ಕಮಿಷನ್ ದಂಧೆ ವಿರುದ್ಧ ಎಎಪಿಯಂತೆ ಕ್ರಮ ಕೈಗೊಳ್ಳುವ ತಾಕತ್ತು, ಧಮ್ಮು ಸಿಎಂಗೆ ಇಲ್ಲ: ಬ್ರಿಜೇಶ್ ಕಾಳಪ್ಪ
ಬೆಂಗಳೂರು ಜನವರಿ 17: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರ ಹಾಗೂ ಶಾಸಕರುಗಳ 40 ಪರ್ಸೆಂಟ್ ಕಮಿಷನ್ ದಂಧೆ ಬಯಲು ಮಾಡುತ್ತಿದ್ದರೂ ಯಾವುದೇ ತನಿಖೆ ನಡೆಸದೇ ಬಿಜೆಪಿ ಸರ್ಕಾರ ಸುಮ್ಮನಿದೆ. ನಮ್ಮ ಸರ್ಕಾರದ ಮಾದರಿಯಲ್ಲಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವ ಧಮ್ಮು, ತಾಕತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇಲ್ಲ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿ (AAP) ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರವರು ಸುದ್ದಿಗೋಷ್ಠಿ ನಡೆಸಿ ಚಿತ್ರದುರ್ಗದ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿರವರ ಭ್ರಷ್ಟಾಚಾರವನ್ನು ಬಯಲಿಗೆ ತಂದಿದ್ದರು. ಗುತ್ತಿಗೆದಾರ ಮಂಜುನಾಥ್‌ರವರಿಂದ ತಿಪ್ಪಾರೆಡ್ಡಿಯರವರು 90 ಲಕ್ಷ ರೂಪಾಯಿ ಮೊತ್ತದ ಕಮಿಷನ್ ಪಡೆದಿರುವುದನ್ನು ಬಹಿರಂಗ ಮಾಡಿದ್ದಾರೆ ಎಂದರು.
ಇದಷ್ಟೇ ಅಲ್ಲದೇ ರಾಜ್ಯ ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ವಿರುದ್ಧ ಕೆಂಪಣ್ಣ ಅವರು ನಿರಂತರವಾಗಿ ಹೋರಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಈ ಬಗ್ಗೆ ಅವರು ದೂರು ನೀಡಿದ್ದರು. ಆದರೆ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಣ್ಣ ತನಿಖೆಯನ್ನೂ ಸಹ ನಡೆಸಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರವರನ್ನು ಮೌನಿ ಎಂದು ಲೇವಡಿ ಮಾಡುತ್ತಿದ್ದ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿ ಸರ್ಕಾರದ 40 ಪಸೆಂಟ್ ಕಮಿಷನ್ ಬಗ್ಗೆ ಬಾಯಿ ಬಿಡುತ್ತಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.

ಪಂಜಾಬ್‌ನ ಎಎಪಿ ಸರ್ಕಾರದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ವಿರುದ್ಧ 01 ಪರ್ಸೆಂಟ್ ಕಮಿಷನ್ ಪಡೆದ ಆರೋಪ ಕೇಳಿ ಬಂದಿತ್ತು. ನಮ್ಮ ಸರ್ಕಾರವು ತಕ್ಷಣವೇ ಅವರನ್ನು ವಜಾ ಮಾಡಿ ತನಿಖೆಗೆ ಆದೇಶಿಸಿತು. ಪೊಲೀಸರು ಅವರನ್ನು ಕೂಡಲೇ ಬಂಧಿಸಿದರು. ಆದರೆ ಕರ್ನಾಟಕದಲ್ಲಿ ಶಾಸಕರು ಹಾಗೂ ಸಚಿವರ ವಿರುದ್ಧ ನಿರಂತವಾಗಿ ಆರೋಪ ಕೇಳಿಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಎಎಪಿ ಯೋಜನೆ ಕಾಪಿ
ಚುನಾವಣೆ ಸಂದರ್ಭದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಎಎಪಿ ಸರ್ಕಾರದ ಯೋಜನೆಗಳನ್ನು ಅನುಸರಿಸುವ (ಕಾಪಿ) ಮಾಡುತ್ತಿರುವ ಬಿಜೆಪಿ ಸರ್ಕಾರವು, ಭ್ರಷ್ಟಾಚಾರ ವಿರೋಧಿ ನಿಲುವನ್ನು ಏಕೆ ಕಾಪಿ ಮಾಡುತ್ತಿಲ್ಲ?. ಕೆಂಪಣ್ಣನವರ ಆರೋಪಕ್ಕೆ ಸಾಕ್ಷಿ ಕೇಳುವ ಮೂಲಕ ಬಿಜೆಪಿ ನಾಯಕರು ಅಕ್ರಮವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ಹಗಲಿನ ಬದಲು ರಾತ್ರಿ ನಡೆಯುವ ಇಂತಹ ಅಕ್ರಮಗಳಿಗೆ ಸಾಕ್ಷಿ ಹೇಗಿರಲು ಸಾಧ್ಯ? ಎಂದು ಬ್ರಿಜೇಶ್ ಕಾಳಪ್ಪ ಕಿರಿ ಕಾರಿದರು.

ಆಮ್ ಆದ್ಮಿ ಪಾರ್ಟಿ ಮಾದರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಭಾರೀ ಪ್ರಮಾಣ ಹಣ ಉಳಿತಾಯವಾಗಲಿದೆ. ಇದರಿಂದ ಉಚಿತ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರಗಳು ಇದನ್ನು ಸಾಧಿಸಿ ತೋರಿಸಿವೆ. ಕಾಂಗ್ರೆಸ್ ಹಾಗೂ ಬಿಜೆಪಿಯಂತಹ ಭ್ರಷ್ಟ ಪಕ್ಷಗಳು ಉಚಿತ ಯೋಜನೆಗಳ ಭರವಸೆ ನೀಡಬಹುದೇ ಹೊರತು ಜಾರಿಗೆ ತರಲು ಅವುಗಳಿಂದ ಸಾಧ್ಯವಿಲ್ಲ ಎಂದು ಅವರು ಗುಡುಗಿದರು.












Click it and Unblock the Notifications