Lok Sabha Election 2024: ಚುನಾವಣಾ ಸಮರದಲ್ಲಿ ಸೇನಾಧಿಪತಿಯಿಲ್ಲದೆ INDIA ಹೋರಾಟ!

ಬೆಂಗಳೂರು, ಏಪ್ರಿಲ್‌ 17: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮೂರನೇ ಬಾರಿಗೆ ಅಧಿಕಾರಕ್ಕೆ ಬಾರದಂತೆ ಕಟ್ಟಿಹಾಕಲು ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳ ಮೈತ್ರಿಯೊಂದಿಗೆ ಹುಟ್ಟಿಕೊಂಡ ಐಎನ್‌ಡಿಐಎ ಸಮರ್ಪಕ ತಯಾರಿಯನ್ನು ಮಾಡಿಕೊಳ್ಳದೆ ಚುನಾವಣಾ ಅಖಾಡಕ್ಕೆ ಧುಮುಕಿದಂತೆ ಕಾಣಿಸುತ್ತಿದ್ದು, ಇದುವರೆಗೆ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಿಸದ ಕಾರಣ ಸೇನಾಧಿಪತಿಯಿಲ್ಲದೆ ಯುದ್ಧ ಮಾಡುವುದು ಅನಿವಾರ್ಯವಾಗಿದೆ.

ಐಎನ್‌ಡಿಐಎ ಒಕ್ಕೂಟ ಕಾಂಗ್ರೆಸ್ ನೇತೃತ್ವದಲ್ಲಿಯೇ ಮುನ್ನಡೆಯುತ್ತಿದ್ದರೂ ಇಡೀ ಒಕ್ಕೂಟದ ಸೂತ್ರಧಾರ (ಪ್ರಧಾನಮಂತ್ರಿ ಅಭ್ಯರ್ಥಿ) ಯಾರು ಎಂಬುದನ್ನು ಆಯ್ಕೆ ಮಾಡದಿರುವ ಕಾರಣದಿಂದಾಗಿ ಚುನಾವಣಾ ಕಾರ್ಯಕ್ರಮಗಳು ರಾಷ್ಟ್ರಮಟ್ಟದಲ್ಲಿ ಸೂತ್ರವಿಲ್ಲದ ಪಟದಂತಾಗಿದೆ. ಸುಮಾರು ಇಪ್ಪತ್ತೆಂಟು ಪಕ್ಷಗಳಿದ್ದರೂ ಆಯಾಯ ಪಕ್ಷಗಳ ನಾಯಕರು ಅವರಿಗೆ ತೋಚಿದಂತೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಮತದಾರರು ಯಾರನ್ನು ನೋಡಿ ಮತನೀಡಬೇಕು ಎಂಬ ಗೊಂದಲಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿದೆ.

Lok Sabha Election 2024 INDIA Union Start Election Campaign Without Preparation

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ದೆಹಲಿಯಲ್ಲಿ ನಡೆಸಿದ ಹೋರಾಟವನ್ನು ಹೊರತುಪಡಿಸಿದರೆ ಉಳಿದಂತೆ ಚುನಾವಣೆಗಾಗಿ ಯಾರೂ ಕೂಡ ಒಗ್ಗಟ್ಟು ಪ್ರದರ್ಶಿಸಿದಂತೆ ಕಾಣಿಸುತ್ತಿಲ್ಲ. ಈಗಾಗಲೇ ಕೇಜ್ರಿವಾಲ್ ಜೈಲಿನಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಬಿಟ್ಟು ಹೊರ ಬರುತ್ತಿಲ್ಲ. ಇನ್ನು ಕಾಂಗ್ರೆಸ್ ನ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯನ್ನು ಹೊರತು ಪಡಿಸಿದರೆ ದೇಶದಾದ್ಯಂತ ಸುತ್ತಾಡಿ ಮತವನ್ನು ತಂದುಕೊಡುವಂತಹ ನಾಯಕರು ಕಾಣಿಸುತ್ತಿಲ್ಲ.

