The Problem Is.. ಮರೆತು ಹೋಯ್ತು: ಕುಣಿಗಲ್ ಶಾಸಕರ ವಿಡಿಯೋ ಫುಲ್ ವೈರಲ್
ಬೆಂಗಳೂರು, ಡಿಸೆಂಬರ್ 26: ವಿಧಾನಸಭಾ ಅಧಿವೇಶನ, ಸದನ ಹಾಗೂ ಸಂಸತ್‌ನಲ್ಲಿ ರಾಜಕೀಯ ನಾಯಕರ ಮಾತಿನ ಸಮರದಲ್ಲಿ ಕೆಲವು ಹಾಸ್ಯ ಪ್ರಸಂಗಗಳು ನಡೆಯುತ್ತದೆ. ಸಾಮಾನ್ಯವಾಗಿ ಜನ ಸಾಮಾನ್ಯರಿಗೆ ಈ ಬಗ್ಗೆ ತಿಳಿಯುವುದಿಲ್ಲ. ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹ ವಿಡಿಯೋಗಳು ಕೂಡ ಹೆಚ್ಚಾಗಿ ವೈರಲ್ ಆಗುತ್ತದೆ.
ರಾಜಕೀಯ ನಾಯಕರಲ್ಲೂ ಸಹ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಟ್ರೋಲ್ ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ. ನೋಡುಗರ ಮುಖದಲ್ಲಿ ನಗು ತರಿಸುತ್ತಾರೆ. ಅದರಂತೆ ವಿಧಾನಸಭಾ ಅಧಿವೇಶನದಲ್ಲಿ ನಡೆಯುವ ಕೆಲವು ಘಟನೆಗಳು ಸಹ ನೋಡುಗರಿಗೆ ನಗು ತರಿಸುತ್ತದೆ. ಈ ಹಿಂದೆ ಕೂಡ ನಮ್ಮ ಕರ್ನಾಟಕದ ಕೆಲವು ಶಾಸಕರ ಹಾಗೂ ಸಚಿವರ ಮಾತುಗಳು ವೈರಲ್ ಆಗಿದ್ದು, ಇದೀಗ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಇತ್ತೀಚಿಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಈ ವೇಳೆ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಮಾತನಾಡಿರುವ ವಿಡಿಯೋ ನೋಡಿ ನಗದವರಿಲ್ಲ ಎನ್ನುವಂತಾಗಿದೆ. ಅಧಿವೇಶನದಲ್ಲಿ ಮಾತನಾಡುವ ವೇಳೆ ಶಾಸಕ ಡಾ.ರಂಗನಾಥ್, ಆರೋಗ್ಯ ಸಚಿವರ ಬಳಿ ನನ್ನದು ಎರಡೇ ಪ್ರಶ್ನೆ ನಾನೇನು ಭಾಷಣ ಮಾಡಲ್ಲ ಎಂದು ಮಾತು ಪ್ರಾರಂಭಿಸಿದ್ದಾರೆ.
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಹಾಗೂ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಮಾತನಾಡಿದ ಶಾಸಕರು, "ಸರ್ ಹೇಳಿದ ಹಾಗೆ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿನ ಗರ್ಭಿಣಿ ಮಹಿಳೆಯರ ಬಗ್ಗೆ ನಿಗಾ ವಹಿಸಬೇಕು. ಅವರು ಎಲ್ಲಿ ಸ್ಕ್ಯಾನಿಂಗ್ ಮಾಡುತ್ತಾರೆ. ಬಳಿಕ ಅವರು ಮಕ್ಕಳಿಗೆ ಜನ್ಮ ನೀಡುತ್ತಾರಾ ಅಥವಾ ಭ್ರೂಣ ಹತ್ಯೆ ಮಾಡುತ್ತಾರಾ ಎನ್ನುವುದರ ಬಗ್ಗೆ ಗಮನಹರಿಸಬೇಕು" ಎಂದಿದ್ದಾರೆ.
ಮಾತು ಮುಂದುವರಿಸಿದ ಶಾಸಕರು "ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಸೋಶಿಯಲ್ ಡಿಸ್ಟರ್ಬೆನ್ಸ್ (Social Disturbance) ಆಗುತ್ತಿದೆ. ಹೆಣ್ಣು ಹುಡುಕಿಕೊಂಡು ಕುಣಿಗಲ್‌ಯಿಂದ ಯಾದಗಿರಿಗೆ ಹೋಗುತ್ತಿದ್ದಾರೆ ಎಂದಾಗ, ಸ್ಪೀಕರ್ ಯು.ಟಿ ಖಾದರ್ ಮಧ್ಯೆ ಮಾತನಾಡಿ, ಸಮಸ್ಯೆಗೆ ಪರಿಹಾರ ಕೊಡಿ ಎಂದಿದ್ದಾರೆ. ಈ ವೇಳೆ ಗೊಂದಲವಾಗಿ ಮಾತು ಮುಂದುವರಿಸಿದ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು, ದಿ ಪ್ರಾಬ್ಲಮ್ ಈಸ್ ಮರೆತು ಹೋಯ್ತು ಎಂದಿದ್ದಾರೆ. ಈ ವೇಳೆ ಶಾಸಕದ ಪಕ್ಕದಲ್ಲಿದ್ದವರು ಸೇರಿದಂತೆ ಅಧಿವೇಶನದಲ್ಲಿದ್ದವರು ಜೋರಾಗಿ ನಕ್ಕಿದ್ದಾರೆ.
ಶಾಸಕ ಡಾ.ರಂಗನಾಥ್ ಅವರ ಮಾತು ಕೇಳಿದ ಸ್ಪೀಕರ್ ಯು.ಟಿ ಖಾದರ್ ಅವರು "ನೀವು ಹೇಗೆ ಡಾಕ್ಟರ್ ಪಾಸ್ ಆದ್ರಿ" ಎಂದು ಕಾಲು ಎಳೆದಿದ್ದಾರೆ. ಈ ವೇಳೆ ಸದನದಲ್ಲಿ ಗದ್ದಲ ಎದಿದ್ದು, ಶಾಸಕ ಡಾ.ರಂಗನಾಥ್ ಮಾತು ಮುಂದುವರಿಸಿ ತಮ್ಮ ಅಭಿಪ್ರಾಯ ಸದನದ ಮುಂದೆ ಇಟ್ಟಿದ್ದಾರೆ. ಆದರೆ ಅಧಿವೇಶನ ನಡೆದು ಹಲವು ದಿನಗಳಾದರೂ ಸಹ ರಂಗನಾಥ್ ಅವರು, ದಿ ಪ್ರಾಬ್ಲಮ್ ಈಸ್ ಮರೆತು ಹೋಯ್ತು ಎನ್ನುವ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಕೆಲವು ಟ್ರೋಲ್ ಪೇಜ್‌ಗಳು ಈ ವಿಡಿಯೋವನ್ನು ಬಳಸಿಕೊಂಡಿದ್ದು, ಕೆಲವು ವಿಡಿಯೋಗಳ ಕೊನೆಯಲ್ಲಿ ದಿ ಪ್ರಾಬ್ಲಮ್ ಈಸ್ ಮರೆತು ಹೋಯ್ತು ಎನ್ನುವ ಕ್ಲಿಪ್ ಸೇರಿಸುತ್ತಿದ್ದಾರೆ. ಈ ವಿಡಿಯೋ ನೋಡಿದವರು ಮಾತ್ರ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.












Click it and Unblock the Notifications