ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ: ಎರಡು ದಿನಗಳ ಸಮಾವೇಶದಲ್ಲಿ ಆಗ್ರಹ
2018ರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿತ್ತು.
ಕಲಬುರಗಿ, ಮಾರ್ಚ್ 06: ಬಸವಕಲ್ಯಾಣದಲ್ಲಿ ಭಾನುವಾರ ಮುಕ್ತಾಯಗೊಂಡ ಜಾಗತಿಕ ಲಿಂಗಾಯತ ಮಹಾಸಭಾದ ಮೊದಲ ಸಮಾವೇಶದಲ್ಲಿ ನಿರೀಕ್ಷೆಯಂತೆ ರಾಜ್ಯ ಸರ್ಕಾರ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಮಾಡಿರುವ ಶಿಫಾರಸನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
20ಕ್ಕೂ ಹೆಚ್ಚು ಮಠಾಧೀಶರು, ಧಾರ್ಮಿಕ, ಸಾಮಾಜಿಕ ಮುಖಂಡರು ಈ ಸಮಾವೇಶದಲ್ಲಿ ಉಪಸ್ಥಿತರಿದ್ದು, ಹಿರಿಯ ಸಾಹಿತಿ ಗೋ.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಅಧಿವೇಶನದಲ್ಲಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿದ್ದು, ವೀರಣ್ಣ ರಾಜೂರು ಮತ್ತು ಮುಕ್ತಾ ಕಾಗಲ್ ಸಂಪಾದಿಸಿರುವ ಜಗದಗಲ ಸ್ಮರಣಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಗಿದೆ.

ಲಿಂಗಾಯತ ಸಮುದಾಯದ ವಿವಿಧ ಉಪಪಂಗಡಗಳನ್ನು ಒಗ್ಗೂಡಿಸುವ ಕುರಿತು ಮೊದಲ ಅಧಿವೇಶನ ನಡೆದಿದ್ದು, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಈ ಸಮಾವೇಶದಿಂದ ಅಂತರ ಕಾಯ್ದುಕೊಂಡಿದ್ದರು. 2018ರಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಿತ್ತು. ಆದರೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾಪವನ್ನು ತಿರಸ್ಕರಿಸಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಇದು ಒಂದು ಎಂದು ಅಂದಾಜಿಸಲಾಗಿದೆ.
ಲಿಂಗಾಯತ ಸಮುದಾಯದ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿ ಜಾಗತಿಕ ಲಿಂಗಾಯತ ಮಹಾಸಭಾವನ್ನು ಘೋಷಿಸುವುದು, ಬಸವ ಜಯಂತಿಯನ್ನು ಎಲ್ಲ ರಾಜ್ಯಗಳಲ್ಲಿ ನಡೆಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡುವುದು. ಜ್ಞಾನಜ್ಯೋತಿ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಒತ್ತಡ ಹೇರುವುದು ಸೇರಿದಂತೆ ಹಲವು ಹಕ್ಕೋತ್ತಾಯಗಳನ್ನು ಸಮಾವೇಶದಲ್ಲಿ ಅಂಗೀಕರಿಸಲಾಯಿತು.
ಇವುಗಳ ಜೊತೆಗೆ ಉದ್ಘಾಟನೆಗೆ ಕಾಯುತ್ತಿರುವ ನೂತನ ಸಂಸತ್ ಭವನಕ್ಕೆ 'ಅನುಭವ ಮಂಟಪ' ಎಂದು ಹೆಸರಿಡುವಂತೆಯೂ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರವನ್ನು ಕೋರಲಾಗಿದೆ.












Click it and Unblock the Notifications