ಲೋಕಸಭೆ ಚುನಾವಣೆ: ರಾಜ್ಯದ 28 ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್!
ಬೆಂಗಳೂರು, ಮಾರ್ಚ್ 01: ದೇಶದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರುತ್ತಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಹೀನಾಯ ಸೋಲಿಗೆ ಗೆಲುವಿನ ಮೂಲಕ ತಿರುಗೇಟು ನೀಡಲು ಬಿಜೆಪಿ ಪಣ ತೊಟ್ಟಿದೆ. ಜೆಡಿಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದ ಎಲ್ಲಾ 28 ಎಂಪಿ ಸ್ಥಾನಗಳನ್ನು ಗೆಲ್ಲಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ.
ಈಗಾಗಲೇ ಬಿಜೆಪಿ ಬಳಿ ಬರೋಬ್ಬರಿ 27 ಸ್ಥಾನಗಳಿವೆ. ಹೌದು, ಬಿಜೆಪಿ ಕಳೆದ ಬಾರಿ ಒಟ್ಟು 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಳಿಕ ಜೆಡಿಎಸ್‌ನ ಒಂದು ಸ್ಥಾನ ಕೂಡ ಈಗ ಅವರದ್ದೆ ಆಗಿದೆ. ಇನ್ನು, ಸ್ವತಂತ್ರ್ಯ ಸಂಸದೆ ಸುಮಲತಾ ಅಂಬರೀಷ್ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಹೀಗಾಗಿ ಅವರ ಬಳಿ 27 ಸ್ಥಾನಗಳಿದ್ದು, ಅವುಗಳನ್ನು ಉಳಿಸಿಕೊಳ್ಳಲು ಮತ್ತು ಉಳಿದ ಒಂದು ಸ್ಥಾನವನ್ನು ಕಾಂಗ್ರೆಸ್‌ನಿಂದ ಕಿತ್ತುಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ಬಿಜೆಪಿ ಪ್ಲ್ಯಾನ್ ನಡೆಯೋದು ಪ್ರವಾಸದ ನಂತರ!
ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಹೆಡೆಮುರಿ ಕಟ್ಟಲು ಭರ್ಜರಿ ಸಿದ್ಧತೆಯಲ್ಲಿರುವ ಬಿಜೆಪಿ ಸಾಲು ಸಾಲು ಸಭೆಗಳನ್ನು ನಡೆಸುತ್ತಿದೆ. ನವ ದೆಹಲಿಯಲ್ಲಿ ಅಲ್ಲದೇ ರಾಜ್ಯದಲ್ಲಿಯೂ ಹಲವು ಸಭೆಗಳನ್ನು ನಡೆಸಲಾಗಿದೆ. ಕಳೆದ ವಾರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ಮುಂದಿನ ವಾರದಿಂದ ರಾಜ್ಯ ಪ್ರವಾಸ ಮಾಡಲು ಪಕ್ಷವು ನಾಲ್ಕು ತಂಡಗಳನ್ನು ರಚಿಸಲು ನಿರ್ಧರಿಸಿದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಇಡೀ ದಿನ ಪ್ರಚಾರ ಮಾಡುವ ವಿವಿಧ ತಂಡಗಳೊಂದಿಗೆ ಕೇಂದ್ರ ನಾಯಕರು ಕೂಡ ಬರಲಿದ್ದಾರೆ ಎಂದು ಮಾಹಿತಿ ನೀಡಿದ್ದರು.
"ನಾವು ಐದು ಹಂತದ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಫಲಾನುಭವಿಗಳನ್ನು ತಲುಪುವುದು, ಸಣ್ಣ ಕಾರ್ನರ್ ಸಭೆಗಳನ್ನು ನಡೆಸುವುದು, ಸ್ಥಳೀಯ ಪ್ರಭಾವಿಗಳನ್ನು ತಲುಪುವುದು, ಕ್ಷೇತ್ರವಾರು ಸಭೆಗಳು ಮತ್ತು ಸಮಾವೇಶಗಳು ಈ ಯೋಜನೆಯ ಭಾಗವಾಗಲಿದೆ" ಎಂದು ತಮ್ಮ ಪ್ಲ್ಯಾನ್ ಬಗ್ಗೆ ವಿವರಿಸಿದ್ದರು.

