ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ: ಸಿದ್ದರಾಮಯ್ಯ

|
Google Oneindia Kannada News

ವಿಜಯನಗರ,ಜನವರಿ18: ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಹೊಸಪೇಟೆ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಮೊದಲು ಬಾರಿಗೆ ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್‌ ಸರ್ಕಾರ ಎಂಬ ಹೆಸರು ಬಂದಿದೆ. ಸಂತೋಷ್‌ ಪಾಟೀಲ್‌, ಪ್ರಸಾದ್‌ ಎಂಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಶಿವಕುಮಾರ್‌ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ 90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ವನ್ನು ಮಂಜುನಾಥ್‌ ಎಂಬ ಗುತ್ತಿಗೆದಾರ ಬಿಡುಗಡೆ ಮಾಡಿದ್ದಾರೆ. ಕಮಿಷನ್‌ ಆರೋಪಗಳ ಬಗ್ಗೆ ತನಿಖೆ ಮಾಡಿಸಲು ಸಾಕ್ಷಿ ಕೊಡಿ ಎಂದು ಬೊಮ್ಮಾಯಿ ಕೇಳುತ್ತಿದ್ದರು, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಬೊಮ್ಮಾಯಿ? ಅವರೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ

ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ

ಮಾತೆತ್ತಿದ್ದರೆ ದಮ್ಮಿದ್ದರೆ, ತಾಕತ್ತಿದ್ದರೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಅವರೇ ನಿಮಗೆ ತಾಕತ್ತಿದ್ದಿರೆ, ದಮ್ಮಿದ್ದರೆ ಒಂದೇ ವೇದಿಕೆ ಮೇಲೆ ಜನರ ಮುಂದೆ ಅಭಿವೃದ್ಧಿ ಚರ್ಚೆಗೆ ಬನ್ನಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

ಕಾಂಗ್ರೆಸ್‌ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ. ಚುನಾವಣೆಗೆ ಮುಂಚೆ ನೀಡುವ ಎಲ್ಲಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಪ್ರಯತ್ನ ಮಾಡುತ್ತದೆ ಎಂಬುದನ್ನು ಅತ್ಯಂತ ಆತ್ಮ ವಿಶ್ವಾಸದಿಂದ ಹೇಳುತ್ತೇನೆ. ಎಂದಿಗೂ ಮಾತು ತಪ್ಪಲ್ಲ. 2013ರಿಂದ 18ರವರೆಗೆ ಕಾಂಗ್ರೆಸ್‌ ನೀಡಿದ್ದ 165 ಭರವಸೆಗಳಲ್ಲಿ158 ಈಡೇರಿಸಿದೆ. ಯಾರಾದರೂ ದಾಖಲಾತಿ ನೋಡಬಹುದು. ಆದರೆ, ಬಿಜೆಪಿ 2018ರಲ್ಲಿ600 ಭರವಸೆಗಳನ್ನು ನೀಡಿ 10 ಭರವಸೆ ಈಡೇರಿಸಿಲ್ಲ. ಈ ಕುರಿತು ಚರ್ಚೆಗೆ ಸಿಎಂ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದೇನೆ. ಆದರೆ, ಅವರಿಗೆ ಧೈರ್ಯ ಇಲ್ಲ. ಸಿಎಂ ಎಷ್ಟು ಸುಳ್ಳುಗಾರ. ಬಿಜೆಪಿ ಸುಳ್ಳಿನ ಫ್ಯಾಕ್ಟರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೂಡಲೇ ಆನಂದ್ ಸಿಂಗ್ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು

ಕೂಡಲೇ ಆನಂದ್ ಸಿಂಗ್ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು

ಹೊಸಪೇಟೆ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿದ್ದರಿಂದ ಹತ್ತು ಸಾವಿರ ಎತ್ತಿನ ಗಾಡಿ, ನಲ್ವತ್ತು ಸಾವಿರ ರೈತ ಕುಟುಂಬಗಳು ಬೀದಿಗೆ ಬಂದವು. ಈ ಭಾಗದಲ್ಲಿಕಬ್ಬು ಬೆಳೆದು ಎಲ್ಲಿಗೆ ಹೋಗಬೇಕು? ವೀರಾವೇಶದ ಭಾಷಣ ಮಾಡುವ ಆನಂದ್‌ ಸಿಂಗ್‌ ಯಾಕೆ ತೆಗೆಸಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಕೂಡಲೇ ಈ ಕಾರ್ಖಾನೆಯನ್ನು ಪುನಾರಂಭಿಸಲಾಗುವುದು. ಗಾಣದಲ್ಲಿ ಬೆಲ್ಲ ತಯಾರಿ ನಿಲ್ಲಿಸುವಂತೆ ಜಿಲ್ಲಾಡಳಿತ ನೋಟಿಸ್‌ ಕೊಡುತ್ತಿದೆ ಎಂದು ಕೇಳಿರುವೆ. ಇದಕ್ಕೆ ಆನಂದ್‌ ಸಿಂಗ್‌ ಅವರೇ ಕಾರಣರಾಗಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ ಗಾಣ ನಡೆಸುವವರಿಗೆ ತೊಂದರೆ ಕೊಡಬಾರದು. ಮುಂದೆ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಏರಿದ ಧ್ವನಿಯಲ್ಲಿ ಎಚ್ಚರಿಸಿದರು.

ಹೊಸಪೇಟೆ ನಗರದಲ್ಲಿಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆಯಿದೆ. ಸಚಿವ ಆನಂದ್‌ ಸಿಂಗ್‌ ಅವರು ತಮ್ಮ ಅಧಿಕಾರಾವಧಿಯಲ್ಲಿಒಂದು ಮನೆ ಕಟ್ಟಿಸಲಿಲ್ಲ. ಹಕ್ಕು ಪತ್ರ ವಿತರಿಸಲಿಲ್ಲ. ಅವರಿಗೆ ನೈತಿಕತೆ ಬಗ್ಗೆ ನಂಬಿಕೆ ಇದ್ದರೆ ಕೂಡಲೇ ರಾಜಿನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ಗುಡುಗಿದರು.

ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ

ನಾವು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ

ತುಂಗಭದ್ರಾ ಜಲಾಶಯದಲ್ಲಿ37 ಟಿಎಂಸಿ ಹೂಳು ತುಂಬಿದೆ. ಆಂಧ್ರಪ್ರದೇಶಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತಿರುವ ಇನ್ನೂರು ಟಿಎಂಸಿ ನೀರುಳಿಸಲು ಪರ್ಯಾಯ ಡ್ಯಾಂ ಕಟ್ಟುತ್ತೇವೆಂದು ಬಿಜೆಪಿಯವರು ಬಜೆಟ್‌ನಲ್ಲಿ ಘೋಷಿಸಿ ಅನುದಾನ ಬಿಡುಗಡೆ ಮಾಡಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಮಾನಾಂತರ ಜಲಾಶಯ ಕಟ್ಟುತ್ತೇವೆ ಎಂದು ಘೋಷಿಸಿದರು.

ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿಗೆ 5 ವರ್ಷಗಳಲ್ಲಿ 1 ಲಕ್ಷದ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಎಷ್ಟು ಖರ್ಚು ಮಾಡಿದ್ದೀರಿ ಬೊಮ್ಮಾಯಿ? ಈ ವರ್ಷದ ಕೊನೆಗೆ ಖರ್ಚಾಗುವುದು 45 ಸಾವಿರ ಕೋಟಿ ಮಾತ್ರ. ಇನ್ನೂ 1 ಲಕ್ಷ ಕೋಟಿ ಹಣ ಖರ್ಚು ಮಾಡಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರ ಜೊತೆ ಈ ಹಿಂದೆ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ನೀರಾವರಿಗೆ 10,000 ಕೋಟಿ ಖರ್ಚು ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದೆ. ಇದರಂತೆ ನಾವು 5 ವರ್ಷಗಳಲ್ಲಿ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.

ವಿಜಯನಗರದಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ತೀರ್ಮಾನ ಮಾಡಬೇಕು

ವಿಜಯನಗರದಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸುವ ತೀರ್ಮಾನ ಮಾಡಬೇಕು

ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲಾ ಜಾತಿ ಧರ್ಮದ ಬಡವರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದೆ, ಈಗ 4 ಕೆ.ಜಿ ಗೆ ಕಡಿಮೆ ಮಾಡಿದ್ದಾರೆ. ಇದು ಯಾರಪ್ಪನ ಮನೆ ಹಣ? ಜನರ ದುಡ್ಡಲ್ಲಿ ಜನರಿಗೆ ಅಕ್ಕಿ ಕೊಡಲು ಏನು ರೋಗ ಇವರಿಗೆ. ಇಂಥವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ತಲಾ 5 ವಿಧಾನಸಭಾ ಕ್ಷೇತ್ರಗಳು ಇವೆ. ವಿಜಯನಗರದಲ್ಲಿ 5ಕ್ಕೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅನ್ನು ಗೆಲ್ಲಿಸುವ ತೀರ್ಮಾನ ಇಲ್ಲಿನ ಜನ ಮಾಡಬೇಕು.

ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಮಾಡಿದ್ದು ಕಾಂಗ್ರೆಸ್‌ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಅವರ ಜೊತೆ ನಾವೆಲ್ಲ ಹೋರಾಟ ಮಾಡಿ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಮನಮೋಹನ್‌ ಸಿಂಗ್‌ ಅವರನ್ನು ಒಪ್ಪಿಸಿ ಇದನ್ನು ಜಾರಿಗೆ ತಂದವರು ನಾವು. ಹೆಚ್.ಕೆ ಪಾಟೀಲ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆ, ಈ ಸಮಿತಿ ನೀಡಿದ್ದ ವರದಿಯ ಶಿಫಾರಸನ್ನು ನೂರಕ್ಕೆ ನೂರರಷ್ಟು ಒಪ್ಪಿ ಜಾರಿ ಮಾಡಿದ್ದು ನಾವು. ಹೈದ್ರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೆ ಬಿಜೆಪಿ ಸಾಧನೆ. 371(ಜೆ) ವಿರೋಧ ಮಾಡಿದ್ದು ಬಿಜೆಪಿಯ ಅಡ್ವಾಣಿ ಅವರು. ಎಸ್,ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿರುವಾಗ ಲಾಲ್‌ ಕೃಷ್ಣ ಅಡ್ವಾಣಿ ಅವರು ಗೃಹ ಸಚಿವರಾಗಿದ್ದ ವೇಳೆ ಕೃಷ್ಣ ಅವರಿಗೆ ಪತ್ರ ಬರೆದು 371(ಜೆ) ಮಾಡಲು ಸಾಧ್ಯವಿಲ್ಲ ಎಂದಿದ್ದರು. ವಾಜಪೇಯಿ ಪ್ರಧಾನಿ ಆಗಿದ್ದಾಗ ಇದನ್ನು ಮಾಡಿಸಲು ಸಾಧ್ಯವಾಗಿಲ್ಲ. ಮನಮೋಹನ್‌ ಸಿಂಗ್‌ ಅವರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಇಂದು ಈ ಭಾಗದ ಮಕ್ಕಳು ಇಂಜಿನಿಯರ್‌, ಲಾಯರ್‌, ಡಾಕ್ಟರ್‌, ಶಿಕ್ಷಕರಾಗಲು 371(ಜೆ) ವಿಶೇಷ ಮೀಸಲು ಸೌಲಭ್ಯ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಭಾಗದ 36,000 ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಆನಂದ್‌ ಸಿಂಗ್‌ ನೀವೆಷ್ಟು ಹುದ್ದೆ ಭರ್ತಿ ಮಾಡಿದ್ದಿಯಪ್ಪ? ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಹೈದ್ರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಪ್ರತೀ ವರ್ಷ 5000 ಕೋಟಿ ಹಣ ಖರ್ಚು ಮಾಡುತ್ತೇವೆ ಮತ್ತು ಈ ಭಾಗದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದರ ಜೊತೆಗೆ ಈಗ 4 ಕೆ.ಜಿ ಮಾಡಿರುವ ಅಕ್ಕಿಯನ್ನು 10 ಕೆ.ಜಿ ಗೆ ಏರಿಕೆ ಮಾಡುತ್ತೇವೆ. ಈ ನಂಬಿಕೆ ನಿಮಗೆ ಇದೆ ಅಲ್ವಾ? ಎಂದಿದ್ದಾರೆ.

English summary
Congress Prajadhwani Yatre; corruption increased after bjp came into power siddaramaiah said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X