ಲೋಕಸಭಾ ಚುನಾವಣೆ ಬೆನ್ನಲ್ಲೆ ಕೆಪಿಸಿಸಿಗೆ ಮೇಜರ್ ಸರ್ಜರಿ: ಹೊಸ ಜಿಲ್ಲಾಧ್ಯಕ್ಷರ ನೇಮಕ
ಬೆಂಗಳೂರು, ಏಪ್ರಿಲ್. 01: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜ್ಯದಲ್ಲಿ ಕಾಂಗ್ರೆಸ್ ಸಲತ್ ಆಕ್ಟಿವ್ ಆಗಿದೆ. ಕಳೆದ ಬಾರಿಯ ಹೀನಾಯ ಸೋಲನ್ನು ವಿಧಾನಸಭಾ ಚುನಾವಣೆಯ ಗೆಲುವಿನ ಜೊತೆಗೆ ಸರಿ ಮಾಡಿರುವ ಕಾಂಗ್ರೆಸ್, ಗೆಲುವಿನ ಓಟವನ್ನು ಲೋಕಸಭಾ ಚುನಾವಣೆಯಲ್ಲೂ ಮುಂದುವರೆಸಲು ಬಯಸುತ್ತಿದೆ.
ಇದೆ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಗೆ ಮೇಜರ್ ಸರ್ಜರಿ ಮಾಡುತ್ತಿದೆ. ರಾಜ್ಯದಲ್ಲಿ ಇರುವ ಕೆಪಿಸಿಸಿ ಜಿಲ್ಲಾ ಸಮಿತಿಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸಿದ್ದು, ಪ್ರಕಟಣೆ ಹೊರಡಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಈ ಕೆಳಕಂಡ ಜಿಲ್ಲಾ/ನಗರ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ನೇಮಕದ ಪ್ರಸ್ತಾವನೆಯನ್ನು ಮಾನ್ಯ ಕಾಂಗ್ರೆಸ್ ಅಧ್ಯಕ್ಷರು ಈ ಕೆಳಗಿನಂತೆ ತಕ್ಷಣವೇ ಜಾರಿಗೆ ಬರುವಂತೆ ಅನುಮೋದಿಸಿದ್ದಾರೆ ಎಂದು ಏಳು ಜಿಲ್ಲೆಗಳ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಏಪ್ರಿಲ್ 1, 2024 ರಂದು ಆದೇಶಿಸಿದ್ದಾರೆ.
ಹೊಸ ಜಿಲ್ಲಾಧ್ಯಕ್ಷರ ಪಟ್ಟಿ ಹೀಗಿದೆ
1. ಬಳ್ಳಾರಿ ನಗರ - ಪ್ರಶಾಂತ್ ಅಲ್ಲಂ ವೀರಭದ್ರಪ್ಪ
2. ಬೆಂಗಳೂರು ಪೂರ್ವ - ಕೆ ನಂದಕುಮಾರ್
3. ಹಾವೇರಿ - ಸಂಜೀವಕುಮಾರ ನೇರಲಂಗಿ
4. ಕೊಪ್ಪಳ - ಅಮರೇಗೌಡ ಬಯ್ಯಾಪುರ
5. ಉಡುಪಿ - ಕಿಶನ್ ಹೆಗ್ಡೆ
6. ರಾಯಚೂರು - ಬಸವರಾಜ ಇಟಗಿ
7. ಶಿವಮೊಗ್ಗ - ಆರ್ ಪ್ರಸನ್ನ ಕುಮಾರ್
ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ
ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುವ ನಲವತ್ತು ಮಂದಿ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಜನರಲ್ ಪ್ರಿಯಾಂಕಾ ಗಾಂಧಿ ಕೂಡ ಈ ಪಟ್ಟಿಯಲ್ಲಿದ್ದಾರೆ.

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಮತ್ತು ಸಂಪುಟದ ಸಚಿವರಾದ ದಿನೇಶ್ ಗುಂಡೂರಾವ್, ಡಾ ಜಿ ಪರಮೇಶ್ವರ, ಎಚ್ ಕೆ ಪಾಟೀಲ್, ಜಮೀರ್ ಅಹಮದ್ ಖಾನ್ ಮತ್ತು ಸತೀಶ್ ಜಾರಕಿಹೊಳಿ ಕೂಡ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.












Click it and Unblock the Notifications