Gold: ಚಿನ್ನದ ನಿಧಿ ಸಿಕ್ಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಚ್ಚರಿ, ಗ್ರಾಮ ಸ್ಥಳಾಂತರ ಗ್ಯಾರಂಟಿ?
ಚಿನ್ನ ಮತ್ತು ನಿಧಿ ಬಗ್ಗೆ ಕನ್ನಡಿಗರು ಇದೀಗ ಹೆಚ್ಚು ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದೇ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ, ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಸಿಕ್ಕ ನಂತರ ಸಾಲು ಸಾಲು ಅಚ್ಚರಿ ನಡೆಯುತ್ತಿದೆ. ಜನವರಿ 10 ಶನಿವಾರ ಲಕ್ಕುಂಡಿಯಲ್ಲಿ ಪ್ರಾಚೀನ ಆಭರಣಗಳು ಪತ್ತೆಯಾಗಿ ಭಾರಿ ಗಮನ ಸೆಳೆದಿತ್ತು. ಗಂಗವ್ವ ಬಸವರಾಜ ರಿತ್ತಿ ಎನ್ನುವವರು ಮನೆ ಕಟ್ಟಿಸಲು ಗುಂಡಿ ತೋಡುವಾಗ ನಿಧಿ ಸಿಕ್ಕಿತ್ತು, ನಿಧಿ ಸಿಕ್ಕಿದ್ದ ಬೆನ್ನಲ್ಲೇ ಗ್ರಾಮದಲ್ಲಿ ಉತ್ಖನನ ಆರಂಭ ಮಾಡಲಾಗಿತ್ತು. ಹೀಗೆ ಚಿನ್ನದ ನಿಧಿ ಸಿಕ್ಕ ಲಕ್ಕುಂಡಿ ಗ್ರಾಮದಲ್ಲಿ ಮತ್ತೊಂದು ಅಚ್ಚರಿ ಎದುರಾಗಿದ್ದು, ಗ್ರಾಮ ಸ್ಥಳಾಂತರ ಗ್ಯಾರಂಟಿ?
ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇರುವ ಕೋಟೆ ವೀರಭದ್ರೇಶ್ವರ ದೇವಸ್ಥಾನ ಸುತ್ತಲಿನ ಪ್ರದೇಶದಲ್ಲಿ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ಈ ಜಾಗದಲ್ಲಿ ಮತ್ತಷ್ಟು ನಿಧಿಯ ಜೊತೆಗೆ ಐತಿಹಾಸಿಕ ಕುರುಹು ಸಿಗಬಹುದು ಎಂಬ ಭರವಸೆಯೊಂದಿಗೆ ಉತ್ಖನನ ಕಾರ್ಯ ಶುರು ಮಾಡಲಾಗಿತ್ತು. ಹೀಗೆ ಉತ್ಖನನ ಆರಂಭವಾದ ನಂತರ ದೊಡ್ಡ ರಚನೆ ಭಾಗವೆಂದು ನಂಬಲಾದ ಬೃಹತ್ ಕಲ್ಲು ಪತ್ತೆಯಾಗಿದ್ದು ಭಾರಿ ಅಚ್ಚರಿಗೆ ಕಾರಣವಾಗಿದೆ. ಬೃಹತ್ ಕಲ್ಲಿನ ರಚನೆಯು ಪತ್ತೆಯಾದ ನಂತರ ಅಧಿಕಾರಿಗಳು ಮತ್ತಷ್ಟು ಅಲರ್ಟ್ ಆಗಿದ್ದು, ಮುತುವರ್ಜಿಯಿಂದ ಈ ಉತ್ಖನನ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ವಿಸ್ಮಯ
ಲಕ್ಕುಂಡಿ ಗ್ರಾಮ ಹಲವು ವೈಶಿಷ್ಟ್ಯತೆಯ ಜೊತೆಗೆ ಸಾಕಷ್ಟು ದೊಡ್ಡ ಇತಿಹಾಸ ಹೊಂದಿದ್ದು, ನಿಧಿ ಪತ್ತೆ ನಂತರ ಸರ್ಕಾರ ಕೂಡ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಅಧ್ಯಯನ ನಡೆಸಲು ಮುಂದಾಗಿದೆ. ಇದೇ ಕಾರಣಕ್ಕೆ ಶುರುವಾಗಿದ್ದ ಉತ್ಖನನದ ವೇಳೆ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಪತ್ತೆಯಾಗಿರುವ ಬೃಹತ್ ಕಲ್ಲು ಅಭಿಷೇಕದ ನೀರು ಹರಿಯುವ ಪಾತ್ರೆಯನ್ನು ಹೋಲುತ್ತದೆ ಎಂದು ಪ್ರಾಥಮಿಕವಾಗಿ ಪತ್ತೆ ಮಾಡಲಾಗಿದೆ.
