Lok Sabha Election 2024: ನಟ ಅಂಬರೀಶ್ ಸುತ್ತಲೇ ಸುತ್ತುತ್ತಿದೆ ಮಂಡ್ಯ ರಾಜಕೀಯ!
ಬೆಂಗಳೂರು, ಏಪ್ರಿಲ್.02: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ನಡೆಯಲಿದ್ದು. ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯ ಚುರುಕುಗೊಂಡಿದೆ. ಸಕತ್ ಕುತೂಹಲ ಕೆರಳಿಸಿರುವು ಮಾತ್ರ ಮಂಡ್ಯ ರಾಜಕೀಯ. ಈ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ದಿವಂಗತ ನಟ ಅಂಬರೀಶ್ ಅವರ ಹೆಸರನ್ನು ಎಳೆದು ತರುವುದರೊಂದಿಗೆ ಮತ್ತೆ ರಾಜಕೀಯದ ಕೇಂದ್ರ ಬಿಂದುವಾಗಿದ್ದಾರೆ ನಟ ಅಂಬರೀಶ್.
ಕಾಂಗ್ರೆಸ್ ವಿರುದ್ಧ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಅಭ್ಯರ್ಥಿಯಾಗಿ ಎಚ್‌ಡಿ ಕುಮಾರಸ್ವಾಮಿ ಕಣಕ್ಕಿಳಿದಿದ್ದಾರೆ. ಬಂಡಾಯ ಏಳುತ್ತಾರೆ ಎಂದುಕೊಂಡಿದ್ದ ಹಾಲಿ ಸಂಸದ ಸುಮಲತಾ ಅಂಬರೀಶ್ ಅವರನ್ನು ಸಮಾಧಾನ ಮಾಡುವಲ್ಲಿ ಬಿಜೆಪಿ ನಾಯಕರ ಪ್ರಯತ್ನ ಸಕ್ಸಸ್ ಆಗಿದೆ ಎನ್ನುವಂತಿದೆ. ಇದೇ ವೇಳೆ ಸುಮಲತಾ ಅವರನ್ನು ಎಚ್‌ಡಿ ಕುಮಾರಸ್ವಾಮಿ ಭೇಟಿಯಾಗಿ ಬೆಂಬಲ ಕೋರಿದ್ದಾರೆ. ಇದನ್ನು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಡಿಕೆ ಶಿವಕುಮಾರ್ ಟೀಕೆಗೆ ಸುಮಲತಾ ವಾಗ್ದಾಳಿ
ಎಚ್ ಡಿ ಕುಮಾರಸ್ವಾಮಿ ಬೆಂಬಲ ಕೋರಿ ಭೇಟಿ ಮಾಡಿದ್ದನ್ನು ಟೀಕಿಸಿದ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹಾಲಿ ಸಂಸದೆ ಸುಮಲತಾ ಅಂಬರೀಶ್ ವಾಗ್ದಾಳಿ ನಡೆಸಿದ್ದಾರೆ. 2019 ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿ (ಎಸ್) ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ ತಮ್ಮ ಬದ್ಧ ವೈರಿ ಸುಮಲತಾ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದರಿಂದ ಮಂಡ್ಯ ರಾಜಕೀಯದ ಘಟನಾವಳಿಗಳ ಬಗ್ಗೆ ಸಕತ್ ಆಸಕ್ತಿ ಹೊಂದಿದ್ದೇನೆ ಎಂದು ಡಿಕೆಶಿವಕುಮಾರ್ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಸುಮಲತಾ ಅಂಬರೀಶ್, ಎಚ್ ಡಿ ಕುಮಾರಸ್ವಾಮಿ ನನ್ನನ್ನು ಭೇಟಿ ಮಾಡಿದರೆ ಶಿವಕುಮಾರ್ ಅವರಿಗೆನು? ನನ್ನ ಪತಿ ಅಂಬರೀಶ್ ಅವರು ಎರಡು ದಶಕಗಳಿಂದ ಸೇವೆ ಸಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆಯೇ..? ಎಂದು ಅವರು ತಿರುಗೇಟು ನೀಡಿದ್ದಾರೆ.

