₹6,00,00,000 ವೆಚ್ಚದ KSRTC ನೂತನ ಘಟಕ ಉದ್ಘಾಟಿಸಿದ ರಾಮಲಿಂಗಾ ರೆಡ್ಡಿ: ಅದರ ವಿಶೇಷತೆಗಳೇನು?
Karnataka Transport News: ಮಧ್ಯ ಕರ್ನಾಟಕದ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸ ನೂತನ ಘಟಕವೊಂದನ್ನು ಆರಂಭಿಸಿದೆ. ಬಹುಕೋಟಿ ವೆಚ್ಚದಲ್ಲಿ ಸಸಜ್ಜಿತ ವ್ಯವಸ್ಥೆಯೊಂದಿಗೆ ಆರಂಭಿಸಿದೆ. ಈ ಮೂಲಕ ಸಾರಿಗೆ ಮೂಲ ಸೌಕರ್ಯವನ್ನು ಈ ಭಾಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಕಾರ್ಯಾಚರಣೆಗೆ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಚಾಲನೆ ನೀಡಿದರು. ಜೊತೆಗೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ನೂತನ ಬಸ್ ಸಂಚಾರಕ್ಕೂ ಹರಿಸು ನಿಶಾನೆ ತೋರಿಸಿದರು.
ಹೌದು, ಪ್ರಸಿದ್ಧ ಕೋಟೆ ಹೊಂದಿರುವ ಚಿತ್ರದುರ್ಗ ಜಿಲ್ಲೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯ ಪ್ರಮುಖ ತಾಲೂಕು ಆಗಿರುವ ಹಿರಿಯೂರಿನಲ್ಲಿ ನೂತನ ಬಸ್ ಘಟಕ ತಲೆ ಎತ್ತಿದೆ. ಸುಮಾರು 3 ಎಕರೆ ವಿಸ್ತೀರ್ಣದಲ್ಲಿ ಅಂದಾಜು 600,00,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ KSRTC ಘಟಕವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿ ಬಳಿಕ ಮಾತನಾಡಿದರು.

ಸಚಿವ ಡಿ. ಸುಧಾಕರ್ ಮತ್ತು ಸಾರ್ವಜನಿಕ ಪ್ರಯಾಣಿಕರ ಬಹುದಿನಗಳ ಬೇಡಿಕೆ ಇಂದು ನೆರವೇರಿಸಿದೆ. ಆರಂಭದಲ್ಲಿ 25 ಅನುಸೂಚಿಗಳನ್ನು ಇಲ್ಲಿಂದ ಕಾರ್ಯಾಚರಣೆಗೊಳಿಸಲಾಗುವುದು. 2017ರಲ್ಲಿ ನಾನು ಸಾರಿಗೆ ಸಚಿವರಾಗಿದ್ದಾಗ ಚಿತ್ರದುರ್ಗವನ್ನು ಪ್ರತ್ಯೇಕ ವಿಭಾಗವನ್ನಾಗಿ ಪ್ರಾರಂಭಿಸಲು ಅನುಮತಿ ನೀಡಿದ್ದರು. ಅದರಂತೆ ಚಿತ್ರದುರ್ಗ ವಿಭಾಗವು 2018 ರಿಂದ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್ ಘಟಕಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಮೊಳಕಾಲ್ಮೂರು ಮತ್ತು ಹೊಳಲ್ಕೆರೆ ನೂತನ ಬಸ್ ಘಟಕಗಳ ನಿರ್ಮಾಣ ಅಂತಿಮ ಹಂತದಲ್ಲಿದೆ. ಇವುಗಳಲ್ಲಿ ಡೀಸೆಲ್ ಪಂಪ್‌ಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಈ ಘಟಕಗಳೂ ಉದ್ಘಾಟನೆಗೊಳ್ಳಲಿವೆ ಎಂದು ಸಚಿವರು ತಿಳಿಸಿದರು.
ಬಸ್ ನಿಲ್ದಾಣದ ಉನ್ನತೀಕರಣಕ್ಕೆ ಅಸ್ತು
ಹಿರಿಯೂರು ಬಸ್ ನಿಲ್ದಾಣದ ಉನ್ನತೀಕರಣಕ್ಕೆ ಸಚಿವ ಸುಧಾಕರ್ ಮತ್ತು ರೈತ ಮುಖಂಡರ ಮನವಿಯ ಮೇರೆಗೆ ಮಂಜೂರಾತಿ ನೀಡಲಾಗುವುದು ಎಂದು ರಾಮಲಿಂಗಾರೆಡ್ಡಿ ಘೋಷಿಸಿದರು. ಅಲ್ಲದೆ, ಧರ್ಮಪುರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣದ ಬೇಡಿಕೆಗೂ ಶೀಘ್ರ ಮಂಜೂರಾತಿ ನೀಡಲಾಗುವುದು ಎಂದು ರಾಮಲಿಂಗಾ ರೆಡ್ಡಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯೂರು-ಧರ್ಮಸ್ಥಳ, ಹಿರಿಯೂರು-ಚಳ್ಳಕೆರೆ, ಹಿರಿಯೂರು-ಹೊಸದುರ್ಗ, ಹಿರಿಯೂರು-ಹಾಸನ, ಮತ್ತು ಹಿರಿಯೂರು-ಧರ್ಮಪುರ ಮಾರ್ಗದ ನೂತನ ಬಸ್ ಸಂಚಾರಕ್ಕೆ ಸಾರಿಗೆ ಸಚಿವರು ಹಸಿರು ನಿಶಾನೆ ತೋರಿದರು. ಇದರಿಂದ ಈ ಭಾಗದ ಸಾವಿರಾರು ಜನರಿಗೆ ದೈನಂದಿನ ಸಂಚಾರಕ್ಕೆ ಅನುಕೂಲವಾಗಲಿದೆ.
ನೂತನ ಘಟಕದ ವಿಶೇಷತೆಗಳೇನು?
* ಬಸ್‌ಗಳ ನಿರ್ವಹಣಾ ಅಂಕಣ
* ಬಸ್‌ಗಳ ಪರಿವೀಕ್ಷಣ ಅಂಕಣ
* ಭದ್ರತಾ ಮತ್ತು ಸಂಚಾರ ಶಾಖೆ
ಮಹಿಳಾ ಮತ್ತು ಪುರುಷ ವಿಶ್ರಾಂತಿ ಗೃಹ
* ಶೌಚಾಲಯಗಳು
* ಇಂಧನ ಕೊಠಡಿ
* ವಾಷಿಂಗ್ ರಾಂಪ್
* ಪಾರ್ಕಿಂಗ್ ವ್ಯವಸ್ಥೆ
* ಜನರೇಟರ್ ಕೊಠಡಿ ಸೌಲಭ್ಯಗಳು ಇಲ್ಲಿವೆ.












Click it and Unblock the Notifications