ಆದರೆ ಉತ್ಖನನ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮತ್ತೆ ರೋಚಕ ತಿರುವು ಪಡೆಯುವ ಸಾಧ್ಯತೆ ಕೂಡ ಹೆಚ್ಚಾಗಿದೆ. ಒಂದೂವರೆ ಅಡಿ ಉದ್ದದ ಕಲ್ಲು ಇದಾಗಿದೆ, ಮತ್ತಷ್ಟು ಉತ್ಖನನ ನಡೆಸಿದ ನಂತರ ಕಲ್ಲಿನ ರಚನೆಯ ಇನ್ನುಳಿದ ಭಾಗಗಳು ಹೊರಬರುತ್ತವೆ ಎಂದು ಲಕ್ಕುಂಡಿ ಪರಂಪರೆ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. ಹೀಗೆ ವಿಸ್ಮಯಕಾರಿ ಕಲ್ಲು ಪತ್ತೆಯಾದ ಹಿನ್ನೆಲೆ ಸಾಕಷ್ಟು ಮುತುವರ್ಜಿ ವಹಿಸಿ ಉತ್ಖನನ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲ್ಲಿಗೆ ಯಾವುದೇ ಹಾನಿ ಆಗದ ರೀತಿ ಅದನ್ನು ಹೊರಗೆ ತೆಗೆಯಬೇಕಿದೆ.
47 ವರ್ಷಗಳ ಐತಿಹಾಸಿಕ ಜಾತ್ರೆಗೆ ಅಡ್ಡಿ ಆಗುತ್ತಾ?
ಬಂಗಾರದ ಆಭರಣಗಳ ನಿಧಿ ಸಿಕ್ಕ ನಂತರ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಇದೇ ವೇಳೆ ಉತ್ಖನನದ ಸ್ಥಳಕ್ಕೆ ಪ್ರವೇಶ ನಿಷೇಧಿಸಿರುವ ಜಿಲ್ಲಾಡಳಿತದ ಆದೇಶಕ್ಕೆ ಸ್ಥಳೀಯರು ಅಸಮಾಧಾನ ಹೊರ ಹಾಕುತ್ತಿದ್ದಾರೆ. 47 ವರ್ಷಗಳಿಂದಲೂ ಕೋಟೆ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆಯನ್ನ ಪ್ರತಿ ವರ್ಷ ತಪ್ಪದೆ ನಡೆಸಲಾಗುತ್ತಿದೆ. ಆದರೆ ಇದೀಗ ಜಿಲ್ಲಾಡಳಿತ ದೇವಸ್ಥಾನ ಸುತ್ತಮುತ್ತಲಿನ ಜಾಗಕ್ಕೆ ಪ್ರವೇಶ ನಿರ್ಬಂಧಿಸಿದರೆ ನಾವು ಜಾತ್ರೆ ಹೇಗೆ ನಡೆಸೋದು? ಎಂದು ದೇವಸ್ಥಾನ ಸಮಿತಿ ಸದಸ್ಯರು ಪ್ರಶ್ನೆ ಮಾಡುತ್ತಿರುವುದು ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.
ಮತ್ತೊಂದು ಕಡೆ ಗದಗ ಜಿಲ್ಲೆ ಐತಿಹಾಸಿಕ ಲಕ್ಕುಂಡಿ ಗ್ರಾಮವನ್ನೇ ಸ್ಥಳಾಂತರ ಮಾಡಲಾಗುತ್ತಾ? ಎಂಬ ಚರ್ಚೆಯೂ ಶುರುವಾಗಿದೆ. ಕೆಲವರು ಈ ಬಗ್ಗೆ ಗಾಳಿ ಸುದ್ದಿ ಹಬ್ಬಿಸುವುದು ಕೂಡ ಹೆಚ್ಚಾಗಿದ್ದು, ಭಾರಿ ಸಂಚಲನ ಸೃಷ್ಟಿಯಾಗಿದೆ. ಆದರೆ ಗ್ರಾಮ ಸ್ಥಳಾಂತರದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಹೀಗಾಗಿ ಜನರು ಗಾಳಿ ಸುದ್ದಿಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇಲ್ಲ ಹಾಗೂ ಈಗ ನಡೆಯುತ್ತಿರುವ ಉತ್ಖನನ ಇನ್ನಷ್ಟು ಪುರಾತನ ಅವಶೇಷಗಳನ್ನು ಹೊರಗೆ ತೆಗೆಯುವ ನಿರೀಕ್ಷೆ ಇದೆ.












Click it and Unblock the Notifications