ತಾಕತ್ ಇದ್ರೆ ಆರ್ ಎಸ್ ಎಸ್ , ಭಜರಂಗದಳ ಬ್ಯಾನ್ ಮಾಡಲಿ: ಕಾಂಗ್ರೆಸ್ ಸರ್ಕಾರಕ್ಕೆ ರೇಣುಕಾಚಾರ್ಯ ಸವಾಲು
ದಾವಣಗೆರೆ, ಮೇ 29: ಕಾಂಗ್ರೆಸ್ ನವರು ಆರ್ ಎಸ್ ಎಸ್ ಹಾಗೂ ಭಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ತಾಕತ್ ಇದ್ರೆ ಹಿಂದು ಸಂಘಟನೆಗಳನ್ನ ಬ್ಯಾನ್ ಮಾಡಲಿ ಎಂದು ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಈ ಕುರಿತು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವ ಮತ್ತು ಈಗಲೂ ಅದನ್ನೆ ಹೇಳಿದ್ದೀರಿ, ನಿಮಗೆ ತಾಕತ್ತಿದ್ರೆ ಆರ್ ಎಸ್ ಎಸ್, ಭಜರಂಗದಳ, ವಿಶ್ವ ಹಿಂದು ಪರಿಷತ್ ಬ್ಯಾನ್ ಮಾಡಬೇಕು ಎಂದು ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿರು.

ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಕೇಸರಿ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸಲ್ಲ. ಈ ದೇಶದಲ್ಲಿ ಹಿಂದುತ್ವ ಮತ್ತು ಕೇಸರೀಕರಣ ಇದೆ. ಅದರಲ್ಲಿ ತಪ್ಪೇನು? ಭಾರತ ಬಿಟ್ಟು ಪಾಕಿಸ್ತಾನದಲ್ಲಿ ನಾವು ಕೇಸರಿಕರಣ ಮಾಡಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.
ನಮ್ಮ ರಾಷ್ಟ್ರಧ್ವಜದಲ್ಲಿ ಕೇಸರಿ ಇದೆ, ಮಠಾದೀಶರು ಹಾಕೋದು ಕೇಸರಿಯನ್ನೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಹೇಳಿಕೆ ಕೊಡುತ್ತಿಲ್ಲ. ಆದರೆ, ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾತನಾಡುತ್ತಿದ್ದಾರೆ. ಇಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಬಿಟ್ಟು ವಿಷಯಾಂತರ ಮಾಡುವುದೇ ಇವರ ಪ್ರಮುಖ ಉದ್ದೇಶವಾಗಿದೆ. ಇವರು ನೀಡಿರುವ ಕೊಡುಗೆಗಳನ್ನ ಕೊಡಲು ಒಂದು ವರ್ಷಕ್ಕೆ 1ಲಕ್ಷ ಕೋಟಿ ಬೇಕು. ಹೀಗಾಗಿ, ಈ ಗ್ಯಾರಂಟಿ ಯೋಜನೆಗಳನ್ನ ಕೊಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಜನರ ಕಣ್ಣಿಗೆ ಚುನಾವಣಾ ಪ್ರಚಾರ ವೇಳೆಗೆ ಈ ರೀತಿಯಾಗಿ ಭರವಸೆಗಳನ್ನ ಕೊಟ್ಟು ಮಣ್ಣೆರಚ್ಚಿದ್ದೀರಿ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಇನ್ನು ವಿದ್ಯುತ್ ಬಿಲ್ ಕಟ್ಟದಂತೆ ಕರೆ ನೀಡಿದ ರೇಣುಕಾಚಾರ್ಯ ಅವರು, ಜೂನ್ 1 ರೊಳಗೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬರದಿದ್ದರೆ ಪೊರಕೆ ಸೇವೆ ಮಾಡುವುದು ಗ್ಯಾರಂಟಿ. ಇವರು ಗ್ಯಾರಂಟಿ ಯೋಜನೆಗಳನ್ನ ನೀಡಿ ಶ್ರೀಲಂಕಾ, ಪಾಕಿಸ್ತಾನದಂತೆ ಕರ್ನಾಟಕ ಮಾಡುತ್ತಾರೆ. ಇವರು ಗ್ಯಾರಂಟಿ ಯೋಜನೆಗಳನ್ನ ನೀಡಲಿ. ಆದರೆ, ಸರ್ಕಾರ ಸಾಲ ಮಾಡಬಾರದು ಎಂದು ಹೇಳಿದರು.












Click it and Unblock the Notifications