Tour Package: ದಕ್ಷಿಣ ಕರ್ನಾಟಕದ ಸುಕ್ಷೇತ್ರಗಳಿಗೆ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ, ಎಲ್ಲಿಂದ? ಟಿಕೆಟ್ ದರ- ವೇಳಾಪಟ್ಟಿ
ಬೆಂಗಳೂರು: ಕರ್ನಾಟಕದ ದಕ್ಷಿಣ ಭಾಗದಲ್ಲಿ ನೂರಾರು ದೇವಾಲಯಗಳು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ನೆಲೆಗೊಂಡಿವೆ. ನಿತ್ಯ ಈ ಸುಕ್ಷೇತ್ರಗಳಿಗೆ ಅಪಾರ ಸಂಖ್ಯೆಯ ಭಕ್ತರು ತೆರಳುತ್ತಾರೆ. ರಾಜಧಾನಿ ಬೆಂಗಳೂರಿನಿಂದ ಕರಾವಳಿ, ಪಶ್ಚಿಮ ಘಟ್ಟಗಳ ಪ್ರಮುಖ ದೇವಸ್ಥಾನಗಳಿಗೆ ಹೋಗುವವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಖುಷಿ ಸುದ್ದಿ ನೀಡಿದೆ. ದಕ್ಷಿಣ ಕರ್ನಾಟಕದ ದೇವಾಲಯಗಳಿಗೆ ಪ್ರವಾಸ ಪ್ಯಾಕೇಜ್ ಘೋಷಿಸಿದೆ. ಅದರ ಟಿಕೆಟ್ ದರ, ಸಮಯ, ವೇಳಾಪಟ್ಟಿ, ಊಟ, ವಸತಿ ವಿವರ ಇಲ್ಲಿದೆ.
ದೇಶದ ವಿವಿಧ ಮೂಲೆಗಳಿಂದ ದಕ್ಷಿಣ ಕರ್ನಾಟಕದ ಈ ದೇವಸ್ಥಾನಗಳಿಗೆ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ. ರಜಾ ದಿನಗಳಲ್ಲಿ ಮಕ್ಕಳು, ಕುಟುಂಬಸ್ಥರೊಂದಿಗೆ, ಹರಕೆ ತೀರಿಸಲು ತೆರಳುವ ಭಕ್ತರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಿಂದ ಪ್ರವಾಸೋದ್ಯಮ ಬಸ್ ಹೊರಡಲಿದೆ. ನಾಲ್ಕು ದಿನದ (ನಾಲ್ಕು ರಾತ್ರಿ) ವಿಶೇಷ ಟೂರ್ ಪ್ಯಾಕೇಜ್ ಇದಾಗಿದೆ.

ಈ ಪ್ರವಾಸ ಪ್ಯಾಕೇಜ್ ಘೋಷಿಸಿದರೆ ನೀವು ಬೆಂಗಳೂರಿನಿಂದ ಇಲಾಖೆಯು ಎ/ಸಿ ಡಿಲಕ್ಸ್ ಬಸ್ ಮೂಲಕ ತೆರಳಬಹುದು. ಆರಾಮದಾಯಕ ಪ್ರಯಾಣ ನಿಮ್ಮದಾಗಲಿದೆ. ಪ್ರತಿ ಬುಧವಾರ ಹಾಗೂ ಗುರುವಾರ ಬೆಂಗಳೂರಿನ ಯಶವಂತಪುರದ ಪ್ರವಾಸೋದ್ಯಮ ಇಲಾಖೆ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣದಿಂದ ರಾತ್ರಿ 09 ಗಂಟೆಗೆ ಈ ಬಸ್ ಪ್ರಯಾಣ ಆರಂಭಿಸುತ್ತವೆ.
ಯಾವೆಲ್ಲ ಸುಕ್ಷೇತ್ರಗಳು ಟೂರ್ ಪ್ಯಾಕೇಜ್‌ನಲ್ಲಿವೆ?
