ರಾಮನಗರವನ್ನ ಬೆಂಗಳೂರು ದಕ್ಷಿಣ ಜಿಲ್ಲೆ ಮರುನಾಮಕರಣಕ್ಕೆ ಆ ವ್ಯಕ್ತಿ ತಕರಾರು: ಸತ್ಯ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್
ರಾಮನಗರ, ಫೆಬ್ರವರಿ 15: ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿ, ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಇತ್ತು. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದೆವು.

ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ರಾಮಕೃಷ್ಣ ಹೆಗಡೆ ಅವರು ಇಲ್ಲಿಂದ ಚುನಾವಣೆ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದರು. ಟಿಎಪಿಸಿಎಂಎಸ್ ಚುನಾವಣೆ ನಡೆಯಿತು. ಸಾತನೂರು ಕ್ಷೇತ್ರದಿಂದ ನಾನು, ಕನಕಪುರ ಕ್ಷೇತ್ರದಿಂದ ಕಂಠಿ ಅವರು ಸ್ಪರ್ಧಿಸಿದ್ದೆವು. ಆಗ ರಾತ್ರೋರಾತ್ರಿ ಕಾಂಗ್ರೆಸ್ ಜಾಗ ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿಕೊಂಡಿದ್ದರು. ಸಿಂಧ್ಯಾ ಅವರು ಮಂತ್ರಿಯಾಗಿ, ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದರು. ಆಗ ಅದನ್ನು ಮುಟ್ಟಲು ಆಗುತ್ತಿರಲಿಲ್ಲ. ಆಗ ನಾವಿಬ್ಬರೂ ಗೆದ್ದಿದ್ದೆವು. ಆನಂತರ ನಾನು ಸಹಕಾರ ಸಚಿವನಾದೆ, ನೀರಾವರಿ ಸಚಿವನಾದೆ, ಇಂದು ಡಿಸಿಎಂ ಆಗಿದ್ದೇನೆ. ಪಕ್ಷದ ಅಧ್ಯಕ್ಷನೂ ಆಗಿದ್ದೇನೆ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಶ್ರಮ ಇದ್ದಲ್ಲಿ ಫಲ ಇದೆ. ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರದಲ್ಲಿ ಬ್ಲಾಕ್ ಅಧ್ಯಕ್ಷರಾಗಿದ್ದವರಿಗೆ ಒಂದಲ್ಲಾ ಒಂದು ಹುದ್ದೆ ನೀಡಿದ್ದೇವೆ ಎಂದರು.
ನಿಮಗೆ ನೀಡಿರುವ ಸ್ಥಾನಮಾನ ಕಡಿಮೆ ಎಂದು ಭಾವಿಸಬೇಡಿ. ಇಲ್ಲಿ ಆಶ್ರಯ ಸಮಿತಿ ಹಾಗೂ ಬಗರ್ ಹುಕ್ಕುಂ ಸಮಿತಿ ಜವಾಬ್ದಾರಿಯನ್ನು ಸುರೇಶ್ ಅವರಿಗೆ ವಹಿಸಿದ್ದೇವೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ನ್ಯಾಯಬದ್ಧವಾಗಿ ಬಡವರಿಗೆ ಸಿಗಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಗೌರವಯುತವಾಗಿ ನಿಭಾಯಿಸಿ. ನೀವೆಲ್ಲರೂ ಸೇರಿ ಯೋಗೇಶ್ವರ್ ಅವರ ಪರವಾಗಿ ಚುನಾವಣೆ ಮಾಡಿದ್ದೀರಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಇದು ರಾಜಕಾರಣ. ನಾವು ಒಗ್ಗಟ್ಟಿನಿಂದ ಜನರ ಆಶೋತ್ತರಗಳಿಗೆ ಕೆಲಸ ಮಾಡಬೇಕು" ಎಂದರು.












Click it and Unblock the Notifications