ಈ ವಿಚಾರ ಭಾವನಾತ್ಮಕ ತಿರುವು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದ ಡಿಸಿಎಂ ಡಿಕೆ ಶಿವಕುಮಾರ್, ಸುಮಲತಾ ಅವರ ರಾಜಕೀಯದಲ್ಲಿ ತಾನು ಎಂದಿಗೂ ಮಧ್ಯಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಅಂಬರೀಶ್ ಅವರಿಗೆ ಕಾಂಗ್ರೆಸ್ ಏನು ಕೊಟ್ಟಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.
ಬುಧವಾರ ನಿರ್ಧಾರ ಪ್ರಕಟಿಸಲಿರುವ ಸುಮಲತಾ!
ಹಾಲಿ ಸಂಸದೆ ಸುಮಲತಾ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಬಗ್ಗೆ ಅಥವಾ ಬಿಜೆಪಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಬಗ್ಗೆ ಬುಧವಾರ (ಏಪ್ರಿಲ್ 3) ತಮ್ಮ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಹೀಗಾಗಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬೆಂಬಲ ಕೋರಿದ್ದಾರೆ.
ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಈ ಭೇಟಿ ನಡೆದಿದ್ದು, ಬಂಡಾಯ ಶಮನಗೊಳಿಸುವ ಪ್ರಯತ್ನದಲ್ಲಿ ಅಕ್ಕ ಎಂದು ಕರೆದಿದ್ದಾರೆ. ಜೊತಗೆ ನಟ ಅಂಬರೀಷ್ ಅವರನ್ನು ತನ್ನ ಆತ್ಮೀಯರು ಎಂದು ಹೇಳಿಕೊಂಡಿದ್ದಾರೆ. 2019ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರನ್ನು ಬೆಂಬಲಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮುಂಬರುವ ಚುನಾವಣೆಯಲ್ಲಿ ತಟಸ್ಥವಾಗಿರುವಂತೆ ಸೂಚಿಸಿದ್ದಾರೆ.
2018 ರಲ್ಲಿ ಅಂಬರೀಶ್ ನಿಧನರಾದರು. ಬಳಿಕ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ನಟಿ ಸುಮಲತಾ ಅಂಬರೀಷ್ ಸುಲಭವಾಗಿ ಗೆಲುವು ಸಾಧಿಸಿದರು. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ರಾಜಕೀಯವಾಗಿ ಉಳಿಯುತ್ತಾರೋ ಅಥವಾ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೋ ಎಂಬುದು ಬುಧವಾರ ತಿಳಿಯಲಿದೆ. ಇದಕ್ಕೂ ಮುನ್ನ ನಟ ಅಂಬರಿಶ್ ಅವರ ಬೆಂಬಲಿಗರೊಂದಿಗೆ ಸಭೆ ನಡೆಯಲಿದೆ.
ಮಂಡ್ಯದ ಗಂಡು ಎಂದೇ ಖ್ಯಾತಿ ಪಡೆದಿರುವ ನಟ ಅಂಬರೀಶ್ 1998 ರಿಂದ 1999 ರವರೆಗೆ ಜೆಡಿಎಸ್ ಸಂಸದರಾಗಿ ಮೂರು ಬಾರಿ ಮತ್ತು 1999-2004 ಮತ್ತು 2004-2009ರಲ್ಲಿ ಕಾಂಗ್ರೆಸ್ ಪ್ರತಿನಿಧಿಯಾಗಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಲ್ಲಿ ಕಾವೇರಿ ನದಿ ವಿವಾದ ನ್ಯಾಯಾಧಿಕರಣದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.












Click it and Unblock the Notifications