ಇಂಡಿಯಾ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿ ಘೋಷಣೆ ಯಾವಾಗ? ವಿಳಂಬ ಹಿಂದಿನ ಲೆಕ್ಕಾಚಾರಗಳೇನು?

ಬೆಂಗಳೂರು, ಡಿಸೆಂಬರ್‌ 09: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ನೇತೃತ್ವದ ಐಎನ್ ಡಿಐಎ ಮತ್ತು ಬಿಜೆಪಿ ನೇತೃತ್ವದ ಎನ್‍ ಡಿಎ ಮೈತ್ರಿ ಕೂಟದ ನಡುವಿನ ಮಹಾಸಂಗ್ರಾಮ ಎಂದೇ ಹೇಳಲಾಗುತ್ತಿದೆಯಾದರೂ ಚುನಾವಣೆ ಹೊತ್ತಿನವರೆಗೂ ಐಎನ್‌ಡಿಐಎ ಮೈತ್ರಿ ಕೂಟ ಗಟ್ಟಿಯಾಗಿ ಉಳಿಯುತ್ತಾ? ಎಂಬ ಪ್ರಶ್ನೆಗಳು ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ರಾಜಕೀಯ ವಲಯದಲ್ಲಿ ಎದ್ದಿವೆ.

ಕಾಂಗ್ರೆಸ್ ಏಕಾಂಗಿಯಾಗಿ ಗೆಲುವಿನ ಸಾಮರ್ಥ್ಯ ಕಳೆದು ಕೊಂಡ ಬಳಿಕ ಒಂದಷ್ಟು ಪಕ್ಷಗಳ ಬೆಂಬಲದೊಂದಿಗೆ ಯುಪಿಎ ಮೈತ್ರಿಕೂಟ ರಚಿಸಿಕೊಂಡು ಈ ಹಿಂದೆ ಸರ್ಕಾರ ನಡೆಸಿತ್ತಾದರೂ ಅವತ್ತು ಬೆಂಬಲಿತ ಪಕ್ಷಗಳ ನಾಯಕರ ಭ್ರಷ್ಟಾಚಾರ ಮತ್ತು ಅದನ್ನು ಹತ್ತಿಕ್ಕಲಾಗದೆ ಹೋದ ಕಾಂಗ್ರೆಸ್ ನ ದುರ್ಬಲತೆ ದೇಶದಲ್ಲಿ ನರೇಂದ್ರಮೋದಿ ಯುಗ ಆರಂಭವಾಗಲು ಕಾರಣವಾಯಿತು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ಎಷ್ಟರ ಮಟ್ಟಿಗೆ ಪ್ರಬಲವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ಕಾಂಗ್ರೆಸ್ ದುರ್ಬಲವಾಗಿದೆ.

 Lok Sabha Election 2024: When Will The Prime Minister Candidate Be Announced By INDIA?

ಕೆಲವೆಡೆ ಕಾಂಗ್ರೆಸ್ ನ ಸ್ಥಾನಗಳನ್ನು ಬಿಜೆಪಿ ಕಸಿದುಕೊಂಡಿದ್ದರೆ ಮತ್ತೆ ಕೆಲವೆಡೆ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿವೆ. ಹೀಗಾಗಿ ಕಾಂಗ್ರೆಸ್ ಸುಮಾರು 26 ಪಕ್ಷಗಳನ್ನು ಸೇರಿಸಿಕೊಂಡು ಇಂಡಿಯಾ(ಐಎನ್ ಡಿಐಎ) ಮೈತ್ರಿಕೂಟ ಮಾಡಿಕೊಂಡರೂ ಆ ಪಕ್ಷಗಳ ಮೇಲೆ ಅಧಿಕಾರ ಅಥವಾ ಹಿಡಿತ ಸಾಧಿಸುವುದು ಸುಲಭವಾಗಿ ಉಳಿದಿಲ್ಲ. ತಮ್ಮ ಬೆಂಬಲಿತ ಪಕ್ಷದ ನಾಯಕರ ಇಷ್ಟಕ್ಕೆ ವಿರುದ್ಧವಾದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಾಂಗ್ರೆಸ್ ಗೆ ಸಾಧ್ಯವಾಗದಂತಾಗಿದೆ. ಹೀಗಾಗಿ ಬೆಂಬಲಿತ ಪಕ್ಷಗಳ ನಾಯಕರನ್ನು ಓಲೈಕೆ ಮಾಡಿಕೊಂಡೇ ಮುಂದಿನ ಲೋಕಸಭಾ ಚುನಾವಣೆಗೆ ಹೋಗುವುದು ಅನಿವಾರ್ಯವಾಗಿದೆ.

