Lok Sabha Election 2024: ಕೈ ಅಥವಾ ಕಮಲ: ಜಯಪ್ರಕಾಶ್ ಹೆಗ್ಡೆ ಮುಂದಿನ ನಡೆಯೇನು..?
ಚಿಕ್ಕಮಗಳೂರು , ಮಾರ್ಚ್ 05: ಸುಮಾರು ನಾಲ್ಕು ದಶಕಗಳಿಂದಲೂ ಕರಾವಳಿ ಭಾಗದ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಹೆಗ್ಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಕರಾವಳಿ ಭಾಗದ ಜನ ಮೆಚ್ಚಿದ ನಾಯಕ ಎಂದು ಗುರುತಿಸಿಕೊಂಡಿರುವ ಇವರ ರಾಜಕೀಯದ ಮುಂದಿನ ನಿರ್ಧಾರವೇನು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.
ಸದ್ಯ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುತ್ತಾರೆ. ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಜಯಪ್ರಕಾಶ್ ಹೆಗ್ಡೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಮಾತು ಜೋರಾಗಿ ಕೇಳಿ ಬರುತ್ತಿದೆ. ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ಮಾತನಾಡಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕುಟುಂಬದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಕುಟುಂಬದ ಹಾಗೂ ಸ್ನೇಹಿತರ ಜೊತೆ ಚರ್ಚಿಸುತ್ತೇನೆ. ಮೊದಲಿನಿಂದಲೂ ಸ್ನೇಹಿತರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದೇನೆ. ಇನ್ನು ಒಂದು ವಾರದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕುಟುಂಬಸ್ಥರ ಜೊತೆ ಚರ್ಚಿಸಿ ವಾರದೊಳಗೆ ರಾಜಕೀಯ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಸೂಕ್ತ ನಾಯಕನ ಹುಡುಕಾಟದಲ್ಲಿ ಕಾಂಗ್ರೆಸ್
ಇತ್ತ ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿಯಲ್ಲಿ ತಮ್ಮ ಬಲ ಪ್ರದರ್ಶಿಸಲು ಕಾಂಗ್ರೆಸ್ ಸೂಕ್ತ ನಾಯಕನ ಹುಡುಕಾಟದಲ್ಲಿದೆ. ಬಿಜೆಪಿಯಿಂದ ಕ್ಷೇತ್ರ ಕಸಿಯಲು ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಮುಂದಿರುವ ಪ್ರಬಲ ಅಸ್ತ್ರವಾಗಿದೆ. ಒಂದು ವೇಳೆ ಜಯಪ್ರಕಾಶ್ ಹೆಗ್ಡೆ ಪಕ್ಷ ಬದಲಿಸಿ ಕಾಂಗ್ರೆಸ್ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗಳಿಗೆದರೆ ಬಿಜೆಪಿ ಅಭ್ಯರ್ಥಿಗೆ ಟಕ್ಕರ್ ಕೊಡುವುದಂತೂ ಗ್ಯಾರಂಟಿಯಾಗಿದೆ.
ಯಾಕೆಂದರೆ ಜಯಪ್ರಕಾಶ್ ಹೆಗ್ಡೆ ಕರಾವಳಿ ಭಾಗದಲ್ಲಿ ಜನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಜನ ಸಾಮಾನ್ಯರ ಬಗ್ಗೆ ಅತೀವ ಕಾಳಜಿಹೊಂದಿರುವ ಜಯಪ್ರಕಾಶ್ ಹೆಗ್ಡೆ ಜನರು ಯಾವುದೇ ಸಮಸ್ಯೆಗಳನ್ನು ಹೇಳಿದರೂ ಖುದ್ದು ತಾನೇ ಪರಿಹರಿಸುವ ಕೆಲಸವನ್ನು ಮಾಡುತ್ತಾರೆ. ಹೀಗಾಗಿ ಪಕ್ಷಕ್ಕಿಂತ ಜಯಪ್ರಕಾಶ್ ಹೆಗ್ಡೆ ವೈಯಕ್ತಿಕ ವರ್ಚಸ್ಸೇ ಹೆಚ್ಚಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಪ್ರಕಾಶ್ ಹೆಗ್ಡೆ ಕಣಕ್ಕಿಳಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿಯ ಫೈಟ್ ನಡೆಯಲಿದೆ. ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಛಾಪಿನಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹಿಂದಿಕ್ಕಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವ ಸಾಧ್ಯತೆಗಳು ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.












Click it and Unblock the Notifications