ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ ರಾಜಕೀಯದ ಚಟುವಟಿಕೆಗಳಿಗೆ ‘ಬರ’ ಇಲ್ಲ
ಬೆಂಗಳೂರು, ಸೆಪ್ಟೆಂಬರ್ 14: ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎನ್ನುವಂತೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗುತ್ತಿದ್ದರೂ ರಾಜ್ಯ ರಾಜಕೀಯದಲ್ಲಿ ಲೆಕ್ಕಾಚಾರಗಳು ಮಾತ್ರ ಇನ್ನೂ ಮುಗಿದಿಲ್ಲ. ಜತೆಗೆ ರಾಜ್ಯದ 195 ತಾಲೂಕುಗಳಲ್ಲಿ ಬರ ಕಾಣಿಸಿಕೊಂಡರೂ ಆಡಳಿತರೂಢ ಕಾಂಗ್ರೆಸ್ ಸೇರಿದಂತೆ ಜೆಡಿಎಸ್, ಬಿಜೆಪಿ ಪಕ್ಷಗಳೊಳಗೆ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳಿಗೆ ಮಾತ್ರ 'ಬರ' ಇಲ್ಲದಂತಾಗಿದೆ.
ವಿಧಾನಸಭಾ ಚುನಾವಣೆ ಮುಗಿದು ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಇತ್ತ ವಿರೋಧ ಪಕ್ಷವಾಗಿರುವ ಬಿಜೆಪಿ ಇದುವರೆಗೆ ವಿರೋಧಪಕ್ಷದ ನಾಯಕನನ್ನೇ ಆಯ್ಕೆ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನು ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂದು ತಿಳಿದುಕೊಳ್ಳಬೇಕೋ ಅಥವಾ ರಾಜಕೀಯ ತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕೋ ಗೊತ್ತಿಲ್ಲ. ಆದರೆ ರಾಜ್ಯ ಬಿಜೆಪಿಯ ಇವತ್ತಿನ ಸ್ಥಿತಿ ಸೂತ್ರವಿಲ್ಲದ ಪಟದಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್ ಅಧಿಕಾರ ಹಿಡಿದು ಸರ್ಕಾರ ರಚನೆ ಮಾಡಿದ ಬಳಿಕ ವಿರೋಧ ಪಕ್ಷದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಆಡಳಿತರೂಢ ಕಾಂಗ್ರೆಸ್ ಮೇಲೆ ಸಮರ ಸಾರುತ್ತಿರುವುದು ಎದ್ದು ಕಾಣಿಸುತ್ತಿದೆ. ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಟ್ಟು ಪ್ರತಿ ಹಂತದಲ್ಲಿಯೂ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ವಿರೋಧ ಪಕ್ಷದ ಸ್ಥಾನದಲ್ಲಿರುವ ಎರಡು ಪಕ್ಷಗಳು ಮಾಡುತ್ತಲೇ ಬಂದಿದ್ದಾರೆ. ಅದಕ್ಕೆ ಸರಿಯಾಗಿ ಆಡಳಿತ ರೂಢ ಕಾಂಗ್ರೆಸ್ ಕೂಡ ಕೆಲವೊಂದು ಅಸ್ತ್ರವನ್ನು ನೀಡುತ್ತಿದೆ. ಅದನ್ನು ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಪಡೆದುಕೊಳ್ಳದಂತೆ ತಡೆಯುವ ತಂತ್ರಗಳು ಮುನ್ನಲೆಯಲ್ಲಿವೆ.
