ಮುಷ್ಕರ ವಾಪಸ್, ಇಂದಿನಿಂದ ಪಿಯುಸಿ ಮೌಲ್ಯಮಾಪನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 20 : ಕರ್ನಾಟಕ ಸರ್ಕಾರ ಘೋಷಣೆ ಮಾಡಿದ್ದ ಒಂದು ವೇತನ ಬಡ್ತಿಯಿಂದ ತೃಪ್ತರಾಗದ ಉಪನ್ಯಾಸಕರು ಪ್ರತಿಭಟನಾ ರೂಪದಲ್ಲಿ ಅದನ್ನು ಸರ್ಕಾರಕ್ಕೇ ಮರಳಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ, ಮುಷ್ಕರ ವಾಪಸ್ ಪಡೆದಿದ್ದು, ಬುಧವಾರದಿಂದ ಪಿಯುಸಿ ಮೌಲ್ಯಮಾಪನ ಆರಂಭವಾಗಲಿದೆ.

ದ್ವಿತೀಯ ಪಿಯುಸಿ ಮೌಲ್ಯಮಾಪನ ವಿವಾದ ಬಗೆಹರಿದಿದೆ. ಮೌಲ್ಯಮಾಪನ ಬಹಿಷ್ಕರಿಸಿ 18 ದಿನದಿಂದ ಮಷ್ಕರ ನಡೆಸುತ್ತಿದ್ದ ಉಪನ್ಯಾಸಕರು ಬುಧವಾರದಿಂದ ಮೌಲ್ಯಮಾಪನ ಆರಂಭಿಸಲಿದ್ದಾರೆ. ಬೇಡಿಕೆ ಈಡೇರುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. [ಮೌಲ್ಯಮಾಪನ: ವಿದ್ಯಾರ್ಥಿಗಳ ಭವಿಷ್ಯ ಅಯೋಮಯ]

kimmane rathnakar

ಮಂಗಳವಾರ ಸಂಜೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಫ್ರೀಡಂಪಾರ್ಕ್‌ಗೆ ಭೇಟಿ ನೀಡಿ, ಉಪನ್ಯಾಸಕರ ಜೊತೆ ಮಾತುಕತೆ ನಡೆಸಿದರು. ಸರ್ಕಾರದ ನಿರ್ಧಾರ ತಿಳಿಸಿದ ಅವರು, ಮೌಲ್ಯಮಾಪನಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ['ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಳಂಬ']

ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಉಪನ್ಯಾಸಕರು, 'ಸರ್ಕಾರದ ನಿರ್ಧಾರವನ್ನು ಖಂಡಿಸುತ್ತೇವೆ. ವೇತನ ಆಯೋಗದ ಪ್ರಕಾರ ನಮಗೆ ಸಿಗಬೇಕಾಗಿರುವುದನ್ನು ಕೇಳುತ್ತಿದ್ದೇವೆ. ನಾವು ಭಿಕ್ಷೆ ಕೇಳುತ್ತಿಲ್ಲ, ನಮ್ಮ ಬೇಡಿಕೆಯನ್ನು ಕಡೆಗಣಿಸಿರುವುದು ಖಂಡನೀಯ' ಎಂದು ಘೋಷಣೆ ಕೂಗಿದರು. [ಉಪನ್ಯಾಸಕರ ಪ್ರತಿಭಟನೆ: ಎಂಎಲ್ಸಿಗಳ ಮೇಲೆ ತೂರಿಬಂದ ಚಪ್ಪಲಿ]

'ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಇನ್ನೂ ಹೋರಾಟ ಮುಂದುವರಿಸಿದರೆ ವೃತ್ತಿಗೆ ಗೌರವ ತರುವುದಿಲ್ಲ ಎಂಬ ಕಾರಣಕ್ಕೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಆದರೆ, ಬೇಡಿಕೆ ಈಡೇರುವವರೆಗೆ ಹೋರಾಟ ನಿರಂತರವಾಗಿರುತ್ತದೆ' ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದರು.

ಸರ್ಕಾರಕ್ಕೆ ವಾಪಸ್ : 'ಕುಮಾರ ನಾಯಕ್‌ ವರದಿಯನ್ನು ಪೂರ್ಣಪ್ರಮಾಣದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡುತ್ತಾ ಬಂದರೂ ಸರ್ಕಾರ ಗಮನಹರಿಸಿಲ್ಲ. ಅನಿವಾರ್ಯವಾಗಿ ಮೌಲ್ಯಮಾಪನ ಬಹಿಷ್ಕರಿಸಬೇಕಾಯಿತು. ಈಗ ಸರ್ಕಾರ ಒಂದು ವೇತನ ಬಡ್ತಿ ನೀಡುವುದಾಗಿ ಹೇಳಿದೆ. ಸರ್ಕಾರ ಭಿಕ್ಷೆಯ ರೂಪದಲ್ಲಿ ನೀಡಿರುವ ವೇತನ ಬಡ್ತಿಯನ್ನು ಸರ್ಕಾರಕ್ಕೇ ಮರಳಿಸುತ್ತೇವೆ' ಎಂದು ತಿಮ್ಮಯ್ಯ ಪುರ್ಲೆ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
2nd PUC evaluation row : PU lecturers who have boycotted evaluation work withdraw strike on April 19,2016. 2nd PUC evaluation will begins on Wednesday.
Please Wait while comments are loading...