Lok Sabha Election 2024: ರಾಜ್ಯದ ಈ 3 ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ
ಹಾಲೀ ಲೋಕಸಭೆಯ ಅವಧಿ ಮುಗಿಯಲು ಇನ್ನೂ ಸುಮಾರು ಎಂಟು ತಿಂಗಳಿದ್ದರೂ ಚುನಾವಣೆಗೆ ಪೂರ್ವ ತಯಾರಿ ಆರಂಭವಾಗಿದೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಪ್ರಕ್ರಿಯೆ ನಿಧಾನವಾಗಿ ಆರಂಭವಾಗುತ್ತಿದೆ. ಆಪರೇಶನ್ ಹಸ್ತದ ವಿಚಾರ ಜೋರಾಗಿ ಸದ್ದು ಮಾಡುತ್ತಿದೆ.
ಇನ್ನೊಂದು ಕಡೆ, ಬಿಜೆಪಿ ಮತ್ತು ಜೆಡಿಎಸ್ ನಡುವಿನ ಚುನಾವಣಾ ಮೈತ್ರಿ ಮುನ್ನಲೆಯಲ್ಲಿದೆ. ಬಿಜೆಪಿ ಮತ್ತು ಜೆಡಿಎಸ್ಸಿನ ಹಿರಿಯ ನಾಯಕರು ಇದನ್ನು ಸ್ಪಷ್ಟ ಪಡಿಸಿದ್ದಾರೆ. ಸೀಟು ಹೊಂದಾಣಿಕೆ, ಯಾರಿಗೆ ಎಷ್ಟು ಸೀಟು, ಎಲ್ಲಿಂದ ಯಾವ ಪಕ್ಷ ಸ್ಪರ್ಧೆ ಎನ್ನುವ ವಿಚಾರ ಚರ್ಚೆಯ ಹಂತದಲ್ಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಒಂದೆರಡು ಒಪಿನಿಯನ್ ಪೋಲ್ ಗಳು ಹೊರಬಿದ್ದಿವೆ. ಅದರ ಪ್ರಕಾರ, ಕಳೆದ ಬಾರಿ ಗೆದ್ದಷ್ಟು ಸೀಟುಗಳನ್ನು ಬಿಜೆಪಿ ಗೆಲ್ಲುವ ಸೀನ್ ಈ ಬಾರಿ ಇಲ್ಲ. ಬಿಜೆಪಿ ಕನಿಷ್ಟ ಏಳರಿಂದ ಹತ್ತು ಸ್ಥಾನವನ್ನು ಕಳೆದುಕೊಳ್ಲಬಹುದು ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಗಿದು ಎಷ್ಟೋ ತಿಂಗಳು ಆಗಿ ಹೋದವು. ಇನ್ನು, ಸಭಾ ನಾಯಕನಿಲ್ಲದೇ ಬಜೆಟ್ ಅಧಿವೇಶನವೂ ಮುಗಿದು ಹೋಯಿತು. ಆದರೂ, ಬಿಜೆಪಿಯ ಹೈಕಮಾಂಡ್ ಆಯಕಟ್ಟಿನ ಈ ಎರಡು ಸ್ಥಾನಕ್ಕೆ ಆಯ್ಕೆ ಕಸರತ್ತನ್ನು ಮುಗಿಸಲು ಹಿಂದೆ ಮುಂದೆ ನೋಡುತ್ತಿದೆ. ರಾಜ್ಯದ 28ಕ್ಷೇತ್ರಗಳ ಪೈಕಿ, ಪ್ರಮುಖವಾಗಿ 3 ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ.

ತುಮಕೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದ ಕಲ್ಪತರು ನಾಡು ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾಗಿದೆ. ಕಳೆದ ಬಾರಿಯ ಅಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಜಂಟಿ ಅಭ್ಯರ್ಥಿಯಾಗಿ ಎಚ್.ಡಿ.ದೇವೇಗೌಡ್ರು ಸ್ಪರ್ಧಿಸಿ ಸೋತಿದ್ದರು.
ದೇವೇಗೌಡ್ರನ್ನು ಸೋಲಿಸಿದ್ದ ಬಿಜೆಪಿಯ ಜಿ.ಎಸ್.ಬಸವರಾಜ್ ಮತ್ತೆ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಹಾಗಾಗಿ, ಅಲ್ಲಿಂದ ಈ ಬಾರಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳು ಯಾರು, ಆಕಾಂಕ್ಷಿಗಳು ಯಾರು ಎನ್ನುವುದು ಬಹಿರಂಗವಾಗಿಲ್ಲ. ಒಂದು ವೇಳೆ ಹೊಂದಾಣಿಕೆಯಾದರೆ, ಬಿಜೆಪಿ ಆ ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟು ಕೊಡಬಹುದು.
ಹಾವೇರಿ: ಕಿತ್ತೂರು ಕರ್ನಾಟಕ ಭಾಗದ ಹಾವೇರಿ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಲ್ಲೊಂದು. ಸತತವಾಗಿ ಮೂರು ಬಾರಿ ಇಲ್ಲಿಂದ ಸ್ಪರ್ಧಿಸಿ ಗೆದ್ದಿರುವ ಶಿವಕುಮಾರ್ ಉದಾಸಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಇಲ್ಲಿ ಕೂಡಾ ಯಾರು ಆಕಾಂಕ್ಷಿಗಳು ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಉತ್ತರ ಕನ್ನಡ: ಬಿಜೆಪಿಯ ಫೈರ್ ಬ್ರ್ಯಾಂಡ್ ಎಂದೇ ಹೆಸರಾಗಿರುವ ಸಂಸದ ಅನಂತಕುಮಾರ್ ಹೆಗಡೆ ಸಕ್ರಿಯ ರಾಜಕಾರಣದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಪ್ರಚಾರದಲ್ಲೂ ತೊಡಗಿಸಿಕೊಂಡಿಲ್ಲ.
ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಾಗಲಿ, ಇತ್ತೀಚೆಗೆ ಬಿಜೆಪಿಯ ವರಿಷ್ಠರು ಕ್ಷೇತ್ರಕ್ಕೆ ಆಗಮಿಸಿದಾಗಲೂ ಹೆಗಡೆ ಗೈರಾಗಿದ್ದರು. ಅವರು ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ನಿಕ್ಕಿಯಿಲ್ಲ ಎನ್ನುವ ಬಲವಾದ ಮಾತು ಕ್ಷೇತ್ರದಲ್ಲಿ ಚಾಲ್ತಿಯಲ್ಲಿದೆ. ಇಲ್ಲಿಂದ ಯಾರು ಎನ್ನುವ ಸ್ಪಷ್ಟತೆಯೂ ಸದ್ಯಕ್ಕಿಲ್ಲ.
ಚಿಕ್ಕಬಳ್ಳಾಪುರದ ಹಾಲೀ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಕೂಡಾ ಬಿಜೆಪಿಯಿಂದ ದೂರ ಸರಿದಿದ್ದಾರೆ. ತಾನು ಬಿಜೆಪಿಯಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲಿಂದ, ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಹೆಸರು ಬಿಜೆಪಿಯಿಂದ ಮುನ್ನಲೆಗೆ ಬಂದಿದೆ. ಅವರಿಗೆ ಬಿಜೆಪಿ ಟಿಕೆಟ್ ನೀಡುತ್ತೋ ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.












Click it and Unblock the Notifications