ಇನ್ನೂ 50 ವರ್ಷ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ: ಡಾ. ಕೆ. ಸುಧಾಕರ್
ದೊಡ್ಡಬಳ್ಳಾಪುರ: ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಹಾಗೆ ಮತ್ತೊಮ್ಮೆ ಮೋದಿ ಸರ್ಕಾರ ಎಂಬ ಘೋಷಣೆ ಮೊಳಗಿಸುವ ಮೂಲಕ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಹವಾ ಎಬ್ಬಿಸಿದ್ದಾರೆ. ಜೊತೆಗೆ, ಇನ್ನೂ 50 ವರ್ಷ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಅಂದಹಾಗೆ ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಸಮಾಗಮದಿಂದ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್ ಎಂಜಿನ್‌ನ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರು ಪ್ರತಿಪಾದಿಸಿದರು. ನೆಲಮಂಗಲ & ದೊಡ್ಡಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜೊತೆಗೆ ಡಾ.ಕೆ. ಸುಧಾಕರ್ ಚುನಾವಣಾ ಪ್ರಚಾರ ನಡೆಸಿದರು.

ಕಾಂಗ್ರೆಸ್‌ಗೆ 50 ವರ್ಷ ಅಧಿಕಾರ ಸಿಗಲ್ಲ!
ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಡಾ.ಕೆ.ಸುಧಾಕರ್, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇರುವವರೆಗೂ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯ ಮಾಡಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆ ಯಾರೂ ಕೊಟ್ಟಿಲ್ಲ. ಕಾಂಗ್ರೆಸ್ ಇಂಡಿ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. 40 ಸ್ಥಾನಕ್ಕಿಂತ ಹೆಚ್ಚು ಬರಲ್ಲ ಎನ್ನುವುದು ಗೊತ್ತಿರುವುದರಿಂದ & ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವ ಕಾರಣ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ ಎಂದು ಇದೇ ವೇಳೆ ಆರೋಪಿಸಿದ್ದಾರೆ.
ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ...
ಹಾಗೇ 2000 ರೂ. ಕೊಡುತ್ತಿರುವುದರಿಂದಲೇ ರಾಜ್ಯದ ಪರಿಸ್ಥಿತಿ ಅಧೋಗತಿಗೆ ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿಯೆ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಆರೋಪಿಸಿದರು. ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಹಣ ಗ್ಯಾರಂಟಿಗೆ ಬಳಸಲಾಗಿದ್ದು. ಮಲ್ಲಿಕಾರ್ಜುನ ಖರ್ಗೆಯವರನ್ನು ಸಿಎಂ ಮಾಡದೆ ದೆಹಲಿಗೆ ಕಳುಹಿಸಲಾಗಿದೆ. ದಲಿತರ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು ಎಂದು ಇದೇ ವೇಳೆ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್‌ರ ಹೆಸರು ಹೇಳಲು ಕಾಂಗ್ರೆಸ್ ಯೋಗ್ಯತೆ ಮತ್ತು ನೈತಿಕತೆ ಇಲ್ಲ. ಬಾಬಾ ಸಾಹೇಬರನ್ನು ಎರಡು ಬಾರಿ ಸೋಲಿಸಿದ್ದೇ ಕಾಂಗ್ರೆಸ್ ಎಂದು ಡಾ. ಕೆ. ಸುಧಾಕರ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಎಚ್‌ಡಿಕೆ ತೀವ್ರ ವಾಗ್ದಾಳಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಹಿಂದೆ ಇಂದಿರಾ ಗಾಂಧಿ ಅವರು ಬಡತನ ನಿರ್ಮೂಲನೆ ಮಾಡುವ ಯೋಜನೆ ಜಾರಿ ಮಾಡಿದ್ದರೂ ಬಡತನ ನಿವಾರಿಸಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಗ್ಯಾರಂಟಿಗಳನ್ನು ತೋರಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಹಿಳೆಯರಿಗೆ ಹಣ ನೀಡಿ, ಪುರುಷರಿಂದ ಹಣ ಪಡೆಯಲಾಗುತ್ತಿದೆ. ಇದು ಪಿಕ್ ಪಾಕೆಟ್ ಸರ್ಕಾರ ಎಂದು ಟೀಕಿಸಿದರು ಮಾಜಿ ಸಿಎಂ ಎಚ್‌ಡಿಕೆ. ಈ ಮೂಲಕ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ಅವರ ಚುನಾವಣಾ ಪ್ರಚಾರ ಭರ್ಜರಿಯಾಗಿ ಸಾಗಿದ್ದು, ಗೆಲುವಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ.












Click it and Unblock the Notifications