ಎನ್‌ಡಿಎಗೆ ಮೋದಿಯೇ ಮಹಾಶಕ್ತಿ

ಅತ್ತ ಎನ್‌ಡಿಎನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಶಕ್ತಿಯಾಗಿದ್ದು, ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಎನ್‌ಡಿಎ ಒಕ್ಕೂಟದಲ್ಲಿ ಇಡೀ ದೇಶದಲ್ಲಿ ಓಡಾಡಿ ಮತಗಳನ್ನು ಸೆಳೆಯಬಲ್ಲ ನಾಯಕರ ಸಂಖ್ಯೆ ದೊಡ್ಡ ಮಟ್ಟದಲ್ಲಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಶಕ್ತಿ ತುಂಬಿದಂತೆ ಕಾಣಿಸುತ್ತಿರುವುದು ಮೂರನೇ ಬಾರಿಗೂ ಮೋದಿಗೆ ಅದೇ ಜನಪ್ರಿಯತೆ ಉಳಿದಿರುವುದು ವರದಾನವಾಗಿದೆ. ಅಷ್ಟೇ ಅಲ್ಲದೆ ಎಲ್ಲ ಸಮೀಕ್ಷೆಗಳು ಮತ್ತೆ ಅಧಿಕಾರ ಹಿಡಿಯುವ ಸೂಚನೆಗಳನ್ನು ನೀಡಿರುವುದು ನಾಯಕರು ಮತ್ತು ಕಾರ್ಯಕರ್ತರಲ್ಲಿ ಇನ್ನಷ್ಟು ಕೆಲಸ ಮಾಡಲು ಸ್ಪೂರ್ತಿ ತುಂಬಿದಂತಾಗಿದೆ.

Lok Sabha Election 2024 INDIA Union Start Election Campaign Without Preparation

ಸಾಮಾನ್ಯವಾಗಿ ಒಂದು ಅವಧಿ ಮುಗಿಯುತ್ತಿದ್ದಂತೆಯೇ ಆಡಳಿತದಲ್ಲಿರುವ ಸರ್ಕಾರದ ವಿರುದ್ಧ ವಿರೋಧಿ ಅಲೆಗಳು ದೊಡ್ಡ ಮಟ್ಟದಲ್ಲಿ ಹುಟ್ಟಿಕೊಳ್ಳುತ್ತವೆ. ಅದು ಬಹಳಷ್ಟು ಸಂದರ್ಭಗಳಲ್ಲಿ ವಿರೋಧ ಪಕ್ಷಗಳಿಗೆ ಅಸ್ತ್ರವಾಗುತ್ತದೆ. ಆಡಳಿತ ಪಕ್ಷದ ಲೋಪದೋಷ, ಭ್ರಷ್ಟಾಚಾರಗಳನ್ನು ಬಯಲು ಮಾಡಿ ವಿರೋಧಪಕ್ಷಗಳು ಮತದಾರರ ಮುಂದೆ ಹೋಗುತ್ತವೆ. ಅಷ್ಟೇ ಅಲ್ಲದೆ ವಿರೋಧಿ ಅಲೆಗಳನ್ನು ಹುಟ್ಟು ಹಾಕುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತವೆ. ಆದರೆ ಇಲ್ಲಿ ಅದ್ಯಾವುದು ಆದಂತೆ ಕಾಣಿಸುತ್ತಿಲ್ಲ.

ಫಲಕೊಡದ ರಾಹುಲ್ ಗಾಂಧಿ ನಾಯಕತ್ವ

ಕಾಂಗ್ರೆಸ್ ನಂತಹ ಧೀರ್ಘ ಕಾಲ ದೇಶವನ್ನು ಆಳಿದಂತಹ ಪಕ್ಷ ಎನ್‌ಡಿಎ ನೇತೃತ್ವದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದಕ್ಕಾಗಲೀ, ಆಡಳಿತ ವಿರೋಧಿ ಅಲೆಗಳನ್ನು ಸೃಷ್ಟಿ ಮಾಡುವಲ್ಲಿಯಾಗಲೀ ವಿಫಲವಾಗಿದೆ. ಒಂದೆರಡು ವಿಚಾರಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದರಾದರೂ ಅದ್ಯಾವುದೂ ಫಲಕೊಡಲಿಲ್ಲ. ಮೋದಿಯಂತಹ ಮಹಾಶಕ್ತಿಯನ್ನು ತಡೆಯಲೆಂದೇ ಸುಮಾರು ಇಪ್ಪತ್ತೆಂಟಕ್ಕೂ ಹೆಚ್ಚು ಪಕ್ಷಗಳನ್ನು ಸೇರಿಸಿಕೊಂಡು ಐಎನ್ ಡಿಐಎ ಒಕ್ಕೂಟ ರಚಿಸಿಕೊಂಡರೂ ಮೇಲ್ನೋಟಕ್ಕೆ ಎನ್‌ಡಿಎಗೆ ಭಯ ಹುಟ್ಟಿಸುವ ಶಕ್ತಿಯಾಗಿ ಬೆಳೆದಂತೆ ಕಂಡು ಬರುತ್ತಿಲ್ಲ.