ಬರ ನಿರ್ವಹಣೆ ಸರ್ಕಾರಕ್ಕೆ ಸವಾಲ್
ಅದೇನು ದುರಾದೃಷ್ಟವೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ಹಿಡಿಯುತ್ತಿದ್ದಂತೆಯೇ ರಾಜ್ಯದಲ್ಲಿ ಬರ ಕಾಣಿಸಿದೆ. (ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದಲ್ಲಿ ಬರ ಬಂದಿತ್ತು.) ಇದೊಂದು ಸರ್ಕಾರಕ್ಕೆ ಸವಾಲ್ ಆಗಿದೆ. ಈ ನಡುವೆ ಅನುಷ್ಠಾನಕ್ಕೆ ತಂದಿರುವ ಯೋಜನೆಗಳ ಯಶಸ್ವಿಗೆ ಹೋರಾಟ ಮಾಡಲೇ ಬೇಕಾಗಿದೆ. ಇದರ ನಡುವೆ ಬರ ಕಾಣಿಸಿಕೊಂಡಿದ್ದು, ಬರ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ. ಇದಕ್ಕಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಬೇಕಾಗಿದೆ. ಮೇಲಿಂದ ಮೇಲೆ ತೆರಿಗೆ ಹಾಕುತ್ತಾ ಜನರ ಮೇಲೆ ಹೊರೆ ಹಾಕಿದರೆ ಜನ ರೊಚ್ಚಿಗೇಳುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಸರ್ಕಾರದ ಪ್ರತಿಹೆಜ್ಜೆಯನ್ನು ಗಮನಿಸುತ್ತಿರುವ ವಿರೋಧ ಪಕ್ಷಗಳು ಚಿಕ್ಕ ಚಿಕ್ಕ ವಿಚಾರವನ್ನು ದೊಡ್ಡದ್ದು ಮಾಡಿ ಜನರ ಮುಂದೆಯಿಡಲು ಹೊಂಚು ಹಾಕಿ ಕುಳಿತಿದೆ. ಸದ್ಯಕ್ಕೆ ಮೂರು ಪಕ್ಷಗಳಿಗೆ ಮುಂಬರುವ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಕರ್ನಾಟಕದಿಂದ ಹೆಚ್ಚಿನ ಸ್ಥಾನಗಳನ್ನು ಗೆದ್ದು ಇಂಡಿಯಾ(INDIA) ದ ಕೈ ಭದ್ರಪಡಿಸಬೇಕೆಂಬುದು ಅಧಿಕಾರದಲ್ಲಿರುವ ಕಾಂಗ್ರೆಸ್ ನಾಯಕರ ಅದರಲ್ಲೂ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರ ಉದ್ದೇಶವಾಗಿದೆ.
ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ
ಕರ್ನಾಟಕದಲ್ಲಿ 135 ಸ್ಥಾನ ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ ಕರ್ನಾಟಕದಿಂದ ಕನಿಷ್ಠ 20 ಸ್ಥಾನವನ್ನು ಗೆಲ್ಲಿಸಿಕೊಡುತ್ತಾರೆ ಎಂಬುದು ಇಂಡಿಯಾ(INDIA) ನಾಯಕರ ನಿರೀಕ್ಷೆಯಾಗಿದೆ. ಇದನ್ನು ಹುಸಿ ಮಾಡಬಾರದೆಂದು ರಾಜ್ಯ ಕೈ ನಾಯಕರು ಗೆಲುವಿಗೆ ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡಲು ತಯಾರಿ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಆರ್ಥಿಕ ಹೊರೆ ಆದರೂ ಅದನ್ನು ಸರಿದೂಗಿಸಿಕೊಂಡು ಗ್ಯಾರಂಟಿ ಯೋಜನೆಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ.

ಈ ಬಾರಿ ಮುಂಗಾರು ದುರ್ಬಲವಾಗಿ ಬರ ಕಾಣಿಸಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅನಿರೀಕ್ಷಿತ ಶಾಕ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದನ್ನು ನಿಭಾಯಿಸುವುದು ಒಂದು ಸವಾಲ್ ಆಗಿದೆ. ಇಲ್ಲಿ ಸ್ವಲ್ಪ ಎಡವಿದರೂ ಜನಾಕ್ರೋಶಕ್ಕೆ ಕಾರಣವಾಗುವ ಸಾಧ್ಯತೆಯಿದ್ದು ಅದು ಮುಂಬರುವ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಿದರೂ ಅಚ್ಚರಿಪಡಬೇಕಾಗಿಲ್ಲ. ಇನ್ನು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಸದ್ದು ಮಾಡುತ್ತಿದೆ.
ಮುಂದಿನ ಲೋಕಸಭಾ ಚುನಾವಣೆಗೆ ಒತ್ತು
ಒಟ್ಟಾರೆ ಹೇಳಬೇಕೆಂದರೆ ರಾಜ್ಯದಲ್ಲಿ ವಾಡಿಕೆಯ ಮಳೆ ಸುರಿಯದೆ ಬರ ಕಾಣಿಸಿರುವುದರಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಅದು ರಾಜ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಈಗಿರುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ರಾಜಕೀಯ ನಾಯಕರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಎಲ್ಲರಿಗೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಷ್ಟೆ ಮುಖ್ಯವಾಗಿದೆ.












Click it and Unblock the Notifications