ಕ್ಲಸ್ಟರ್ ಮಟ್ಟದ ಸಭೆಗಳನ್ನು ಸೂಚಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್, ಪಕ್ಷವು ಈಗಾಗಲೇ ಕೇಂದ್ರ ನಾಯಕರನ್ನು ರಾಜ್ಯಕ್ಕೆ ಕರೆತರುವ ಬಗ್ಗೆ ಮಾತನಾಡಿದೆ. ಈಗಾಗಲೇ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ ವಾರ ರಾಜ್ಯಕ್ಕೆ ಬಂದು ಕಲಬುರಗಿಯಲ್ಲಿ ಸಣ್ಣ ಗುಂಪನ್ನು ಉದ್ದೇಶಿಸಿ ಮಾತನಾಡುವುದರ ಜೊತೆಗೆ ಪಕ್ಷದ ಕಾರ್ಯಕರ್ತರ ಸಭೆಗಳನ್ನು ನಡೆಸಿದ್ದರು. ಇದು ಆರಂಭವಷ್ಟೇ, ನಾವು ಇನ್ನು ದೊಡ್ಡ ದೊಡ್ಡ ಯೋಜನೆಯನ್ನು ಹಾಕಿಕೊಂಡಿದ್ದೇವೆ" ಎಂದು ತಿಳಿಸಿದ್ದಾರೆ.
ಪಕ್ಷದ ಒಬಿಸಿ ಮೋರ್ಚಾ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, "ರಾಜ್ಯ ಸರ್ಕಾರದ ಲೋಪದೋಷಗಳನ್ನು ವಿಶೇಷವಾಗಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಬಹಿರಂಗಪಡಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದೇವೆ. ಪ್ರತಿಯೊಂದು ಗ್ಯಾರಂಟಿ ಯೋಜನೆಗಳನ್ನು ನಾವು ವಿರೋಧಿಸುವುದಿಲ್ಲ. ಆದರೆ ರಾಜ್ಯ ಸರ್ಕಾರ ವಿದ್ಯುತ್ ಶುಲ್ಕವನ್ನು ಗಣನೀಯವಾಗಿ ಹೆಚ್ಚಿಸಿದೆ" ಎಂದಿದ್ದಾರೆ.
"ಉದಾಹರಣೆಗೆ, ಒಬ್ಬ ಬಡ ಮನುಷ್ಯನು ಮನೆಯ ಬಳಕೆಗಾಗಿ ಪಾವತಿಸದಿರಬಹುದು. ಆದರೆ ಅವರು ತಮ್ಮ ವಾಣಿಜ್ಯ ಸಂಪರ್ಕಗಳಿಗೆ ಎರಡು ಅಥವಾ ಮೂರು ಪಟ್ಟು ಕಟ್ಟುತ್ತಿದ್ದಾರೆ. ಉದಾಹರಣೆಗೆ, 500 ರೂಪಾಯಿಗಳ ಬಿಲ್‌ಗಳನ್ನು ಹೊಂದಿರುವ ಸಣ್ಣ ಅಂಗಡಿಕಾರರು ಈಗ 1,500 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ. ಅದೇ ರೀತಿ ಶಕ್ತಿ ಯೋಜನೆಯಡಿ ಮಹಿಳೆಯರು ಲಾಭ ಪಡೆದಿರಬಹುದು. ಆದರೆ ಪುರುಷರ ಪ್ರಯಾಣದ ವೆಚ್ಚವು ಎರಡು ಅಥವಾ ಮೂರು ಪಟ್ಟು ಹೆಚ್ಚಾಗಿದೆ" ಎಂದು ಕಿಡಿಕಾರಿದ್ದಾರೆ.












Click it and Unblock the Notifications