ಬೆಂಗಳೂರಿನಿಂದ ತೆರಳುವ ಬಸ್ ಹೊರನಾಡು, ಕಳಸ, ಶೃಂಗೇರಿ, ಕೊಲ್ಲೂರು, ಮುರುಡೇಶ್ವರ, ಉಡುಪಿ, ಕಟೀಲ್, ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಲಿದೆ. ಅಲ್ಲಿನ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನ ಮಾಡಿಸಿಕೊಂಡು ಕರೆದುಕೊಂಡು ಬರಲಿದೆ. ಈ ಪ್ರಯಾಣದಲ್ಲಿ ಈ ಮೇಲಿನ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಭೇಟಿ ನೀಡಲು ಸಾಕಷ್ಟು ಕಳೆಯಲು ಸಹ ಅವಕಾಶ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ ಹೊರನಾಡು ತಲುಪುವ ಪ್ರವಾಸಿಗರ ಬಸ್ ಹೊರನಾಡಿನಲ್ಲಿ ಫ್ರೆಶ್‌ಅಪ್‌ಗಾಗಿ ಹೋಟೆಲ್ ದೇವಿ ಕೃಪಾದಲ್ಲಿ ವ್ಯವಸ್ಥೆ ಮಾಡಿರುತ್ತದೆ. ಅದೇ ರೀತಿ ಮಾರನೇ ದಿನ ರಾತ್ರಿ ತಂಗಲು ಕೊಲ್ಲೂರಿನಲ್ಲಿ ಹೋಟೆಲ್ ಅಡಿಗಾಸ್ ಅಥವಾ ಅಂತಹುದೇ ಬೇರೆ ಹೋಟೆಲ್ ವ್ಯವಸ್ಥೆ ಇದೆ. ನಂತರ ರಾತ್ರಿ ಹೋಟೆಲ್ ಸೌಂದರ್ಯ ಅರಮನೆ ಕಟೀಲ್ ನಲ್ಲೂ ವಸತಿ ಸೌಕರ್ಯ ಕಲ್ಪಿಸಿರುತ್ತದೆ. ಆದ್ದರಿಂದ ಪ್ರವಾಸಿಗರಿಗೆ ಹೋಟೆಲ್ ಹುಡುಕುವ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.
ದೇವಸ್ಥಾನ ಭೇಟಿ, ದರ್ಶನ ದರ್ಶನ ಸಮಯ, ವಿವರ
ಬೆಂಗಳೂರಿನಿಂದ ರಾತ್ರಿ ಹೊರಟು ಬೆಳಗ್ಗೆ 5 ಗಂಟೆಗೆ ಹೊರನಾಡು ತಲುಪಿ ಫ್ರೆಶ್ ಅಪ್ ಆಗಲು ಅವಕಾಶ ನೀಡಲಾಗುತ್ತದೆ. ನಂತರ ಬೆಳಗ್ಗೆ 08 ರವರೆಗೆ ಅನ್ನಪೂರ್ಣೇಶ್ವರಿ ದೇವಿಯ ದರ್ಶನ ಮತ್ತು ಉಪಹಾರ ವ್ಯವಸ್ಥೆ, ಬಳಿಕ 08 ರಿಂದ 08.40ರವರೆಗೆ ಕಲಸೇಶ್ವರ ದೇವಸ್ಥಾನ, ಕಳಸಕ್ಕೆ ಭೇಟಿ ನೀಡಲಾಗುತ್ತದೆ. 11.40 ರಿಂದ ಮಧ್ಯಾಹ್ನ 01.40 ರವರೆಗೆ ಶೃಂಗೇರಿ ಶಾರದಾಂಬೆ ದೇವಿಯ ದರ್ಶನ, ವಿದ್ಯಾಶಂಕರ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಇರುತ್ತದೆ.
ಸಂಜೆ 06 ಗಂಟೆಯಿಂದ 07ರವರೆಗೆ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ, ಕೊಲ್ಲೂರು ಮತ್ತು ಬೈಂದೂರಿನಲ್ಲಿ ರಾತ್ರಿ ವಾಸ್ತವ್ಯ. ಮಾರನೇ ದಿನ ಬೆಳಗ್ಗೆ 05.30ಕ್ಕೆ ಕೊಲ್ಲೂರಿನಿಂದ ಬಸ್ ಹೊರಡುತ್ತದೆ. ಬೆಳಗ್ಗೆ 07 ರಿಂದ 07.30ರವರೆಗೆ ಉಪಾಹಾರ ಸಮಯ. 07.45 ರಿಂದ 09.15 ರವರೆಗೆ ಶ್ರೀ ಮುರುಡೇಶ್ವರ ಸ್ವಾಮಿ ದೇವಸ್ಥಾನದ ದರ್ಶನ ಮತ್ತು ಬೀಚ್, ಉದ್ಯಾನವನಕ್ಕೆ ಭೇಟಿ. ಬೆಳಗ್ಗೆ 11.15 ರಿಂದ 11.45 ಆನೆಗುಡ್ಡೆಯ ಗಣೇಶನ ದರ್ಶನ, ಮಧ್ಯಾಹ್ನ 12.30 ರಿಂದ 03 ಗಂಟೆಗೆ ಉಡುಪಿ ಶ್ರೀಕೃಷ್ಣನ ದರ್ಶನ ಮಾಡಿಕೊಂಡು ಅಲ್ಲಿಯೇ ಊಟದ ವ್ಯವಸ್ಥೆ ಇರುತ್ತದೆ.
