ಲ್ಯಾಂಡ್ ಲಾರ್ಡ್ ಕನ್ನಡ: ಕನ್ನಡದಲ್ಲಿ ಮರಾಠಿ, ತಮಿಳು ಮಾದರಿ ಜಾತಿ ವಿಷಯದ ಸಿನಿಮಾಗಳು ಯಾಕೆ ಬರಲ್ಲ: ವಿ.ಎಲ್ ನರಸಿಂಹಮೂರ್ತಿ ಬರಹ
ಕನ್ನಡದಲ್ಲಿ ಈಚೆಗೆ ತೆರೆಕಂಡಿರುವ ಲ್ಯಾಂಡ್ ಲಾರ್ಡ್ ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಹಲವರು ಈ ರೀತಿಯ ಸಿನಿಮಾ ಕನ್ನಡದಲ್ಲಿ ಇನ್ನೂ ಹೆಚ್ಚಾಗಬೇಕು ಹಾಗೂ ಈ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಜಾತಿ ಎನ್ನುವ ಕಟು ವಾಸ್ತವದ ವಸ್ತುವನ್ನಿಟ್ಟುಕೊಂಡು ಯಾಕೆ ಕನ್ನಡದಲ್ಲಿ ಮರಾಠಿ, ತಮಿಳು ಸಿನಿಮಾಗಳ ತರಹ ಸಿನಿಮಾಗಳು ಬರುವುದಿಲ್ಲ ಎನ್ನುವ ಪ್ರಶ್ನೆಗೆ ಉತ್ತರವಾಗಿ ಪಾಲಾರ್, ಹೆಬ್ಬುಲಿ ಕಟ್ ತರದ ಬೆರಳೆಣಿಕೆಯಷ್ಟು ಹೊಸ ತಲೆಮಾರಿನ ನಿರ್ದೇಶಕರ ಪ್ರಯತ್ನಗಳು ನಮ್ಮ ಮುಂದಿವೆ.
ಈಗ ನಿರ್ದೇಶಕ ಜಡೇಶ ಹಂಪಿ ತಮ್ಮ 'ಲ್ಯಾಂಡ್ ಲಾರ್ಡ್' ಸಿನಿಮಾದ ಮೂಲಕ ಕನ್ನಡದ ಮುಖ್ಯವಾಹಿನಿಯ ಕಮರ್ಷಿಯಲ್ ಸಿನಿಮಾದಲ್ಲೂ ಜಾತಿಯ ವಸ್ತುವನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ ಎಂದು ಹವ್ಯಾಸಿ ಬರಹಗಾರ ವಿ.ಎಲ್ ನರಸಿಂಹಮೂರ್ತಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅವರ ಬರಹ ಇಲ್ಲಿದೆ.

ಮರಾಠಿ - ಹಿಂದಿ ಭಾಷೆಯಲ್ಲಿ ನಾಗರಾಜ್ ಮಂಜುಳೆ, ತಮಿಳಿನಲ್ಲಿ ಪ. ರಂಜಿತ್, ಮಾರಿಸೆಲ್ವರಾಜ್ ಮತ್ತು ವೆಟ್ರಿಮಾರನ್ ತರದ ನಿರ್ದೇಶಕರು ಜಾತಿಯನ್ನು ವಸ್ತುವಾಗಿ ಇಟ್ಟುಕೊಂಡು ಮಾಡಿದ ಸಿನಿಮಾಗಳು ಉಂಟು ಮಾಡಿದ ಕಂಪನ ಮತ್ತು ಕಮರ್ಷಿಯಲ್ ಆಗಿ ಈ ನಿರ್ದೇಶಕರು ಪಡೆದ ಯಶಸ್ಸು ಈಗ ಜಾತಿಯ ಕುರಿತು ದೊಡ್ಡ ದೊಡ್ಡ ಸ್ಟಾರ್‌ಗಳೂ ಜಾತಿಯ ಕುರಿತು ಸಿನಿಮಾ ಮಾಡಲು ಆಸಕ್ತಿ ತೋರಿಸುವಂತೆ ಮಾಡಿದೆ. ಮುಖ್ಯವಾಗಿ ತಳಸಮುದಾಯಗಳಿಂದ ಬಂದ ನಿರ್ದೇಶಕರು ತಮ್ಮ ಸಿನಿಮಾಗಳ ವಸ್ತು, ಭಾಷೆ, ಸೌಂದರ್ಯ ಪ್ರಜ್ಞೆ ಮೂಲಕ ಭಾರತೀಯ ಸಿನಿಮಾರಂಗ ಜಾತಿಯ ಕುರಿತ ಇಟ್ಟುಕೊಂಡಿದ್ದ 'ಮಡಿ'ಯನ್ನು ಚಚ್ಚಿ ಬಿಸಾಕುತ್ತಿದ್ದಾರೆ.
