ್ಟಾಗಿದೆ. ಕೆಲವು ನಾಯಕರು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಜ್ಯದ ವಿವಿಧೆಡೆ ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಾಂಪ್ರದಾಯಿಕ ರಾಜಕೀಯ ವಿರೋಧಿಗಳಾಗಿಯೇ ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದರು. ಅದು ಮೈತ್ರಿಯಾದಾಗಲೂ ಮುಂದುವರೆದಿತ್ತು ಎಂಬುದಕ್ಕೆ ಕಳೆದ 2019ರ ಲೋಕಸಭಾ ಚುನಾವಣೆ ಸಾಕ್ಷಿಯಾಗಿತ್ತು. ಅಂತಹ ಕ್ಷೇತ್ರಗಳಲ್ಲಿ ಇವತ್ತು ಬಿಜೆಪಿ ಪೈಪೋಟಿ ಕೊಡುತ್ತಿದೆ. ಮತ್ತು ಅದು ಅಲ್ಲಿ ಜೆಡಿಎಸ್ ಮತವನ್ನು ಕಿತ್ತುಕೊಳ್ಳುತ್ತಿದೆ.
ಇದು ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಜೆಡಿಎಸ್ ಗೆ ಸಂಕಷ್ಟ ಎಂಬುದು ಆ ಪಕ್ಷದ ನಾಯಕರಿಗೆ ಅರಿವಾಗಿದೆ. ಜತೆಗೆ ಪಕ್ಷ ದುರ್ಬಲವಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಹಲವು ನಾಯಕರು ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ನ ಆಪರೇಷನ್ ಹಸ್ತ ಕರಿನೆರಳು ಜೆಡಿಎಸ್ ಮೇಲೆ ಬಿದ್ದಿದೆ. ಅಧಿಕಾರ ಇರುವ ಕಡೆ ನಾಯಕರು ವಾಲುವುದು ಹೊಸತೇನಲ್ಲ. ಅದು ಇನ್ನು ಐದು ವರ್ಷಗಳ ಕಾಲ ಮುಂದುವರೆದರೆ ಜೆಡಿಎಸ್ ಪಕ್ಷಕ್ಕೆ ಭಾರೀ ನಷ್ಟವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಲೋಕ ಚುನಾವಣೆ ಎದುರಿಸುವುದು ಸುಲಭವಲ್ಲ
ಈಗ ಪಕ್ಷವನ್ನು ಉಳಿಸಿಕೊಳ್ಳಬೇಕು ಮತ್ತು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಸಂಪನ್ಮೂಲದ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಪ್ರತ್ಯೇಕವಾಗಿ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಸ್ಪರ್ಧಿಸಿ ಗೆಲ್ಲುವುದು ಅಷ್ಟು ಸುಲಭವಾಗಿ ಉಳಿದಿಲ್ಲ. ಹೀಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಲೋಕಸಭಾ ಚುನಾವಣೆಯನ್ನು ಎದುರಿಸಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಪಕ್ಷಕ್ಕೂ ಅನುಕೂಲ ಆಗಬಹುದು ಎಂಬುದು ಜೆಡಿಎಸ್ ನ ಲೆಕ್ಕಾಚಾರವಾಗಿದೆ. ಇದೆಲ್ಲವೂ ಸಕಾರಗೊಳ್ಳುತ್ತಾ ಕಾದು ನೋಡೋಣ.












Click it and Unblock the Notifications