ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಚಾಯಿತಿ ಫೈಟ್ : ಮತದಾನ ಅಂತ್ಯ, ಫೆ.23ರಂದು ಫಲಿತಾಂಶ

|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ಎರಡನೇ ಹಂತದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಮೊದಲ ಹಂತದ ಚುನಾವಣೆ ಫೆ.13ರಂದು ನಡೆದಿತ್ತು. ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು ಫೆಬ್ರವರಿ 23ರ ಮಂಗಳವಾರ ಮತ ಎಣಿಕೆ ನಡೆಯಲಿದೆ.

ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ನೋಟಾ ಮತದಾನ ಮಾಡಲು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಅವಕಾಶ ಕಲ್ಪಿಸಲಾಗಿತ್ತು. [ಮೊದಲ ಹಂತದ ಚುನಾವಣೆ ವಿವರಗಳು]

election

ಎರಡನೇ ಹಂತದಲ್ಲಿ 15 ಜಿಲ್ಲೆಗಳ 531 ಜಿಲ್ಲಾ ಪಂಚಾಯಿತಿ ಮತ್ತು 1,939 ತಾಲೂಕು ಪಂಚಾಯಿತಿಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮತದಾನಕ್ಕಾಗಿ 17,698 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿತ್ತು. ಚುನಾವಣೆಯ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ....[ಜಿಲ್ಲಾ ಪಂಚಾಯತ್ ಕಣದಲ್ಲಿ ಮಂಡ್ಯದ ಟೆಕ್ಕಿ]

ಸಮಯ 5 ಗಂಟೆ : ಮತಯಂತ್ರದಲ್ಲಿನ ದೋಷ, ಮತದಾರರ ಹೆಸರು ನಾಪತ್ತೆ, ಕಾರ್ಯಕರ್ತರ ವಾಗ್ವದಗಳನ್ನು ಹೊರತುಪಡಿಸಿದರೆ 2ನೇ ಹಂತದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ.

ಸಮಯ 4 ಗಂಟೆ : ಸಿದ್ದರಾಮನಹುಂಡಿಯ ಮತಗಟ್ಟೆ ಕೇಂದ್ರ 329ರಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಸರ್ಕಾರ ಸಾವಿರ ದಿನಗಳನ್ನು ಪೂರೈಸಿದೆ. ಸರ್ಕಾರದ ಬಗ್ಗೆ ಜನರಲ್ಲಿ ಯಾವ ರೀತಿಯ ಅಭಿಪ್ರಾಯವಿದೆ? ಎಂಬುದು ಈ ಚುನಾವಣೆಯಲ್ಲಿ ತಿಳಿಯಲಿದೆ' ಎಂದು ಹೇಳಿದರು. [ಚಿತ್ರ : ಮತ ಹಾಕಿ ಗೆಲುವು ನಮ್ಮದು ಎಂದ ಸಿದ್ದರಾಮಯ್ಯ]

ಸಮಯ 3 ಗಂಟೆ : ಚುನಾವಣಾ ಕಾನೂನಿನ ಬಗ್ಗೆ ತಿಳಿ ಹೇಳಲು ಬಂದ ಬಿಜೆಪಿ ಅಭ್ಯರ್ಥಿ ಹಾಗೂ ವಿಶ್ವಹಿಂದೂ ಪರಿಷತ್ ಮುಖಂಡನ ಕಾರಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡಸಿದ ಘಟನೆ ಅಡ್ಡೂರು ಜಿಲ್ಲಾ ಪಂಚಾಯತಿ ಮತಕೇಂದ್ರದ ಮುಂದೆ ನಡೆದಿದೆ. ಬಿಜೆಪಿ ಅಭ್ಯರ್ಥಿ ಹರೀಶ್ ಹಾಗೂ ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿನ ಕಲ್ಲು ತೂರಾಟ ನಡೆಸಲಾಗಿದೆ.

mangaluru

ಸಮಯ 2 ಗಂಟೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯ ಮತಗಟ್ಟೆ ಕೇಂದ್ರ 329ರಲ್ಲಿ ಶನಿವಾರ ಮಧ್ಯಾಹ್ನ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, 'ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ' ಎಂದರು.