ತಮ್ಮ ಜೀವನಾನುಭವದ ಜೊತೆಗೆ ಅಸ್ಪೃಶ್ಯ ಮತ್ತು ತಳಸಮುದಾಯಗಳು ಎದುರಿಸುವ ಸಾಮಾಜಿಕ ವಾಸ್ತವತೆಯ ಆಯಾಮಗಳನ್ನು ಮುಖ್ಯವಾಹಿನಿ ಸಿನಿಮಾದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡುವವವರು ಮತ್ತು ಜಾತಿಯ ಕುರಿತ ಸಿನಿಮಾ ಮಾಡಿದರೆ ನಿರ್ದಿಷ್ಟ ಸಮುದಾಯಗಳ ಬೆಂಬಲ ಸಿಗುತ್ತದೆ, ಸಿನಿಮಾ ಗೆಲ್ಲುತ್ತದೆ ಎನ್ನುವ ವ್ಯಾವಹಾರಿಕ ಮನೋಭಾವದವರ ಮಧ್ಯೆ ಇರುವ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ. ಯಾಕೆಂದರೆ ರಾಜಕಾರಣದಲ್ಲಿ ಆಗಿರುವಂತೆ ಕಲೆ, ಸಾಹಿತ್ಯ, ನಾಟಕ, ಅಕಡೆಮಿಕ್ ಮತ್ತು ಬೌದ್ಧಿಕ ವಲಯ ಎಲ್ಲಾ ಕಡೆಯೂ ಜಾತಿ ಮತ್ತು ಅಂಬೇಡ್ಕರ್ ಈಗ ತುಂಬಾ ಬೇಡಿಕೆ ಇರುವ ವಿಷಯ.
ಇನ್ನು ಹೆಸರಲ್ಲೆ ಸೂಚನೆ ಇರುವಂತೆ 'ಲ್ಯಾಂಡ್ ಲಾರ್ಡ್'ನ ವಸ್ತು ಭೂ ಮಾಲೀಕತ್ವಕ್ಕೆ ಸಂಬಂಧಿಸಿರುವುದು. ಭೂಮಿಯ ಮೇಲೆ ಒಡೆತನ ಇಲ್ಲದಿರುವುದು ಮತ್ತು ಕೃಷಿ ಕೂಲಿಗಳಾಗಿ ಭೂಮಾಲೀಕರ ಮೇಲೆ ಆರ್ಥಿಕವಾಗಿ ಅವಲಂಬಿತವಾಗಿರುವುದು ತಳಸಮುದಾಯಗಳು ತಮ್ಮ ಮೇಲೆ ನಡೆಯುವ ಸಾಮಾಜಿಕ ಶೋಷಣೆಯ ವಿರುದ್ಧ ದನಿಎತ್ತಲಾರದಂತೆ ಮಾಡುವ ಮುಖ್ಯ ಕಾರಣಗಳು.
ಈ ಸಿನಿಮಾ ಕೋಲಾರ ಸೀಮೆಯಲ್ಲಿ ಸೆಟ್ ಆಗಿದೆ. ಅಸ್ಪಶ್ಯ ಸಮುದಾಯದ ಹುಡುಗನೊಬ್ಬ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಾಸಾದರೆ, ಹೊಸಬಟ್ಟೆ ತೊಟ್ಟರೆ ಅದನ್ನು ಸಹಿಸದೆ ಕೊಂದು ಹಾಕಿರುವ ಚರಿತ್ರೆ ಈ ಸೀಮೆಗಿದೆ. ಸ್ವಾತಂತ್ರ್ಯಾನಂತರ ಸಂವಿಧಾನ ಕೊಟ್ಟ ಹಕ್ಕುಗಳ ಕಾರಣಕ್ಕೆ ಶಿಕ್ಷಣ, ಭೂಮಿಯ ಒಡೆತನ, ಸಮಾನ ವೇತನದ ಪ್ರಶ್ನೆಗಳನ್ನು ದಮನಿತರು ಎತ್ತಲು ಪ್ರಾರಂಭಿಸಿದರು. ಆದರೆ ಯಾವಾಗ ದಲಿತರು ಕೆಲಸಕ್ಕೆ ತಕ್ಕ ಕೂಲಿ ಕೇಳಲು ಪ್ರಾರಂಭಿಸಿದರೋ, ಭೂಮಿಯ ಒಡೆಯರಾಗಲು ಪ್ರಯತ್ನಿಸಿದರೋ ಅಲ್ಲೆಲ್ಲ ದೊಡ್ಡ ದೊಡ್ಡ ಮಾರಣಹೋಮಗಳಾಗಿವೆ. ಕಿಲ್ವೇನ್ಮಣಿ, ಕಾರಂಚೇಡು, ಚೆಂಡೂರು, ಖೈರ್ಲಾಂಜಿ, ಕಂಬಾಲಪಲ್ಲಿ, ನಾಗಲಾಪಲ್ಲಿ, ಹುಣಸೀಕೋಟೆ.. ಹೀಗೆ ದೇಮುಿ ಎಲ್ಲೆಲ್ಲಿ ದಲಿತರ ಮಾರಣಹೋಮಗಳಾಗಿವೆಯೋ ಅವೆಲ್ಲವೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭೂಮಿಯ ಪ್ರಶ್ನೆ ಪ್ರಮುಖವಾಗಿದೆ.
ತಲೆಮಾರುಗಳಿಂದ ತಮ್ಮ ಮೇಲೆ ಅವಲಂಬಿತರಾಗಿರುವ ಜನ ಶಿಕ್ಷಣ, ಸರ್ಕಾರಿ ನೌಕರಿ, ಭೂಮಿಯ ಒಡೆತನದ ಕಾರಣಕ್ಕೆ ಸ್ವಾವಲಂಬಿಗಳಾಗುವುದಕ್ಕೆ ಪ್ರಯತ್ನ ಪಡುತ್ತಾರೋ ಆಗ ಫ್ಯೂಡಲ್ ಸಮುದಾಯಗಳು ದಮನ ಮಾಡುವುದಕ್ಕೆ ಪ್ರಯತ್ನ ಪಟ್ಟಿವೆ. ತಮ್ಮೊಳಗೆ ಮೂಡಿದ ಎಚ್ಚರದ ಕಾರಣಕ್ಕೆ ತಳಸಮುದಾಯಗಳು
ಘನತೆಯ ಬದುಕಿಗಾಗಿ ನಡೆಸುವ ಹೋರಾಟ ಮತ್ತು ಅದನ್ನು ದಮನ ಮಾಡಲು ಫ್ಯೂಡಲ್ ಜಾತಿಗಳು ವ್ಯವಸ್ಥೆಯೊಂದಿಗೆ ಸೇರಿ ನಡೆಸುವ ರಾಜಕಾರಣದ ಸಂಬಂಧಗಳ ಸುತ್ತ 'ಲ್ಯಾಂಡ್ ಲಾರ್ಡ್' ಹೆಣೆಯಲ್ಪಿಟ್ಟಿದೆ.
ದೊಡ್ಡ ನಟರು, ದೊಡ್ಡ ಬಜೆಟ್ ಬಳಸಿಕೊಂಡು ಮಾಡಿರುವ ಮುಖ್ಯವಾಹಿನಿಯ ಸಿನಿಮಾ ತನ್ನ ಚಿತ್ರದ ವಿಷಯ ಮತ್ತು ಅದು ಎತ್ತಲು ಪ್ರಯತ್ನಿಸಿರುವ ದಲಿತ ಪ್ರಶ್ನೆ ಕಾರಣಕ್ಕೆ ಮುಖ್ಯವಾಗುತ್ತದೆ. ಆದರೆ ಅದನ್ನು ಹೇಳುವುದಕ್ಕೆ ಬೇಕಿದ್ದ ನೈಪುಣ್ಯತೆಯ ಕೊರತೆಯ ಕಾರಣಕ್ಕೆ ಕಲಾತ್ಮಕವಾಗಿ ಸುಸ್ತು ಹೊಡೆಸುತ್ತದೆ. ಜಾತಿಯನ್ನು ವಸ್ತವಾಗಿಟ್ಟುಕೊಂಡ ಸಿನಿಮಾ ಯಾವಾಗಲೂ ಜೋರಾಗಿರಬೇಕು ಎನ್ನುವ ಮನೋಭಾವವನ್ನು ಬಿಟ್ಟು ದೊಡ್ಡ ದೊಡ್ಡ ಸ್ಟಾರ್‌ಗಳು ಇದ್ದರೂ ಸೂಕ್ಷ್ಮವಾಗಿ ಕತೆ ಹೇಳುವುದಕ್ಕೆ ಇರುವ ಸಾಧ್ಯತೆಗಳನ್ನು ಹುಡುಕಬೇಕಿದೆ.
ಏಕೆಂದರೆ ಬೇರೆ ವಲಯಗಳಿಗಿಂತ ಸಿನಿಮಾರಂಗ ಹೆಚ್ಚು ಬ್ರೆಮಿನಿಕಲ್ ಮತ್ತು ಪ್ಯೂಡಲ್ ಜಾತಿಗಳ ಹಿಡಿತದಲ್ಲಿದೆ ಇಲ್ಲಿ craft ಮತ್ತು aesthetics ಮೇಲೆ ಹಿಡಿತ ಸಾಧಿಸದಿದ್ದರೆ ಹೆಚ್ಚು ದಿನ ಉಳಿಯುವುದು ಕಷ್ಟ. ಬಹುಶಃ ಕನ್ನಡದ ಮುಖ್ಯವಾಹಿನಿಯ ಸಿನಿಮಾದಲ್ಲಿ ಜಾತಿಯನ್ನು ವಸ್ತುವಾಗಿಟ್ಟುಕೊಂಡು ಇಷ್ಟು ದೊಡ್ಡ ಪ್ರಯತ್ನ ಮಾಡಿರುವುದು ಇದೇ ಮೊದಲು ಆಗಿರುವುದರಿಂದ ಮುಂದೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಅನಿಸುತ್ತದೆ.
-
Viral Video: ಲಂಡನ್ ರಸ್ತೆಯಲ್ಲಿ ರಾರಾಜಿಸಿದ ಭಾರತದ ಆಟೋ ರಿಕ್ಷಾ: ವಿಡಿಯೋ ನೋಡಿ ದೆಹಲಿ ಎಂದ ನೆಟ್ಟಿಗರು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications