ಹಾಸನಾಂಬೆ ದರ್ಶನಕ್ಕೆ KSRTC ಪ್ಯಾಕೇಜ್ ಟೂರ್; ಈ ನಗರಗಳಿಂದ ವಿಶೇಷ ಬಸ್ ಸೇವೆ, ಟಿಕೆಟ್ ದರ, ವೇಳಾಪಟ್ಟಿ
ಬೆಂಗಳೂರು: ವರ್ಷಕ್ಕೊಮ್ಮೆ ಮಾತ್ರವೇ ಸಕಲ ದದ್ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಶ್ರೀಹಾಸನಾಂಬೆ ದೇವಿಯ ದರ್ಶನಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಪ್ಯಾಕೇಜ್ ಟೂರ್ಗಳನ್ನು ಘೋಷಿಸಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಹಾಸನಕ್ಕೆ ಈ ಬಸ್ಗಳು ಸಂಚಾರ ಸೇವೆ ನೀಡಲಿವೆ.
ಅಧಿಕಾರಿಗಳ ಪ್ರಕಾರ, ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ನಿಗದಿಪಡಿಸಿರುವ ಈ ಪ್ರವಾಸಗಳಲ್ಲಿ ಹಾಸನ, ಬೆಂಗಳೂರು ಮತ್ತು ಮೈಸೂರಿನಿಂದ ಬಸ್ಗಳ ಕಾರ್ಯಾಚರಣೆ ನಡೆಯಲಿದೆ. ಹಾಸನಾಂಬೆ ದೇವಿಯ ದರ್ಶನದ ಜೊತೆಗೆ ವಿವಿಧ ದೇವಾಲಯಗಳು, ಐತಿಹಾಸಿಕ ತಾಣಗಳು, ಜಲಪಾತಗಳು ಹಾಗೂ ಪ್ರವಾಸಿ ಸ್ಥಳಗಳಿಗೆ ಭೇಟಿಗೆ ಅವಕಾಶ ನೀಡಲಾಗಿದೆ.

ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ವೋಲ್ವೋ ಬಸ್ ಹೊರಟು, ಹಾಸನಾಂಬೆ ಮತ್ತು ಸಿದ್ದೇಶ್ವರ ದೇವಾಲಯಗಳ ದರ್ಶನದ ಬಳಿಕ ದೇವಿಗೆರೆ ಕಲ್ಯಾಣಿಗೆ ಭೇಟಿ ನೀಡಲಿದೆ. ಈ ಪ್ರವಾಸದ ಒಟ್ಟು ದೂರ 380 ಕಿ.ಮೀ. ಆಗಿದ್ದು, ದೇವಿಯ ದರ್ಶನ ಶುಲ್ಕ ₹1,000 ಸೇರಿ ಪ್ಯಾಕೇಜ್ ಟಿಕೆಟ್ ದರ ಒಬ್ಬರಿಗೆ ₹2,500 ದರ ನಿಗದಿಪಡಿಸಲಾಗಿದೆ.
ಮೈಸೂರಿನಿಂದಲೂ ವಿಶೇಷ ವ್ಯವಸ್ಥೆ
ಹಾಸನಾಂಬ ದೇವಿ ದರ್ಶನಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಿಂದಲೂ ವಿಶೇಷ ಬಸ್ ಕಾರ್ಯಾಚರಣೆ ಮಾಡಲಿವೆ. ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಡುವ ವೋಲ್ವೋ ಬಸ್ ಹಾಸನಾಂಬೆ ಮತ್ತು ಸಿದ್ದೇಶ್ವರ ದೇವಾಲಯಗಳ ದರ್ಶನದ ಬಳಿಕ ದೇವಿಗೆರೆ ಕಲ್ಯಾಣಿ ಹಾಗೂ ಹೊಳೆನರಸೀಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಲಿದೆ.
ಮೈಸೂರಿನಿಂದ ಒಟ್ಟು ಟೂರ್ ದೂರ್ 250 ಕಿ.ಮೀ. ಆಗಲಿದ್ದು, ಪ್ರಯಾಣದ ಈ ಪ್ಯಾಕೇಜ್ಗೆ ದೇವಿಯ ದರ್ಶನದ ಟಿಕೆಟ್ ಸೇರಿದಂತೆ ₹2,000 ದರ ನಿಗದಿಪಡಿಸಲಾಗಿದೆ.
