ರತ್ನಪ್ರಭಾ ಸೇವಾ ಅವಧಿ ಮುಂದುವರೆಸದಂತೆ ಕೇಂದ್ರಕ್ಕೆ ಎಚ್‌ಡಿಕೆ ಪತ್ರ
ಬೆಂಗಳೂರು, ಜೂನ್ 28: ಇದೇ ತಿಂಗಳ 30ರಂದು ನಿವೃತ್ತರಾಗುತ್ತಿರುವ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವಾ ಅವಧಿ ವಿಸ್ತರಣೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಕೆಲವೇ ದಿನಗಳ ಮುಂಚೆ ಕುಮಾರಸ್ವಾಮಿ ಅವರೇ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವಾ ಅವಧಿಯನ್ನು ಮೂರು ತಿಂಗಳು ವಿಸ್ತರಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದರು ಆದರೆ ಈಗ ವರಸೆ ಬದಲಿಸಿದ್ದಾರೆ.
ಸಿದ್ದರಾಮಯ್ಯ ಅವರೊಂದಿಗೆ ಮುನಿಸು ಹೆಚ್ಚಾಗಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಅಧಿಕಾರಿಗಳಿಗೆ 'ವರ್ಗಾವಣೆ ಭಾಗ್ಯ'ವನ್ನು ಕಲ್ಪಿಸಲಾಗುತ್ತಿದೆ ಎಂಬ ಸುದ್ದಿಯೂ ಇದೆ.

ದೇವೇಗೌಡರ ಅಣತಿಯಂತೆ ಕುಮಾರಸ್ವಾಮಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಇತ್ತೀಚೆಗೆ ನಡೆದ ಐಎಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿಯೂ ದೇವೇಗೌಡರ ಪಾತ್ರವಿದೆ ಎನ್ನಲಾಗಿದೆ. ಆದರೆ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಮಾಡುವುದಿಲ್ಲ ಎಂದು ದೇವೇಗೌಡರು ಈಗಾಗಲೇ ಹೇಳಿಕೆ ನೀಡಿದ್ದಾರೆ.
ರತ್ನಪ್ರಭಾ ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದ ಮುಖ್ಯಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಆಂಧ್ರಪ್ರದೇಶದ ಮೂಲದವರಾದ ಅವರು ಇದೇ ತಿಂಗಳು 30ನೇ ತಾರೀಖಿನಂದು ನಿವೃತ್ತರಾಗುತ್ತಿದ್ದಾರೆ.












Click it and Unblock the Notifications