ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು
ಬೆಂಗಳೂರು, ಮಾರ್ಚ್ 31: ಲೋಕಸಭಾ ಚುನಾವಣೆ ಬೆನ್ನಲ್ಲೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಸಚಿವರು ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರಿದಿದೆ ಎಂದು ರಾಜ್ಯ ಬಿಜೆಪಿ ಮಾರ್ಚ್ 31ರ ಭಾನುವಾರ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ಮುಖಂಡರ ನಿಯೋಗವು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದೆ. ಕಾಂಗ್ರೆಸ್ ಸಚಿವರು ಮತ್ತು ಶಾಸಕರು ಸರ್ಕಾರಿ ಕಟ್ಟಡಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಎಂದು ಭಾವಿಸಿರುವಂತಿದೆ. ಮಾರ್ಚ್ 30 ರಂದು ಶಿವಕುಮಾರ್ ಅವರು ನಜ್ಮಾ ನಜೀರ್ ಚಿಕ್ಕನೇರಳೆ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.
ಡಿ ಕೆ ಶಿವಕುಮಾರ್ ಸರ್ಕಾರಿ ಕಚೇರಿಯಲ್ಲಿ ರಾಜಕೀಯ ಕಾರ್ಯಕ್ರಮ ಆಯೋಜಿಸುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದು ರಾಜ್ಯದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರ ಮೂಗಿನ ಕೆಳಗೆ ನಡೆಯುತ್ತಿದ್ದರೂ, ಅವರು ಈ ಬಗ್ಗೆ ಯಾವುದೇ ಕ್ರಮ, ತೆಗೆದುಕೊಳ್ಳದೇ ಇರುವುದು ಆತಂಕಕಾರಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರ ಮತ್ತು ಶಾಸಕರ ಕಚೇರಿಗಳಲ್ಲಿ ರಾಜಕೀಯ ಚಟುವಟಿಕೆ ಮುಂದುವರೆದಿರುವ ಕುರಿತು ಬಿಜೆಪಿ ನಿಯೋಗವು ಇಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿತು.
— BJP Karnataka (@BJP4Karnataka) March 31, 2024
ನಿಯೋಗದಲ್ಲಿ ಶಾಸಕರಾದ ಶ್ರೀ @nimmasuresh, ಬೆಂಗಳೂರು ದಕ್ಷಿಣ… pic.twitter.com/vruhhfFSsO
ಲೋಕಸಭೆ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ, ಸರ್ಕಾರಿ ಅಧಿಕಾರಿಗಳು ಚುನಾವಣಾ ನೀತಿ ಸಂಹಿತೆ ಜಾರಿ ಮಾಡದಿರುವುದು ಸ್ಪಷ್ಟವಾಗಿದೆ. ಹಲವಾರು ಆಡಳಿತ ಪಕ್ಷದ ಶಾಸಕರ ಕಚೇರಿಗಳಲ್ಲಿ ಪಕ್ಷದ ಚಟುವಟಿಕೆಗಳು ಇನ್ನೂ ನಡೆಯುತ್ತಿವೆ ಎಂದು ಚುನಾವಣಾಧಿಕಾರಿಗಳಿಗೆ ಬಿಜೆಪಿ ಮಾಹಿತಿ ನೀಡಿದೆ.
"ವಿಧಾನಸೌಧ ಮತ್ತು ವಿಕಾಸಸೌಧದಲ್ಲಿರುವ ತಮ್ಮ ಕಚೇರಿಗಳಿಂದಲೇ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಮಾರ್ಚ್ 25 ರಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ಒಂದು ಉದಾಹರಣೆಯಾಗಿದೆ. ಚುನಾವಣಾ ಆಯೋಗವು ತಕ್ಷಣವೇ ಮಂತ್ರಿಗಳ ಕಚೇರಿಗಳನ್ನು ಮುಚ್ಚಬೇಕು" ಎಂದು ದೂರು ಪತ್ರದಲ್ಲಿ ತಿಳಿಸಿದೆ.
ಸಚಿವರು ಮತ್ತು ಶಾಸಕರು ಸರ್ಕಾರಿ ಕಟ್ಟಡಗಳಲ್ಲಿ ಯಾವುದೇ ರಾಜಕೀಯ ಚಟುವಟಿಕೆ ನಡೆಸದಂತೆ ನಿರ್ಬಂಧಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ನಿಯಮ ಉಲ್ಲಂಘಿಸಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.












Click it and Unblock the Notifications