ಮದ್ಯಪ್ರಿಯರಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಯಡಿಯೂರಪ್ಪ
ಬೆಂಗಳೂರು, ಏಪ್ರಿಲ್ 1: ಮುಂದಿನ ಎರಡು ವಾರ ಲಾಕ್ ಡೌನ್ ಇದ್ದರೂ, ಕೊನೆಯ ಪಕ್ಷ ಮದ್ಯ ಮಾರಾಟದ MRP ಅಂಗಡಿಗಳು ತೆರೆಯಬಹುದು ಎನ್ನುವ ಮದ್ಯಪ್ರಿಯರ ಆಸೆಗೆ ಮುಖ್ಯಮಂತ್ರಿ ಯಡಿಯೂರಪ್ಪ ತಣ್ಣೀರು ಎರೆಚಿದ್ದಾರೆ.
ಕೇರಳದ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಅನುವು ಮಾಡಿಕೊಡಬಹುದು ಎನ್ನುವ ಮದ್ಯಪ್ರಿಯರ ನಿರೀಕ್ಷೆ ಹುಸಿಯಾಗಿದೆ. "ಮದ್ಯಪ್ರಿಯರು ಏಪ್ರಿಲ್ 14ರ ವರೆಗೆ ಕಾಯಲೇಬೇಕು" ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ ಮದ್ಯ ಸಿಗದೇ ಸುಮಾರು ಹತ್ತಕ್ಕೂ ವ್ಯಸನಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದರು. ಸರಕಾರದ ಬೊಕ್ಕಸಕ್ಕೆ ಭರ್ಜರಿ ಇಳುವರಿ ತಂದುಕೊಡುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆ ಮಂಚೂಣಿಯಲ್ಲಿದೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, "ಲಾಕ್ ಡೌನ್ ನಿಂದ ನಗರದಲ್ಲಿ ಸಿಲುಕಿಕೊಂಡಿರುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಿಲ್ಡರುಗಳೇ ಊಟ, ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಲಾಗುವುದು" ಎಂದು ಹೇಳಿದ್ದಾರೆ.
ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆದ ಸಭೆಯ ನಂತರ ಮಾತನಾಡಿದ ಯಡಿಯೂರಪ್ಪ, "ಏಪ್ರಿಲ್ 14ರವರೆಗೆ ಮದ್ಯದಂಗಡಿ ಬಂದ್ ಇರಲಿದೆ. ಯಾರೆಲ್ಲಾ ಎಣ್ಣೆ ಕುಡಿಯಬೇಕೋ ಅಲ್ಲಿಯವರೆಗೆ ಕಾಯಬೇಕು" ಎಂದು ಮುಖ್ಯಮಂತ್ರಿಗಳು ನಗೆಚಟಾಕಿ ಹಾರಿಸಿದ್ದಾರೆ.
ಈ ವೇಳೆ ಗೋಷ್ಠಿಯಲ್ಲಿ ಹಾಜರಿದ್ದ ಕಂದಾಯ ಸಚಿವ ಆರ್.ಅಶೋಕ್, "ಲಾಕ್ ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ಮದು, ಊಟ ಮಾತ್ರ ನಮ್ಮದು" ಎಂದು ಹೇಳಿದ್ದಾರೆ.












Click it and Unblock the Notifications