Laxman Savadi: ಜನವರಿಯಲ್ಲಿ ನನಗೆ ಶುಕ್ರದೆಸೆ: ಸಚಿವ ಸ್ಥಾನದ ಸುಳಿವು ಕೊಟ್ಟ ಲಕ್ಷ್ಮಣ ಸವದಿ
ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಬದಲಾವಣೆ ಚರ್ಚೆಗಳು ಜೋರಾಗಿವೆ. ಈ ವರ್ಷ ಪೂರ್ಣಗೊಳ್ಳುವುದರಲ್ಲಿ ಸಚಿವ ಸಂಪುಟ ಪುನರ್‌ರಚನೆಯಾಗಲಿದೆ. ಹಲವರ ಖಾತೆ ಬದಲಾಗಲಿದ್ದು, ಹೊಸಬರು ಸಚಿವ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಸಂದರ್ಭದಲ್ಲೇ ಈ ಒಪ್ಪಂದ ನಡೆದಿದ್ದು, ಇದಕ್ಕೆ ಎಲ್ಲರೂ ಒಪ್ಪಿದ್ದರು ಎನ್ನಲಾಗಿದೆ. ಅದರಂತೆ ಸದ್ಯದಲ್ಲೇ ಸಚಿವರು ಬದಲಾಗಲಿದ್ದಾರೆ. ಈಗಾಗಲೇ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವರಿದ್ದಾರೆ. ಇದರಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಕೂಡ ಒಬ್ಬರು. ಜನವರಿಯಲ್ಲಿ ನನಗೆ ಶುಕ್ರದೆಸೆ ಪಕ್ಕಾ ಎನ್ನುವ ಮೂಲಕ ಸಚಿವ ಸ್ಥಾನದ ಸುಳಿವು ನೀಡಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದ ಲಕ್ಷ್ಮಣ ಸವದಿ ಅವರು ಬಳಿಕ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದರು. ಹೀಗಾಗಿ ಕಾಂಗ್ರೆಸ್‌ನಲ್ಲಿಯೂ ಅವರಿಗೆ ಸಚಿವ ಸ್ಥಾನ ನೀಡುವ ಮಾತುಕತೆ ಆಗಿತ್ತು ಎನ್ನಲಾಗಿದೆ. ಆದರೆ ಆರಂಭದಲ್ಲೇ ಸಚಿವ ಸ್ಥಾನ ನೀಡುವುದು ಸರಿಯಲ್ಲ ಎಂಬ ಕಾರಣಕ್ಕೆ ಮುಂದಿನ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು. ಅದರಂತೆ ಈಗಿ ಸಚಿವ ಸಂಪುಟ ವಿಸ್ತರಣೆಯಾದರೆ ಅರ್ಹರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಕೂಡ ಇದ್ದಾರೆ ಎಂದು ಹೇಳಲಾಗಿದೆ.

ಇದು ಮೊದಲೇ ಗೊತ್ತಿತ್ತು
ಈ ಹಿಂದೆಯೂ ಹಲವು ಬಾರಿ ಸಚಿವ ಸ್ಥಾನದ ಆಸೆಯನ್ನು ವೇದಿಕೆಗಳಲ್ಲಿ ಸವದಿ ಬಿಚ್ಚಿಟ್ಟಿದ್ದಾರೆ. ಇದೀಗ ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ ಎನ್ನುವ ಮೂಲಕ ಸಚಿವ ಸ್ಥಾನ ಸಿಗುವ ಸುಳಿವು ನೀಡಿದ್ದಾರೆ. ಇಂದು ಅಥಣಿಯಲ್ಲಿ ಈ ಬಗ್ಗೆ ಮಾತನಾಡಿರುವ ಅವರು ಸಂಪುಟ ಪುನರ್ ರಚನೆ ಆಗುವುದು ನನಗೆ ಮೊದಲೇ ತಿಳಿದಿತ್ತು. ಇದರ ಬಗ್ಗೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಕೂಡ ಹೇಳಿದ್ದಾರೆ ಎಂದಿದ್ದಾರೆ.
ನನಗೆ ಸಚಿವನಾಗುವ ಸಂದರ್ಭ ಬರಲಿ, ಆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ. ನಾನು ಯಾವುದೇ ಅಧಿಕಾರವನ್ನು ಕೇಳಿ ಪಡೆದಿಲ್ಲ. ದೇವರ ಆಶೀರ್ವಾದಿಂದ, ಹೈಕಮಾಂಡ್‌ನ ಒಪ್ಪಿದರೆ ನನಗೆ ಸಚಿವ ಸ್ಥಾನ ಅದಾಗಿಯೇ ಸಿಗುತ್ತೆ. ಹೈಕಮಾಂಡ್ ಕೊಡುವ ಜವಾಬ್ದಾರಿಯನ್ನ ನಿಭಾಯಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಕೂಡ ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಈ ಮಾತುಕತೆಯಾಗಿತ್ತು. ಮುಂದೆ ಅರ್ಹರಿಗೆ ಸಚಿವ ಸ್ಥಾನ ಸಿಗುತ್ತೆ ಎಂದು ಹೇಳಲಾಗಿತ್ತು. ಇದಕ್ಕೆ ಎಲ್ಲರೂ ಒಪ್ಪಿದ್ದರು. ಈಗ ನಾನು ಕೂಡ ಪಕ್ಷ ಹೇಳಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ. ನಾನು ಸಚಿವ ಸ್ಥಾನದಿಂದ ಕೆಳಗಿಳಿದರೂ ಪರವಾಗಿಲ್ಲ , ಹೊಸಬರಿಗೆ ಅವಕಾಶ ಸಿಗಬೇಕು ಎಂದಿದ್ದರು. ಹೀಗಾಗಿ ಸದ್ಯದಲ್ಲೇ ಸಚಿವ ಸಂಪುಟ ಪುನರ್‌ರಚನೆಯಾಗಲಿದ್ದು, ಹಲವರು ಖಾತೆ ಬದಲಾಗಲಿದೆ. ಜೊತೆಗೆ ಹೊಸಬರು ಹಾಗೂ ಹಿರಿಯ ಅರ್ಹರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications