• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈ ವೋಲ್ಟೇಜ್ ಕ್ಷೇತ್ರವಾದ ಸೊರಬ: ಸೋದರರ ಸವಾಲ್‌ನಲ್ಲಿ ಜಯ ಯಾರಿಗೆ?

|
Google Oneindia Kannada News

ಶಿವಮೊಗ್ಗ, ನವೆಂಬರ್ 16: ಮೊದಲಿನಿಂದಲೂ ಬಂಗಾರಪ್ಪನವರ ಹಿಡಿತದಲ್ಲಿದ್ದ ಸೊರಬ ಕ್ಷೇತ್ರದಲ್ಲಿ ಎಸ್‌ ಬಂಗಾರಪ್ಪ ಅವರ ಪುತ್ರರ ಜಟಾಪಟಿ ಜೋರಾಗಿದೆ. 2023ರ ವಿಧಾನಸಭೆ ಚುನಾವಣೆ ಸಮೀಪಿಸಿದ್ದು, ಬಂಗಾರಪ್ಪ ಅವರ ರಾಜಕೀಯ ವಾರಸುದಾರಿಕೆಗಾಗಿ ಮತ್ತೊಮ್ಮೆ ಕುಮಾರ್‌ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಸ್ಪರ್ಧೆಗೆ ಅಣಿಯಾಗುತ್ತಿದೆ. ಮತ್ತೊಂದು ಸಲ ಸೊರಬ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದ್ದು, ಜನಸಂಕಲ್ಪ ಯಾತ್ರೆಯನ್ನು ಮಾಡುವ ಮೂಲಕ ಮತ್ತೊಂದಿಷ್ಟು ವೋಲ್ಟೇಜ್‌ ಅನ್ನು ಸೊರಬ ಕ್ಷೇತ್ರಕ್ಕೆ ಬಿಜೆಪಿ ನಾಯಕರು ತಂದಿದ್ದಾರೆ.

2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಹರತಾಳ್‌ ಹಾಲಪ್ಪ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮಧು ಬಂಗಾರಪ್ಪ ವಿಜಯ ಸಾಧಿಸಿದ್ದರು. ಕಳೆದ ಬಾರಿ ಅಂದರೆ 2018ರಲ್ಲಿ ಕುಮಾರ್‌ ಬಂಗಾರಪ್ಪ 13 ಸಾವಿರ ಮತಗಳ ಅಂತರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಅವರನ್ನು ಸೋಲಿಸಿದ್ದರು. ಆದರೆ, ಈಗ ಮಧು ಬಂಗಾರಪ್ಪ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದು, ಸೊರಬ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಆರೋಪ ಹಾಗೂ ಪ್ರತ್ಯಾರೋಪಗಳಲ್ಲಿ ಹೆಚ್ಚಾಗಿವೆ. ಸೋದರರ ಸವಾಲ್‌ನಲ್ಲಿ ಯಾರು ವಿಜಯಲಕ್ಷ್ಮೀಯನ್ನು ಒಲಿಸಿಕೊಳ್ಳಲಿದ್ದಾರೆ ಎಂಬುದೇ ಯಕ್ಷಪ್ರಶ್ನೆ.

ಕುಮಾರ್‌ ಬಂಗಾರಪ್ಪಗೆ ಸ್ವಪಕ್ಷದವರ ಮುನಿಸು ಕಂಟಕ?

ಈ ಸಲ ಗೆಲ್ಲಲೇಬೇಕು ಎಂದು ಇಬ್ಬರು ಸಹೋದರರು ಸೊರಬ ಕ್ಷೇತ್ರವನ್ನು ಪ್ರತಿಷ್ಠೆಯ ಕಣವನ್ನಾಗಿಸಿಕೊಂಡಿದ್ದಾರೆ. ಆದರೆ, ಒಂದು ಕಡೆ ಬಿಜೆಪಿ ಶಾಸಕ ಕುಮಾರ್‌ ಬಂಗಾರಪ್ಪನವರಿಗೆ ಮೂಲ ಬಿಜೆಪಿ ನಾಯಕರು ಮುಳ್ಳಾಗಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಿಂದ ಗೆದ್ದು ಬಳಿಕ ಬಿಜೆಪಿ ಸೇರಿ ಶಾಸಕರಾಗಿರುವ ಕುಮಾರ್‌ ಬಂಗಾರಪ್ಪ ಕ್ಷೇತ್ರದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಕುಮಾರ್‌ ಬಂಗಾರಪ್ಪ ನಡೆಗೆ ಸ್ವತಃ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೇ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನರೇಂದ್ರ ಮೋದಿ ಅವರ ಜನ್ಮದಿನದಂದು ನಮೋ ವೇದಿಕೆಯಲ್ಲಿ ಶಾಸಕರ ವಿರುದ್ದ ಬಹಿರಂಗವಾಗಿ ಅಸಮಧಾನ ಹೊರ ಹಾಕಿದ್ದ ಮೂಲ ಬಿಜೆಪಿಗರಲ್ಲಿ 8ಕ್ಕೂ ಹೆಚ್ಚು ಜನರನ್ನ ಜಿಲ್ಲಾ ಸಮಿತಿ ಹುದ್ದೆಗಳಿಂದ ಕುಮಾರ ಬಂಗಾರಪ್ಪ ಮುಕ್ತಿಗೊಳಿಸಿದ್ದಾರೆ. ಇದರಿಂದ ಮೂಲ ಬಿಜೆಪಿಗರು ಕುಮಾರ್‌ ಬಂಗಾರಪ್ಪ ವಿರುದ್ದ ಮತ್ತಷ್ಟು ಮುನಿಸಿಕೊಂಡಿದ್ದು, ಚುನಾವಣೆ ಸಮೀಪವಿರುವಾಗ ಬಿಜೆಪಿಯ ಮೂಲ ಹಾಗೂ ವಲಸಿಗರ ನಡುವಿನ ತಿಕ್ಕಾಟ ಕುಮಾರ್‌ ಬಂಗಾರಪ್ಪಗೆ ಬಿಸಿತುಪ್ಪವಾಗಿದೆ.

ಮಧು ಬಂಗಾರಪ್ಪಗೆ ಶರಾವತಿ ಸಂತ್ರಸ್ಥರೇ ವರ?

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಶರಾವತಿ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಶರಾವತಿ ಸಂತ್ರಸ್ಥರಿಗೆ ನೀಡಿದ ಹಕ್ಕುಪತ್ರ ವಜಾ ಮಾಡಿರುವ ಬಿಜೆಪಿ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್‌, ಮಲೆನಾಡಿನಲ್ಲಿ ಅರಣ್ಯ ಹಕ್ಕು ಕಾಯ್ದೆ, ಶರಾವತಿ ಸಂತ್ರಸ್ಥರ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಹೋರಾಟ ರೂಪಿಸುತ್ತಿರುವುದು ಬಿಜೆಪಿಗೆ ಕಂಟಕವಾಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಮಧು ಬಂಗಾರಪ್ಪ ಕಾಂಗ್ರೆಸ್ ಪಕ್ಷ ಸೇರಿದ್ದರೂ ಸ್ಥಳೀಯ ಜೆಡಿಎಸ್ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಕಾಂಗ್ರೆಸ್‌ನ ಸ್ಥಳೀಯ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಚುನಾವಣೆಯಲ್ಲಿ ಪ್ಲಸ್‌ ಆಗೋದು ಖಂಡಿತ.

ಸೊರಬದಲ್ಲೇ ಜನಸಂಕಲ್ಪ ಯಾತ್ರೆ ಏಕೆ?

ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರ ನಡುವೆ ಮನಸ್ಥಾಪಗಳು ಹೆಚ್ಚಾಗಿದ್ದು, ಶಾಸಕ ಕುಮಾರ ಬಂಗಾರಪ್ಪನವರ ನಡೆಗೆ ಮೂಲ ಬಿಜೆಪಿಗರು ಬೇಸತ್ತಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರಲ್ಲಿ ಇರುವ ಮನಸ್ಥಾಪಗಳನ್ನ ಸರಿ ಪಡಿಸುವ ನಿಟ್ಟಿನಲ್ಲಿ ಹಾಗೂ ಮೂಲ ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸೊರಬದಲ್ಲಿ ನವೆಬರ್ 15 ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆಯ ಸಮಾವೇಶ ನಡೆಸಿದೆ. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಮೂಲ ಬಿಜೆಪಿಗರ ಮನಸ್ಥಾನವನ್ನು ಶಮನಗೊಳಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.

Kumar Bangarappa VS Madhu Bangarappa Fight in Sorab Assembly Constituency

ನವೆಂಬರ್‌ 28ಕ್ಕೆ ಕಾಂಗ್ರೆಸ್‌ ಸಮಾವೇಶ!

2023ನೇ ವಿಧಾನಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸುವ ಮೂಲಕ ಆ ಪ್ರದೇಶವನ್ನು ಮತ್ತೆ ಮರಳಿ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಅದರಂತೆ ಮಲೆನಾಡು ಭಾಗದಲ್ಲಿ ಬೃಹತ್ ಸಮಾವೇಶವನ್ನ ನಡೆಸಲು ಕಾಂಗ್ರೆಸ್‌ ನಾಯಕರು ತಯಾರಾಗಿದ್ದು, ಮಲೆನಾಡು ಭಾಗದಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಶರಾವತಿ ಸಂತ್ರಸ್ತರ ಪರವಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಸರ್ಕಾರದ ವಿರುದ್ದ ಮಧು ಬಂಗಾರಪ್ಪ ಗುಡುಗಿದ್ದಾರೆ. ರೈತರಿಗೆ ಜಮೀನಿನ ಹಕ್ಕುಪತ್ರವಿದ್ದರೆ ಮಾತ್ರ ಅವರಿಗೆ ಆಶ್ರಯ ಮನೆ ನೀಡಲು ಸಾಧ್ಯ. ಆದರೆ, ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಹಕ್ಕುಪತ್ರ ನೀಡುತಿಲ್ಲ. ನಾವು ಶರಾವತಿ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತೇವೆ.‌ ಆಯನೂರಿನಿಂದ ಶಿವಮೊಗ್ಗವರೆಗೆ ನವೆಂಬರ್ 28ರಂದು ಪಾದಯಾತ್ರೆ ನಡೆಸುವ ಮೂಲಕ ಶರಾವತಿ ಸಂತ್ರಸ್ತರ ಉಳಿವಿಗಾಗಿ ಹೋರಾಟ ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶವನ್ನ ನಡೆಸಲಿದ್ದು, ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ತೊಡೆತಟ್ಟಲಿದ್ದಾರೆ.

ಒಟ್ಟಿನಲ್ಲಿ ಮಧು ಬಂಗಾರಪ್ಪ ಹಾಗೂ ಕುಮಾರ್‌ ಬಂಗಾರಪ್ಪ ಅವರಿಗೆ ಸೊರಬ ಕ್ಷೇತ್ರ ಪ್ರತಿಷ್ಠೆಯ ಕಣವಾಗಿದೆ. ಒಂದು ಕಡೆ ಮೂಲ ಬಿಜೆಪಿಗರ ಅಸಮಾಧಾನ ಶಮನಗೊಳಿಸಿ, ಬಿಜೆಪಿ ಆಡಳಿತದ ಅಭಿವೃದ್ದಿ ಕಾರ್ಯ ಹಾಗೂ ತಾವೂ ಸಚಿವರಾಗಿದ್ದಾಗ ತಂದ ನೀರಾವರಿ ಯೋಜನೆಗಳನ್ನು ಜನರಿಗೆ ತಲುಪಿಸಿ ಮತ್ತೊಮ್ಮೆ ಗೆಲುವ ಸಾಧಿಸುವ ಇರಾದೆಯಲ್ಲಿ ಕುಮಾರ್‌ ಬಂಗಾರಪ್ಪ ಇದ್ದರೆ, ಇತ್ತ ಮಧು ಬಂಗಾರಪ್ಪ ಶರಾವತಿ ಸಂತ್ರಸ್ತರ ಉಳಿವಿಗಾಗಿ ಹೋರಾಟ ನಡೆಸುವ ಮೂಲಕ ಮತ್ತೆ ಕ್ಷೇತ್ರವನ್ನು ಕೈವಶಮಾಡಿಕೊಳ್ಳುವ ಕನಸು ಕಾಣುತ್ತಿದ್ದಾರೆ. ಮತದಾರ ಯಾರಿಗೆ ಮಣೆ ಹಾಕ್ತಾನೆ ಎಂಬುದನ್ನು ಕಾದು ನೋಡಬೇಕು.

English summary
Kumar Bangarappa VS Madhu Bangarappa Fight in Sorab Assembly Constituency in upcoming 2023 Karnataka Assembly Elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X