ಪರಿಣಾಮ ಬೀರಿದ ಪಂಚರಾಜ್ಯ ಫಲಿತಾಂಶ

ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿರುವ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಗಿಂತಲೂ ಪ್ರಬಲವಾಗಿವೆ. ಅಷ್ಟೇ ಅಲ್ಲದೆ ಅಧಿಕಾರವನ್ನು ನಡೆಸುತ್ತಿವೆ. ಹೀಗಿರುವಾಗ ಆ ಪಕ್ಷದ ನಾಯಕರು ಹೇಳಿದಂತೆ ಕೇಳುವುದು ಕಾಂಗ್ರೆಸ್‍ ಗೆ ಅನಿವಾರ್ಯವಾಗಿದೆ. ಇಲ್ಲಿ ಆಡಳಿತದ ದೃಷ್ಟಿಗಿಂತಲೂ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಒಂದಷ್ಟು ನಾಯಕರು ಕಾಂಗ್ರೆಸ್ ಜತೆಗೆ ಹೋಗಿದ್ದಾರೆ. ಒಂದು ವೇಳೆ ಕೊನೆಗಳಿಗೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಅಸಮಾಧಾನಗಳು ಹುಟ್ಟಿಕೊಂಡರೆ ಅದರ ಪರಿಣಾಮಗಳು ಏನು ಬೇಕಾದರೂ ಆಗಬಹುದಾಗಿದೆ.

ಎನ್‌ಡಿಎಗೆ ಸೆಡ್ಡು ಹೊಡೆಯಲು ಇಂಡಿಯಾ ಮೈತ್ರಿಕೂಟವೇನೋ ಘೋಷಣೆಯಾಗಿದೆ. ಆದರೆ ಆರಂಭದ ಆ ಜೋಸ್ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಮೈತ್ರಿಕೂಟದ ನಾಯಕರಲ್ಲಿ ಮಾಯವಾಗಿದೆ. ಹೀಗಾಗಿಯೇ ಇಷ್ಟರಲ್ಲೇ ನಡೆಯಬೇಕಾಗಿದ್ದ ಇಂಡಿಯಾ ಮೈತ್ರಿಕೂಟದ ಸಭೆ ಮುಂದೂಡಿಕೆಯಾಗಿದೆ. ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವಿನಲ್ಲಿ ಬೀಗುತ್ತಿರುವ ಬಿಜೆಪಿಯಲ್ಲಿ ಹೊಸ ಹುರುಪು ಕಾಣಿಸುತ್ತಿದ್ದರೆ ಕಾಂಗ್ರೆಸ್ ಸೇರಿದಂತೆ ಅದರ ಮೈತ್ರಿಕೂಟದಲ್ಲಿ ಸಣ್ಣಗಿನ ಅಸಮಾಧಾನಗಳು ಹುಟ್ಟಿಕೊಂಡಿವೆ.

'ಕೈ' ಗೆಲುವು ಭಾರತ್ ಜೋಡೋ ಯಶಸ್ಸೇ?

