ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧೆಗೆ ರೆಡಿಯಾದ ಸಿದ್ದು ಶಿಷ್ಯ: ಟಿಕೆಟ್‌ಗಾಗಿ ಮೊಯ್ಲಿ ಫೈಟ್; ರೇಸ್ ನಲ್ಲಿ ಯಾರಿದ್ದಾರೆ?
ಚಿಕ್ಕಬಳ್ಳಾಪುರ, ಡಿಸೆಂಬರ್ 03: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದ ಫಲಿತಾಂಶವನ್ನ ಈ ಬಾರಿ ಕಾಂಗ್ರೆಸ್ ಪಕ್ಷ ಕಂಡಿತ್ತು. ಮುಂದಿನ ಲೋಕಸಭಾ ಚುನಾವಣೆಗೂ ಕೂಡ ಈಗಿನಿಂದಲೂ ಕೂಡ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ.
ಹೌದು, ಬರೋಬ್ಬರಿ 135 ವಿಧಾನಸಭಾ ಸ್ಥಾನಗಳನ್ನ ಗೆದ್ದ ಕಾಂಗ್ರೆಸ್, ಇದೀಗ ಬಿಜೆಪಿ ಹಾಗೂ ಜೆಡಿಎಸ್ ಗೆ ಸಡ್ಡು ಹೊಡೆಯಲು ಭರ್ಜರಿ ತಯಾರಿಯನ್ನ ನಡೆಸುತ್ತಿದ್ದು, ಈ ಬಾರೀ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಇತ್ತ ರಾಜ್ಯದಲ್ಲಿ 135 ಸ್ಥಾನಗಳನ್ನ ಗೆದ್ದಿದ್ದು, ಗ್ಯಾರಂಟಿಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮೇಲೆ ಜನರ ಒಲವು ಹೆಚ್ಚಾಗಿದ್ದು, ಇತ್ತ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆಯೂ ಕಾಂಗ್ರೆಸ್ ನಲ್ಲಿ ಹೆಚ್ಚಾಗಿದೆ.

ಈಗಾಗಲೇ ಕಾಂಗ್ರೆಸ್, ಪ್ರತಿಯೊಂದು ಲೋಕಸಭಾ ಕ್ಷೇತ್ರಕ್ಕೂ ಮಂತ್ರಿಗಳನ್ನ ವೀಕ್ಷಕರನ್ನ ನೇಮಕ ಮಾಡಿದ್ದು, ಆಕಾಂಕ್ಷಿಗಳ ಕುರಿತು ವೀಕ್ಷಕರು ವರದಿ ಸಂಗ್ರಹಿಸುತ್ತಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಯುವ ಮುಖಂಡ ರಕ್ಷಾ ರಾಮಯ್ಯ ಮತ್ತು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಬೆಂಬಲಿಗರ ಮಧ್ಯೆ ಜಟಾಪಟಿ ನಡೆದಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಗಾಗಿ ತೀವ್ರ ಪೈಪೋಟಿ ಹುಟ್ಟಿಕೊಂಡಿದೆ.
ಇನ್ನೂ ಚಿಕ್ಕಬಳ್ಳಾಪುರದಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು, ಸಭೆಯಲ್ಲಿಯೇ ಟಿಕೆಟ್ ಗಾಗಿ ಜಟಾಪಟಿ ನಡೆದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಂಸದ ವೀರಪ್ಪ ಮೊಯ್ಲಿ ಹಾಗೂ ಯುವ ಕಾಂಗ್ರೆಸ್ ಮುಖಂಡ ಹಾಗೂ ಸಿದ್ದರಾಮಯ್ಯ ಅವರ ಶಿಷ್ಯ ರಕ್ಷಾ ರಾಮಯ್ಯ ನಡುವೆ ಪೈಪೋಟಿ ತೀವ್ರಗೊಂಡಿದೆ.
ಕೆಪಿಸಿಸಿ ಕಚೇರಿಯ ಬಳಿ ರಕ್ಷಾ ರಾಮಯ್ಯ ಬೆಂಬಲಿಗರು ಪೋಸ್ಟರ್ ಹಿಡಿದುಕೊಂಡು ರಕ್ಷಾ ರಾಮಯ್ಯ ಪರವಾಗಿ ಘೋಷಣೆ ಕೂಗಿರಕ್ಷಾ ರಾಮಯ್ಯಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಆಗ್ರಹಿಸಿದ್ದು, ರಕ್ಷಾ ರಾಮಯ್ಯ ಹಾಗೂ ಮಾಜಿ ಸಂಸದ ವೀರಪ್ಪ ಮೊಯ್ಲಿ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ವೇಳೆ ಮಾಜಿ ಸಂಸದ ವೀರಪ್ಪ ಮೊಯ್ಲಿ ಕೆಪಿಸಿಸಿಯಲ್ಲಿ ರಕ್ಷಾ ರಾಮಯ್ಯ ಬೆಂಬಲಿಗರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಸಭೆಯಲ್ಲಿ ಭಾಗಿಯಾಗದೆ ವಾಪಸ್ ಹೋದರು. ಈ ವೇಳೆ ವೀರಪ್ಪ ಮೊಯ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ನಾನು ಈ ಬಾರಿ ಲೋಕಸಭೆಗೆ ಸ್ಪರ್ಧಿಸುತ್ತೇನೆ. ಟಿಕೆಟ್‌ಗಾಗಿ ಇನ್ನೂ ಅರ್ಜಿ ಆಹ್ವಾನಿಸಿಲ್ಲ. ರಕ್ಷಾ ರಾಮಯ್ಯ ಟಿಕೆಟ್ ಕೇಳುವುದರಲ್ಲಿ ತಪ್ಪೇನಿಲ್ಲ. ಆದರೆ, ಯಾರಿಗೆ ಕೊಡಬೇಕು ಎಂದು ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಸಭೆಯ ಬಳಿಕ ಮಾಧ್ಯಮಗಳ ಜೊತೆಗೆ ರಕ್ಷಾ ರಾಮಯ್ಯ ಅವರು ಮಾತನಾಡಿ, ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಎರಡೂವರೆ ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ನಾನು ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಭ್ಯರ್ಥಿ ಆಯ್ಕೆಗೆ ಉಸ್ತುವಾರಿಯಾಗಿರುವ ಜಮೀರ್ ಅಹಮದ್ ಖಾನ್ ಮಾತನಾಡಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ ರಕ್ಷಾ ರಾಮಯ್ಯ ಎನ್.ಎಚ್. ಶಿವಶಂಕರ ರೆಡ್ಡಿ ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಮುಖಂಡ ಕೆಂಚೇಗೌಡ ಅವರ ಹೆಸರುಗಳೊಂದಿಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು. ಐವರು ಆಕಾಂಕ್ಷಿಗಳ ಪರ ಹಲವರು ಮಾತನಾಡಿದ್ದಾರೆ. ಎಲ್ಲ ವಿವರಗಳೊಂದಿಗೆ ವರದಿ ಸಲ್ಲಿಸುತ್ತೇವೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಅಭ್ಯರ್ಥಿ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.












Click it and Unblock the Notifications