ಕಳೆದೊಂದು ದಶಕದಿಂದ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದು ಮಾತ್ರವಲ್ಲದೆ, ಅವರನ್ನೇ ಪ್ರಧಾನ ಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ಚುನಾವಣೆ ಹೋದ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿತು. ಈ ಬಾರಿ ಐಎನ್‌ಡಿಐಎ ರಚಿಸಿದ ಬಳಿಕವೂ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವುದು ಬೇಡ ಎಂಬ ಪರೋಕ್ಷ ಸಲಹೆಯನ್ನು ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಮಾಡಿದ್ದರಲ್ಲದೆ, ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಅಭ್ಯರ್ಥಿಯಾಗಲಿ ಎಂಬ ಹೇಳಿಕೆ ನೀಡಿದ್ದರು.

Lok Sabha Election 2024 INDIA Union Start Election Campaign Without Preparation

ಪ್ರಧಾನಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿಲ್ಲವೇಕೆ?

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಬ್ಬ ಪ್ರಧಾನ ಮಂತ್ರಿಯಾಗುವ ಎಲ್ಲ ಅರ್ಹತೆಯೂ ಇದೆ. ಆದರೆ ನೆಹರು ಕುಟುಂಬವನ್ನು ದೂರವಿಟ್ಟು ಪ್ರಧಾನಿ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡುವುದು ಸುಲಭದ ಕೆಲಸವಲ್ಲ. ಹೀಗಾಗಿಯೇ ಈ ವಿಚಾರವನ್ನು ಮುನ್ನಲೆಗೆ ತರದೆ, ಚುನಾವಣೆ ಬಳಿಕ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ. ನಾವೇನಿದ್ದರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಹೋಗುತ್ತೇವೆ ಎಂಬ ಟ್ರಂಪ್ ಕಾರ್ಡ್ ಬಳಸಿದೆ. ಕರ್ನಾಟಕದಲ್ಲಿ ಸಾಮೂಹಿಕ ನಾಯಕತ್ವದ ತಂತ್ರ ಫಲಕೊಟ್ಟಿತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಸಾಧ್ಯವಾಗುತ್ತಾ ಗೊತ್ತಿಲ್ಲ.

ಕರ್ನಾಟಕದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಮತ ತಂದುಕೊಡುವ ಸರಕಾಗಿದೆ. ಹೀಗಾಗಿ ರಾಜ್ಯ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡು ಮತ ಕೇಳುವಂತಾಗಿದೆ. ಇದರಾಚೆಗೆ ರಾಷ್ಟ್ರಮಟ್ಟದಲ್ಲಿ ನೋಡುವುದಾದರೆ ಸುಮಾರು ಇಪ್ಪತ್ತೆಂಟು ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಾರಣ ಸ್ಥಾನಗಳನ್ನು ಬಿಟ್ಟುಕೊಟ್ಟ ಕಾರಣ ಇತಿಹಾಸದಲ್ಲಿಯೇ ಅತಿ ಕಡಿಮೆ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡುವಂತಾಗಿದೆ.

ಎನ್‌ಡಿಎ ವಿರುದ್ಧ ಸುಮಾರು ಇಪ್ಪತ್ತೆಂಟು ಪಕ್ಷಗಳನ್ನು ಗುಡ್ಡೆ ಹಾಕಿಕೊಂಡು ಒಕ್ಕೂಟ ರಚಿಸಿರುವ ಕಾಂಗ್ರೆಸ್ ತಳಮಟ್ಟದಿಂದ ಸಂಘಟನೆ ಮಾಡುವಲ್ಲಿ ವಿಫಲವಾಗಿದೆ. ಜತೆಗೆ ಮಿತ್ರಪಕ್ಷಗಳ ನಡುವೆ ಒಮ್ಮತ ತರುವಲ್ಲಿಯೂ ಯಶಸ್ಸು ಕಂಡಿಲ್ಲ. ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಗಳನ್ನೇ ಬಿಟ್ಟುಕೊಟ್ಟಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಒಗ್ಗಟ್ಟಾಗಿಯೇ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತೋರಿಸುವ ಯಾವ ಪ್ರಯತ್ನವನ್ನು ಮಾಡಲಿಲ್ಲ. ಒಟ್ಟಾರೆ ಐಎನ್ ಡಿಐನಲ್ಲಿ ಹತ್ತಾರು ದೌರ್ಬಲ್ಯಗಳಿವೆ. ಅದೆಲ್ಲವನ್ನು ಮೀರಿ ಹೇಗೆ ಮುನ್ನಡೆಯುತ್ತಾರೆ ಎಂಬುದನ್ನು ಕಾದು ನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+