ಮಧ್ಯಾಹ್ನ 03 ಗಂಟೆಯಿಂದ 04 ಮಲ್ಪೆ ಬೀಚ್‌ನಲ್ಲಿ ಸುತ್ತಾಡಲು ಅವಕಾಶ ಸಿಗಲಿದೆ. ಅಲ್ಲಿಂದ ಸಂಜೆ 05.20 ಕಟೀಲ್‌ಗೆ ಆಗಮಿಸಿ ಪ್ರಸಿದ್ಧ ದುರ್ಗಾ ಪರಮೇಶ್ವರಿ ದೇವಿಯ ದರ್ಶನ ಮಾಡಿದ ಬಳಿಕ ಅಲ್ಲಿಯೇ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ.
ಕಟೀಲ್‌ನಿಂದ ಮರುದಿನ ಬೆಳಗ್ಗೆ 05:30ಕ್ಕೆ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬಸ್ ಹೊರಡುತ್ತದೆ. ಬೆಳಗ್ಗೆ 06.30 - 09 ಗಂಟೆವರೆಗೆ ಮಂಗಳಾ ದೇವಿಯ ದರ್ಶನ ಮತ್ತು ಉಪಹಾರ ವ್ಯವಸ್ಥೆ, 11.30 ರಿಂದ ಮಧ್ಯಾಹ್ನ 03ರ ಹೊತ್ತಿಗೆ ಧರ್ಮಸ್ಥಳ ತಲುಪುವ ಪ್ರವಾಸಿಗರು ಮಂಜುನಾಥೇಶ್ವರ ದೇವರ ದರ್ಶನ ಮಾಡುತ್ತಾರೆ. ಮಧ್ಯಾಹ್ನ 03.30 ರಿಂದ 09ಗಂಟೆಗೆ ಸಮಯದಲ್ಲಿ ಆದಿ ಸುಬ್ರಹ್ಮಣ್ಯ ಮತ್ತು ಕುಕ್ಕೆ ಸುಬ್ರಹ್ಮಣ್ಯ ದರ್ಶನಕ್ಕೆ ಅವಕಾಶ, ಅಲ್ಲಿಂದ ರಾತ್ರಿ 09ಗಂಟೆಗೆ ಬಸ್ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತದೆ. ಐದನೇ ದಿನ ಬೆಳಗ್ಗೆಗೆ ದಕ್ಷಿಣ ಕರ್ನಾಟಕದ ದೇವಾಲಯ ಪ್ರವಾಸ ಕೊನೆಗೊಳ್ಳುತ್ತದೆ ಎಂದು ಇಲಾಖೆ ತಿಳಿಸಿದೆ.
ಟಿಕೆಟ್ ದರ ವಿವರ
* ಏಕ ಆಕ್ಯುಪೆನ್ಸಿ- 9230/- ರೂಪಾಯಿ
* ಡಬಲ್ ಆಕ್ಯುಪೆನ್ಸಿ- 7030/- ರೂಪಾಯಿ
* ಟ್ರಿಪಲ್ ಆಕ್ಯುಪೆನ್ಸಿ- 6480/- ರೂಪಾಯಿ
ಟೂರ್ ಪ್ಯಾಕೇಜ್ ಬುಕ್ಕಿಂಗ್ ಹೇಗೆ?
ಈ ಪ್ಯಾಕೇಜ್‌ನಲ್ಲಿ ಪ್ರವಾಸಿ ತಾಣಗಳಿಗೆ ಬರುವ ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಎಲ್‌ಟಿಸಿ (ಪ್ರಯಾಣ ರಿಯಾಯಿತಿಯ ಸೌಕರ್ಯ) ಇರಲಿದೆ. ಪ್ರವಾಸದ ಅಷ್ಟು ದಿನಗಳು ವೃತ್ತಿಪರ ಮಾರ್ಗದರ್ಶಕರೊಬ್ಬರು ನಿಮ್ಮೊಂದಿಗೆ ಇರಲಿದ್ದಾರೆ. ಟೂರ್ ಪ್ಯಾಕೇಜ್ ಬುಕ್ ಮಾಡಲು ಅಧಿಕೃತ ಜಾಲತಾಣಕ್ಕೆ https://kstdc.co/tour_packages/south-karnataka-temple-tour/ ನೀಡಬೇಕು. ಹೆಚ್ಚಿನ ಮಾಹಿತಿಗೆ 80-4334 4334 ಗೆ ಸಂಪರ್ಕಿಸಬಹುದು.












Click it and Unblock the Notifications