ಸಮಯ 1 ಗಂಟೆ : 15 ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಶೇ 40ರಷ್ಟು ಮತದಾನವಾಗಿದೆ.

ಸಮಯ 12.30 : ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಮತಗಟ್ಟೆ ಬಳಿ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯರು ಅದನ್ನು ಕೊಂದು ಹಾಕಿದ್ದಾರೆ. ಈ ಮತಗಟ್ಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಮತದಾನ ಮಾಡಲಿದ್ದಾರೆ.

ಸಮಯ 12 ಗಂಟೆ : ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಂಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮತದಾನ ಬಹಿಷ್ಕರಿಸಿ ಸ್ಥಳಕ್ಕೆ ತಹಶೀಲ್ದಾರ್ ಬರಬೇಕೆಂದು ಘೋಷಣೆ ಕೂಗುತ್ತಿದ್ದಾರೆ.

ಸಮಯ 11.30 : ರಾಯಚೂರಿನಲ್ಲಿ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 7 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿರುವ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಮಯ 11 ಗಂಟೆ : ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಜಿಲ್ಲಾ ಪಂಚಾಯತ್ ಕ್ಷೇತ್ರದ ಅಡ್ಡೂರು ಮತಗಟ್ಟೆ ಬಳಿ ವಿಶ್ವಹಿಂದೂ ಪರಿಷತ್ ಮುಖಂಡನ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಸಮಯ 10.30 : ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರು ಗ್ರಾಮದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಸಮಯ 10.10 : ಭವಾನಿ ರೇವಣ್ಣ ಅವರು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಲಿ ಎಂದು ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ಹಳೇಕೋಟೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಸಮಯ 9.30 : ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿ ಕಚೇರಿ ನಿರ್ಮಾಣ ಮಾಡಲು ಆಗ್ರಹಿಸುತ್ತಿದ್ದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಚಿಕ್ಕಮಣ್ಣಾಪುರ ಗ್ರಾಮದ ಜನರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಸಮಯ 9 ಗಂಟೆ : ಪಶುಸಂಗೋಪನೆ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದ್ದಾರೆ. 'ಎಲ್ಲರೂ ಮತದಾನ ಮಾಡಿ' ಎಂದು ಕರೆ ನೀಡಿದ್ದಾರೆ.

minister a manju

ಸಮಯ 8.30 : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡಿಹಳ್ಳಿಯಲ್ಲಿ ಉತ್ತಮ ರಸ್ತೆ, ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಲಾಗಿದೆ.

ಸಮಯ 8.10 : 15 ಜಿಲ್ಲೆಗಳಲ್ಲಿ ಮತದಾನಕ್ಕಾಗಿ 17,698 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಇವುಗಳ ಪೈಕಿ 3,626 ಅತಿ ಸೂಕ್ಷ್ಮ ಮತ್ತು 4097 ಸೂಕ್ಷ್ಮ ಮತಗಟ್ಟೆಗಳಾಗಿವೆ. ನಕ್ಸಲ್ ಪೀಡಿತ ಮತ್ತು ಗಡಿಭಾಗದ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಭದ್ರತೆಗಾಗಿ ಕೇಂದ್ರಿಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.

polling

ಸಮಯ 7.45 : ಮಂಡ್ಯದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ವೊಬ್ಬರು ಕೈತುಂಬಾ ಪಗಾರ ಬರುತ್ತಿದ್ದ ಕೆಲಸ ಬಿಟ್ಟು ರಾಜಕೀಯಕ್ಕೆ ಬಂದಿದ್ದಾರೆ. ಕೆ.ಆರ್.ನಗರ ತಾಲೂಕಿನ ಶಶಿಧರ್ ಅವರು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದು, ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸಮಯ 7.30 : ಇಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಚಾಮರಾಜನಗರ, ಬೀದರ್, ಬಳ್ಳಾರಿ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿ ಚುನಾವಣೆ ನಡೆಯುತ್ತಿದೆ.

English summary
Voting has been completed for second phase of the Taluk and Zilla panchayat elections 2016 at Karnataka. On Saturday, February 20th, polling began at 7.00 at 15 districts of Karnataka. Results will be announced on Tuesday, Feb 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X