'ಮಂಡ್ಯದಿಂದ ಸುಮಲತಾ ಸೋಲು ಗ್ಯಾರಂಟಿ': ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆ ಸಂದೇಶ ನೀಡಿದ ಆಂತರಿಕ ವರದಿ!
ಮಂಡ್ಯ, ಮಾರ್ಚ್ 23: ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆಯ ಗೊಂದಲ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಂದೆಡೆ ಬಿಜೆಪಿ-ಜೆಡಿಎಸ್ ಪ್ರಕಾರ ಮೈತ್ರಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗಿರುವುದು ಬಹುತೇಕ ಖಚಿತವಾಗಿದ್ದರೆ, ಮತ್ತೊಂದೆಡೆ ಹಾಲಿ ಸಂಸದೆ ಸುಮಲತಾ ಬಿಜೆಪಿಯಿಂದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಸ್ಪರ್ಧಿಸುವ ಪಟ್ಟುಹಿಡಿದಿದ್ದಾರೆ.
ತಮ್ಮ ಅವಧಿ ಮುಗಿದ ಬಳಿಕ ಬಿಜೆಪಿ ಸೇರುವ ಭರವಸೆ ನೀಡಿರುವ ಸಂಸದೆ ಸುಮಲತಾ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ಬಿಸಿತುಪ್ಪವಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಆಡಳಿತರೂಢ ಪಕ್ಷವಾಗಿರುವ ಕಾಂಗ್ರೆಸ್ ಮಣಿಸಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಂದಾಗಿದೆ. ಈ ಮೈತ್ರಿ ಪ್ರಕಾರ 28 ಲೋಕಸಭಾ ಕ್ಷೇತ್ರದಲ್ಲಿ 25 ಬಿಜೆಪಿ ಅಭ್ಯರ್ಥಿಗಳನ್ನು, ಮೂರು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ಜೆಡಿಎಸ್‌ಗೆ ಸಿಕ್ಕಿರುವ ಮೂರು ಕ್ಷೇತ್ರಗಳಲ್ಲಿ ಮಂಡ್ಯ ಕೂಡ ಒಂದಾಗಿದೆ. ಯಾಕೆಂದರೆ ಮಂಡ್ಯದಲ್ಲಿ ಜೆಡಿಎಸ್ ಪ್ರಾಬಲ್ಯವಿರುವ ಕಾರಣ ಗೆಲುವು ಸುಲಭ ಎನ್ನುವ ಲೆಕ್ಕಾಚಾರದಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ನಿರ್ಧಾರ ಬಿಜೆಪಿ ಮಾಡಿದೆ. ಆದರೆ ಕ್ಷೇತ್ರದ ಸಂಸದೆ ಸುಮಲತಾ ಬಿಜೆಪಿ ಸೇರುವ ಭರವಸೆ ನೀಡಿದ್ದು, ತಾನು ಈ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.
ಸುಮಲತಾಗೆ ಸೋಲು: ಬಿಜೆಪಿ ಆಂತರಿಕ ಆತಂಕಕಾರಿ ವರದಿ
ಮಂಡ್ಯ ಲೋಕಸಭೆ ಟಿಕೆಟ್‌ಗಾಗಿ ಪಟ್ಟು ಬಿಡದ ಸುಮಲತಾ ಬಿಜೆಪಿ ಹೈಕಮಾಂಡ್ ನಾಯಕರನ್ನೇ ನೇರವಾಗಿ ಭೇಟಿಯಾಗಿ ಟಿಕೆಟ್‌ಗಾಗಿ ಒತ್ತಡ ಹೇರುತ್ತಿದ್ದಾರೆ. ಸುಮಲತಾಗೆ ಟಿಕೆಟ್ ನೀಡಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಬಿಜೆಪಿ ಹೈಮಾಂಡ್ ಇದ್ದರೆ, ಇತ್ತ ಸುಮಲತಾಗೆ ಟಿಕೆಟ್ ನೀಡಿದರೆ ಅವರು ಸೋಲುತ್ತಾರೆ. ಈ ಬಗ್ಗೆ ಸಮೀಕ್ಷೆ ನಡೆಸಿ, ರಾಜ್ಯ ರಾಜಕೀಯದ ಆಂತರಿಕ ವರದಿ ಇದು ಎಂದು ರಾಜ್ಯ ನಾಯಕರು ಬಿಜೆಪಿ ಹೈಮಾಂಡ್‌ಗೆ ವರದಿ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಸುಮಲತಾ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಸುಮಲತಾ, ಬಳಿಕ ವರ್ಷ ಕಳೆದಂತೆ ಬಿಜೆಪಿಯತ್ತ ಒಲವು ತೋರಿದ್ದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಹೈಕಮಾಂಡ್ ಮಟ್ಟದಲ್ಲಿ ಸುಮಲತಾ ಬಿಜೆಪಿ ವರಿಷ್ಠರ ವಿಶ್ವಾಸ ಗೆದ್ದಿದ್ದು, ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಲೇ ಇಲ್ಲ.
ಸದ್ಯ ಬಿಜೆಪಿ ಟಿಕೆಟ್‌ಗಾಗಿ ಕೂಡ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಮಟ್ಟದಲ್ಲೇ ಲಾಬಿ ನಡೆಸುತ್ತಿದ್ದಾರೆ ವಿನಃ, ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಬಿ.ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅಥವಾ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮಾತನಾಡುವ, ಟಿಕೆಟ್‌ಗಾಗಿ ಚರ್ಚಿಸುವ ಯಾವ ಕೆಲಸವನ್ನೂ ಸಹ ಮಾಡಿಲ್ಲ. ಹೀಗಾಗಿ ಸುಮಲತಾಗೆ ಟಿಕೆಟ್ ನೀಡಿದರೆ ಬಿಜೆಪಿ ನಾಯಕರು ಒಗ್ಗಟ್ಟಾಗಿ ಅವರ ಪರ ಪ್ರಚಾರಕ್ಕೆ ಇಳಿಯುತ್ತಾರಾ ಎನ್ನುವುದು ಕೂಡ ಬಿಜೆಪಿ ಹೈಕಮಾಂಡ್‌ಗೆ ಪ್ರಶ್ನೆಯಾಗಿದೆ. ಈ ಎಲ್ಲಾ ಗೊಂದಲಗಳ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರ ಯಾರಾ ಪಾಲಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications