Lok sabha election 2024: ಕಾಂಗ್ರೆಸ್‌ನಿಂದ 15 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಪಟ್ಟಿ ಬಿಡುಗಡೆ ಯಾವಾಗ?-ಮಾಹಿತಿ
ಬೆಂಗಳೂರು, ಫೆಬ್ರವರಿ, 04: ಐದು ಗ್ಯಾರಂಟಿಗಳನ್ನು ತನ್ನ ಅಸ್ತ್ರವನ್ನಾಗಿಸಿಕೊಂಡಿರುವ ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಜಿಲ್ಲಾ ಮತ್ತು ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಕಾಂಗ್ರೆಸ್ 15 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಉಳಿದ ಹೆಸರುಗಳ ಬಿಡುಗಡೆ ಬಗ್ಗೆ ಇನ್ನು ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ 1ರಂದು ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಔತಣಕೂಟ ನಡೆಸಿದ್ದು, ಈ ವೇಳೆ 15 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಲಾಗಿದೆ. ಪಟ್ಟಿಯನ್ನು ಅನುಮೋದನೆಗಾಗಿ ಹೈಕಮಾಂಡ್‌ಗೆ ಕಳುಹಿಸಲಾಗುವುದು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಚುನಾವಣಾ ತಯಾರಿ ಆರಂಭಿಸುವಂತೆ ಅಭ್ಯರ್ಥಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಮುಖಂಡರು ಹಾಗೂ ಉಸ್ತುವಾರಿ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ ಪಟ್ಟಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳದುಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಸಾಧ್ಯತೆ ಇಲ್ಲ
ಪಕ್ಷದ ಮೂಲಗಳ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಪಕ್ಷವು ಹೊಸ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಖರ್ಗೆ ಸೋತಿದ್ದರು.
ಮೈಸೂರಿನಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಒಕ್ಕಲಿಗ ನಾಯಕನ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿದೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಸುಮಲತಾ ಸೇರ್ಪಡೆ ವಿಚಾರಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕ್ಷೇತ್ರದಿಂದ ಸ್ಟಾರ್ ಚಂದ್ರು ಹೆಸರನ್ನು ಕಾಂಗ್ರೆಸ್ ಶಾರ್ಟ್‌ಲಿಸ್ಟ್ ಮಾಡಿದೆ ಎನ್ನಲಾಗಿದೆ.
ಧಾರವಾಡದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದೆ. ಬೀದರ್‌ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಅವರನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ. ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಸಚಿವರು ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಕ್ಷೇತ್ರಗಳು ಸೇರಿದಂತೆ ಉಳಿದ 13 ಸ್ಥಾನಗಳಲ್ಲಿ ಕಾಂಗ್ರೆಸ್ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗೆದ್ದಿದ್ದವು. ಬಿಜೆಪಿ 25 ಸ್ಥಾನಗಳನ್ನು ಗೆದ್ದಿದೆ. ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದ್ದಾರೆ.












Click it and Unblock the Notifications