ಲೋಕಸಭೆ ಚುನಾವಣೆ 2024; ಸರ್ಕಾರಿ ನೌಕರರ ವರ್ಗಾವಣೆ, ಆಯೋಗದ ಸೂಚನೆ
ಬೆಂಗಳೂರು, ಡಿಸೆಂಬರ್ 26; ಕೇಂದ್ರ ಚುನಾವಣಾ ಆಯೋಗ 2024ರ ಲೋಕಸಭೆ ಚುನಾವಣೆಯ ತಯಾರಿ ಆರಂಭಿಸಿದೆ. ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಕುರಿತು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಮಾರ್ಚ್‌ನಲ್ಲಿ ಚುನಾವಣಾ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.
ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಕುರಿತು ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ರಾಜ್ಯ ಚುನಾವಣಾ ಆಯೋಗ ಕರ್ನಾಟಕಕ್ಕೆ ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿದೆ.
ಆಯೋಗದ ಸೂಚನೆಗಳು; ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಅಧಿಕಾರಿಗಳನ್ನು ತವರು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು ಎಂದು ಆಯೋಗ ಕರ್ನಾಟಕ ಸರ್ಕಾರಕ್ಕೆ ಸೂಚನೆಯನ್ನು ಕೊಟ್ಟಿದೆ.

ಮೂರು ವರ್ಷ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಣೆ ಮಾಡಿದ್ದರೆ ಅಂತಹ ಅಧಿಕಾರಿ/ ಸಿಬ್ಬಂದಿಗಳನ್ನು ಗುರುತಿಸಬೇಕು. ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಯೋಗ ಸೂಚನೆಯಲ್ಲಿ ತಿಳಿಸಿದೆ. ಜನವರಿ 31ರೊಳಗೆ ವರ್ಗಾವಣೆ ಕುರಿತು ಸರ್ಕಾರ ಆಯೋಗಕ್ಕೆ ವರದಿಯಯನ್ನು ಸಹ ಸಲ್ಲಿಸಬೇಕಿದೆ.
ಅಧಿಕಾರಿ ಅಥವ ಸಿಬ್ಬಂದಿ ತವರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಚುನಾವಣಾ ಕಾರ್ಯದೊಂದಿಗೆ ನೇರ ಸಂಪರ್ಕ ಹೊಂದಿದ್ದಲ್ಲಿ ವರ್ಗಾವಣೆ ಮಾಡಬೇಕಿದೆ. ಆದರೆ ಕಂಪ್ಯೂಟರೀಕರಣ, ವಿಶೇಷ ಶಾಖೆ, ತರಬೇತಿ ಮುಂತಾದ ಕಾರ್ಯಗಳಲ್ಲಿ ತೊಡಗಿರುವ ಅಧಿಕಾರಿಗಳಿಗೆ ಈ ಸೂಚನೆ ಅನ್ವಯಿಸುವುದಿಲ್ಲ.
2024ರ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ತಯಾರಿ ನಡೆಸುತ್ತಿವೆ. ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯವನ್ನು ನಡೆಸುತ್ತಿದೆ. ಈ ಹಿನ್ನಲೆಯಲ್ಲಿ ನೌಕರರ ವರ್ಗಾವಣೆ ಕುರಿತು ಸೂಚನೆಯನ್ನು ಹೊರಡಿಸಿದೆ.
ಪ್ರತಿ ಬಾರಿ ಚುನಾವಣೆ ಎದುರಾದಾಗಲೂ ಸಹ ಆಯೋಗ ಸರ್ಕಾರಿ ನೌಕರರ ವರ್ಗಾವಣೆ ಕುರಿತು ಸರ್ಕಾರಕ್ಕೆ ಸೂಚನೆಗಳನ್ನು ನೀಡುತ್ತದೆ. ವಿಶೇಷ ಸಂದರ್ಭ ಹೊರತುಪಡಿಸಿ ಆಯೋಗದ ಒಪ್ಪಿಗೆ ಇಲ್ಲದೇ ಸರ್ಕಾರ ನೌಕರರ ವರ್ಗಾವಣೆ ಮಾಡುವಂತಿಲ್ಲ.
ಆದರಲ್ಲೂ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಅಧಿಕಾರಿಗಳ ವರ್ಗಾವಣೆ ಮಾಡುವಂತಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯಲು ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿ/ ಸಿಬ್ಬಂದಿ ತವರು ಜಿಲ್ಲೆಯಲ್ಲಿ ಇದ್ದರೆ ಅವರನ್ನು ವರ್ಗಾವಣೆ ಮಾಡಲಾಗುತ್ತದೆ.
ಫೆಬ್ರವರಿ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಮಾಡಲಿದೆ. ಮಾರ್ಚ್ 2ನೇ ವಾರದಲ್ಲಿ ಚುನಾವಣಾ ದಿನಾಂಕ ಘೋಷಣೆ ನಿರೀಕ್ಷೆ ಮಾಡಲಾಗಿದೆ. ಚುನಾವಣಾ ದಿನಾಂಕ ಘೋಷಣೆ ದಿನದಿಂದಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಇಡೀ ದೇಶದಲ್ಲಿ ಮತದಾನ ನಡೆಯಬೇಕಾದ ಕಾರಣ ಹಲವಾರು ಹಂತದಲ್ಲಿ ಚುನಾವಣೆ ನಡೆಯುತ್ತದೆ.
ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡು ಮೇ ತಿಂಗಳಿನಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಆದ್ದರಿಂದ ಚುನಾವಣಾ ಆಯೋಗ ಈಗಾಗಲೇ ಸರಣಿ ಸಭೆಗಳನ್ನು ನಡೆಸುವ ಮೂಲಕ ಆಯೋಗ ಚುನಾವಣಾ ಕಾರ್ಯಗಳಿಗೆ ಚಾಲನೆ ನೀಡಿದೆ.
ಸದ್ಯ ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಗಳು ನಡೆಯುವುದಿಲ್ಲ. ಲೋಕಸಭೆ ಚುನಾವಣೆ ಮುಗಿದ ಬಳಿಕ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ನಡೆಯಬೇಕಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದರೆ ಸರ್ಕಾರಿ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನಂತೆ ಕಾರ್ಯ ನಿರ್ವಹಣೆ ಮಾಡಬೇಕಿದೆ.












Click it and Unblock the Notifications