ಪರಿಷತ್ ಫೈಟ್: ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಡಿಮಾಂಡ್!
ಬೆಂಗಳೂರು, ಮೇ 26: ಲೋಕಸಭಾ ಚುನಾವಣೆ ಮುಗಿಸಿರುವ ಕರ್ನಾಟಕದ ಕಾಂಗ್ರೆಸ್ ನಾಯಕರು ವಿಧಾನ ಪರಿಷತ್ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 6 ಮತ್ತು 11 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಕಾಂಗ್ರೆಸ್‌ನಲ್ಲಿ ಚಟುವಟಿಕೆಯೂ ಬಿರುಸಾಗಿದೆ.
ಜೂನ್ 13ರಂದು ವಿಧಾನಸಭೆಯಿಂದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ 135 ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಪರಿಷತ್ ಚುನಾವಣೆ ಟಿಕೆಟ್‌ಗೆ ಪೈಪೋಟಿ ಜೋರಾಗಿದೆ.

ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್ ಲೋಕಸಭೆಯ ಜೊತೆಗೆ ಪರಿಷತ್ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನವನ್ನುಗಳಿಸಿ ಪರಿಷತ್‌ನಲ್ಲಿಯೂ ಬಲ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸುತ್ತಿದೆ. ವಿವಿಧ ಸಚಿವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿ ಟಿಕೆಟ್ ಬಗ್ಗೆ ಮಾತುಕತೆ ನಡೆಸಿದರು.
ಸಚಿವರ ಜೊತೆ ಸಭೆ: ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಚಿವರಾದ ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರ ಜೊತೆ ಗೃಹ ಕಛೇರಿಯಲ್ಲಿ ಚುನಾವಣೆ ಸಿದ್ಧತೆ ಹಾಗೂ ಕಾರ್ಯತಂತ್ರಗಳ ಕುರಿತು ಚರ್ಚಿಸಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿಲ್ಲ. ವಿಧಾನಸಭೆಯಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವುದು ಪಕ್ಷದ ಗುರಿಯಾಗಿದೆ. ಅದಕ್ಕಾಗಿ ಪಕ್ಷ ತಂತ್ರ ರೂಪಿಸುತ್ತಿದೆ.
ವಿಧಾನಸಭೆ ಬಲದ ಆಧಾರದ ಮೇಲೆ ಕಾಂಗ್ರೆಸ್ 7 ಸ್ಥಾನಗಳಲ್ಲಿ ಸುಲಭವಾಗಿ ಗೆಲ್ಲಬಹುದು. ಎರಡು ಸೀಟುಗಳನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂಬುದು ಡಿ. ಕೆ. ಶಿವಕುಮಾರ್ ಮುಂದೆ ಬೇಡಿಕೆ ಇಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಮೇ 29 ಅಥವ 30ರಂದು ಅಭ್ಯರ್ಥಿಗಳ ಪಟ್ಟಿಯೊಂದಿಗೆ ದೆಹಲಿಗೆ ಭೇಟಿ ನೀಡುವ ನಿರೀಕ್ಷೆ ಇದೆ. 100ಕ್ಕೂ ಅಧಿಕ ಟಿಕೆಟ್ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡಬೇಕು ಎಂಬ ಒತ್ತಾಯವಿದೆ. ಆದರೆ ಇದಕ್ಕೆ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ.
ಅರವಿಂದ್ ಕುಮಾರ್ ಅರಳಿ, ಎನ್. ಎಸ್. ಬೋಸರಾಜು, ಕೆ. ಗೋವಿಂದರಾಜು, ಡಾ. ತೇಜಸ್ವಿನಿ ಗೌಡ, ಮನಿರಾಜು ಗೌಡ ಪಿ. ಎಂ., ಕೆ. ಪಿ. ನಂಜುಂಡಿ, ಬಿ. ಎಂ. ಫಾರೂಕ್, ರುಘುನಾಥ ಮಲ್ಕಾಪುರೆ, ಎನ್. ರವಿ ಕುಮಾರ್, ಎಸ್. ರುದ್ರೇಗೌಡ, ಕೆ. ಹರೀಶ್ ಕುಮಾರ್ ಪರಿಷತ್ ಸದಸ್ಯತ್ವದ ಅವಧಿ ಮುಕ್ತಾಯಗೊಳ್ಳಲಿದೆ.
ಕಾಂಗ್ರೆಸ್ ಸಚಿವರಾದ ಎನ್. ಎಸ್. ಬೋಸರಾಜು ಅವರನ್ನು ಪುನಃ ಆಯ್ಕೆ ಮಾಡಲೇಬೇಕಿದೆ. ಕೆ. ಗೋವಿಂದರಾಜು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದು, ಅವರು ಮರು ಆಯ್ಕೆಯಾಗುವುದು ಖಚಿತವಾಗಿದೆ. ಆದ್ದರಿಂದ ಉಳಿದ 5 ಸ್ಥಾನಗಳ ಟಿಕೆಟ್‌ಗೆ ಭಾರೀ ಪೈಪೋಟಿ ಇದೆ.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಲ 75. ಸದ್ಯ ಸಭಾಪತಿ ಸೇರಿ 70 ಸ್ಥಾನಗಳು ಭರ್ತಿಯಾಗಿವೆ. ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ 7 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣ ವಿಧೇಯಕ ಮಂಡನೆ ಸಮಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಿದೆ.
ಅಲ್ಲದೇ ಸಭಾಪತಿ ಸ್ಥಾನವೂ ಬಿಜೆಪಿಯ ಕೈಯಲ್ಲಿ ಇದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಪರಿಷತ್ ಬಲ ಹೆಚ್ಚಿಸಿಕೊಳ್ಳುವುದು, ಸಭಾಪತಿಸ ಸ್ಥಾನ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.












Click it and Unblock the Notifications