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆ ಬಳಿಕ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಪಡೆದಿತ್ತು. ಕಾಂಗ್ರೆಸ್ ಮುಂದೆ ಬಿಜೆಪಿ ಮತ್ತು ಜೆಡಿಎಸ್ ಸೋತು ಸುಣ್ಣವಾಗಿದ್ದವು. ಕಾಂಗ್ರೆಸ್ ಗೆಲುವಿಗೆ ರಾಜ್ಯದ ಬಿಜೆಪಿ ಮಾಡಿಕೊಂಡ ಎಡವಟ್ಟು ಒಂದೆಡೆಯಾದರೆ, ಕಾಂಗ್ರೆಸ್ ನಾಯಕರು ಬಿಜೆಪಿಯ ದೌರ್ಬಲ್ಯವನ್ನು ಚೆನ್ನಾಗಿ ಬಳಸಿಕೊಂಡರು ಎನ್ನುವುದು ಅಷ್ಟೇ ಸತ್ಯ. ಇದರ ಜತೆಗೆ ಗ್ಯಾರಂಟಿ ಯೋಜನೆಗಳು ಕೈ ಹಿಡಿದಿದ್ದವು.

ಆದರೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹಾಗೂ ರಾಹುಲ್ ಗಾಂಧಿ ಅವರನ್ನು ಐಕಾನ್ ಮಾಡುವ ಸಲುವಾಗಿ ಜೋಡೋ ಯಾತ್ರೆ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಗೆ ಗೆಲುವಾಗಿದೆ. ದೇಶದಲ್ಲಿ ಜನ ನರೇಂದ್ರ ಮೋದಿಯ ಆಡಳಿತದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅವರು ಬದಲಾವಣೆ ಬಯಸುತ್ತಿದ್ದಾರೆ. ಇದರ ಮುನ್ನುಡಿಯೇ ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶ ಎಂಬಂತೆ ಕೆಲವರು ಬಿಂಬಿಸಿದರು. ಈ ನಡುವೆ ಎರಡನೇ ಬಾರಿಗೆ ಭಾರತ್ ಜೋಡೋ ಯಾತ್ರೆ ನಡೆಸುವಂತೆ ಸಲಹೆಗಳು ಕೇಳಿಬಂದವು.

 Lok Sabha Election 2024: When Will The Prime Minister Candidate Be Announced By INDIA?

ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಅಧಿಪತ್ಯ

ಇವತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿಗೆ ಪಕ್ಷದ ನಾಯಕರ ಶ್ರಮ ಎಷ್ಟು ಇದೆಯೋ? ಹಾಗೆಯೇ ಕಳೆದ ಹತ್ತು ವರ್ಷಗಳ ಅವಧಿಯ ಮುಖ್ಯಮಂತ್ರಿಯಾಗಿದ್ದ ಬಿಆರ್ ಎಸ್ ಪಕ್ಷದ ಚಂದ್ರಶೇಖರರಾವ್ ಅವರ ದುರಾಡಳಿತದ ಆಕ್ರೋಶವೂ ಮತದಾರರಲ್ಲಿತ್ತು. ಹೀಗಾಗಿ ಕಾಂಗ್ರೆಸ್ ಗೆ ವರದಾನವಾಯಿತು. ಮೇಲ್ನೋಟಕ್ಕೆ ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಶಸ್ಸಾಗಿದೆ ಎಂದೇ ಹೇಳಬಹುದು. ಆದರೆ ಲೋಕಸಭಾ ಚುನಾವಣೆಗೆ ಉತ್ತರದ ರಾಜ್ಯಗಳು ಪ್ರಮುಖ ಪಾತ್ರವಹಿಸುತ್ತವೆ.

ಪಂಚರಾಜ್ಯ ಚುನಾವಣೆಯಲ್ಲಿ ಉತ್ತರದ ಮೂರು ರಾಜ್ಯಗಳಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ವಿಜಯ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ತನ್ನ ಅಧಿಕಾರವನ್ನು ಬಿಟ್ಟುಕೊಟ್ಟಿದೆ. ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿದ್ದಲ್ಲದೆ, ಕಾಂಗ್ರೆಸ್ ನಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಈ ಸೋಲಿನ ಬಳಿಕ ಇಂಡಿಯಾ ಮೈತ್ರಿಕೂಟದಲ್ಲಿ ಸಣ್ಣದೊಂದು ಅಸಮಾಧಾನಗಳು ಹುಟ್ಟಿಕೊಂಡಿದ್ದು, ಬೆಂಬಲಿತ ಪಕ್ಷದ ನಾಯಕರು ಸೋಲಿನ ಹೊಣೆಯನ್ನು ಕಾಂಗ್ರೆಸ್ ಮೇಲೆ ಹಾಕುತ್ತಿದ್ದಾರೆ. ಜತೆಗೆ ಕಾಂಗ್ರೆಸ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡರೆ ತಮ್ಮ ಅಭ್ಯರ್ಥಿಗಳ ಗೆಲುವಿಗೆ ತೊಂದರೆಯಾಗುವುದಲ್ಲದೆ ಪಕ್ಷದ ಅಸ್ಥಿತ್ವಕ್ಕೆ ಏಟು ಬೀಳುವ ಭಯದಲ್ಲಿದ್ದಾರೆ.

ಪ್ರಧಾನಿ ಅಭ್ಯರ್ಥಿ ಘೋಷಿಸದ 'ಇಂಡಿಯಾ'

ಹಾಗೆನೋಡಿದರೆ ಕಾಂಗ್ರೆಸ್ ನಾಯಕರು ಸೇರಿದಂತೆ ಮೋದಿಯನ್ನು ವಿರೋಧಿಸುವ ಇತರೆ ಪಕ್ಷಗಳ ನಾಯಕರು ವೈಯಕ್ತಿಕವಾಗಿ ನರೇಂದ್ರಮೋದಿ ಮೇಲೆ ದಾಳಿ ಮಾಡಿದರೇ ವಿನಃ ಪ್ರಧಾನಿ ಮೇಲಾಗಲೀ, ಸರ್ಕಾರದ ಮೇಲಾಗಲೀ ಮಾಡಲೇ ಇಲ್ಲ. ವಿರೋಧಿಸುವವರಿಗೆ ಯಾವುದೇ ಹಗರಣಗಳು ಸಿಗಲಿಲ್ಲ. ಕೇವಲ ವಿರೋಧ ಮಾಡಬೇಕೆಂಬ ಒಂದೇ ಕಾರಣಕ್ಕೆ ವಿರೋಧಗಳನ್ನು ಮಾಡುತ್ತಾ ಬಂದರೆ ವಿನಃ ವಿಪಕ್ಷವಾಗಿ ಮತದಾರರನ್ನು ಸೆಳೆಯುವಂತಹ ಯಾವುದೇ ಕಾರ್ಯಕ್ರಮಗಳನ್ನು ಮಾಡಲಿಲ್ಲ.

ಇವತ್ತು ಎನ್ ಡಿಎಗೆ ವಿರುದ್ಧವಾಗಿ ಇಂಡಿಯಾ ಒಕ್ಕೂಟವನ್ನು ಕಟ್ಟಿರುವ ನಾಯಕರು ಮೋದಿ ವಿರುದ್ಧ ರಾಜಕೀಯ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಆದರೆ ಇಂಡಿಯಾ ಒಕ್ಕೂಟದಿಂದ ಪ್ರಧಾನಿ ಅಭ್ಯರ್ಥಿ ಯಾರು ಎಂಬುದನ್ನು ಇದುವರೆಗೆ ಘೋಷಣೆ ಮಾಡಿಲ್ಲ. ಒಂದು ವೇಳೆ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದೆ ಸಾಮೂಹಿಕ ನಾಯಕತ್ವದಡಿ ಚುನಾವಣೆಗೆ ತೆರಳಿದರೆ ಅದನ್ನು ಮತದಾರರು ಒಪ್ಪಿಕೊಳ್ಳುತ್ತಾರಾ? ಇದಕ್ಕಿಂತ ಮುಖ್ಯವಾಗಿ ಯಾವುದೇ ಅಸಮಾಧಾನವಿಲ್ಲದೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಾ? ಹೀಗೆ ಹತ್ತಾರು ಪ್ರಶ್ನೆಗಳು ಇಂಡಿಯಾ ಮೈತ್ರಿಕೂಟದ ಸುತ್ತ ಗಿರಕಿ ಹೊಡೆಯುತ್ತಿದೆ. ಮುಂದೇನು ಎಂಬುದನ್ನು ಕಾದುನೋಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+