ಹಾಸನದಿಂದ ವಿಶೇಷ ಪ್ರವಾಸ
ಹಾಸನದಿಂದಲೂ ಹಲವು ಪ್ರವಾಸಿ ಪ್ಯಾಕೇಜ್ಗಳನ್ನು ಪರಿಚಯಿಸಲಾಗಿದೆ. ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಒಂದು ಪ್ಯಾಕೇಜ್ನಲ್ಲಿ ಶ್ರೀ ಹಾಸನಾಂಬೆ ಮತ್ತು ಸಿದ್ದೇಶ್ವರ ದೇವಾಲಯಗಳು, ದೇವಿಗೆರೆ ಕಲ್ಯಾಣಿ ಹಾಗೂ ಕೆಂಚಮ್ಮನ ಹೊಸಕೋಟೆ ದೇವಾಲಯಕ್ಕೆ ಭೇಟಿ ನೀಡಬಹುದು.
ಈ ಟೂರ್ ದೂರ ಒಟ್ಟು 90 ಕಿ.ಮೀ. ಆಗಲಿದ್ದು, ಪ್ರಯಾಣದ ಈ ಪ್ಯಾಕೇಜ್ಗೆ ಒಬ್ಬರಿಗೆ ₹1,400 ದರ ನಿಗದಿಪಡಿಸಲಾಗಿದ್ದು, ಬುಧವಾರ, ಶುಕ್ರವಾರ ಮತ್ತು ಭಾನುವಾರ ಬಸ್ ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಿಳಿಸಿದೆ.
ಯಾವೆಲ್ಲ ಸ್ಥಳಗಳಿಗೆ ಭೇಟಿ
ಪ್ರಕೃತಿಯ ಸೌಂದರ್ಯ ಆಸ್ವಾದಿಸಲು ಬಯಸುವವರಿಗಾಗಿ ವಾಟೆಹೊಳೆ ಅಣೆಕಟ್ಟು, ಜನಾರ್ದನಸ್ವಾಮಿ ದೇವಸ್ಥಾನ, ಪಾಳ್ಯ, ಮರಗಡಿ ಜಲಪಾತ ಮತ್ತು ಬೆಟ್ಟದ ಭೈರವೇಶ್ವರ ದೇವಸ್ಥಾನಗಳನ್ನು ಒಳಗೊಂಡ ಪ್ರವಾಸವಿದೆ. 184 ಕಿ.ಮೀ. ಪ್ರಯಾಣದ ಈ ಪ್ಯಾಕೇಜ್ಗೆ ₹500 ದರ ನಿಗದಿಪಡಿಸಲಾಗಿದೆ. ಮಂಜರಾಬಾದ್ ಕೋಟೆ, ಮೂಕನಮನೆ ಜಲಪಾತ ಮತ್ತು ಬಿಸಿಲೆ ಘಾಟ್ ವೀಕ್ಷಣಾ ಕೇಂದ್ರಗಳಿಗೆ ತೆರಳುವ ಮತ್ತೊಂದು ಪ್ಯಾಕೇಜ್ 192 ಕಿ.ಮೀ. ದೂರವನ್ನು ಒಳಗೊಂಡಿದ್ದು, ಟಿಕೆಟ್ ದರ ₹525 ಆಗಿದೆ.
ಬೇಲೂರು ಮತ್ತು ಹಳೇಬೀಡಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣಗಳನ್ನು ವೀಕ್ಷಿಸಲು ಬಯಸುವವರಿಗೂ ಅವಕಾಶವಿದೆ. ಶ್ರೀ ಚನ್ನಕೇಶವ ದೇವಾಲಯ, ಯಗಚಿ ಜಲಸಾಹಸ ಕ್ರೀಡಾ ಕೇಂದ್ರ, ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ, ಹೊಯ್ಸಳೇಶ್ವರ ದೇವಾಲಯ ಮತ್ತು ಕೊಂಡಜ್ಜಿಯ ವರದರಾಜ ಸ್ವಾಮಿ ದೇವಾಲಯಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಒಟ್ಟು 117 ಕಿ.ಮೀ ದೂರದ ಈ ಪ್ರಯಾಣಕ್ಕೆ ₹375 ದರ ನಿಗದಿಪಡಿಸಲಾಗಿದೆ. ಶ್ರೀ ಪುಷ್ಪಗಿರಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ದಾಸೋಹದ ವ್ಯವಸ್ಥೆಯೂ ಇರಲಿದೆ.
ಮಾತ್ರವಲ್ಲದೇ ಶ್ರವಣಬೆಳಗೊಳಕ್ಕೆ ತೆರಳುವ ಪ್ಯಾಕೇಜ್ನಲ್ಲಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ, ನುಗ್ಗೇಹಳ್ಳಿ, ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟಗಳು ಹಾಗೂ ಬೆಲಸಿಂದ ಪಾರ್ಕ್ ಸೇರಿವೆ. ಒಟ್ಟು 132 ಕಿ.ಮೀ. ಪ್ರಯಾಣಕ್ಕೆ ₹400 ದರ ನಿಗದಿಪಡಿಸಲಾಗಿದೆ. ಊಟದ ವ್ಯವಸ್ಥೆಯು ದೇವಸ್ಥಾನದಲ್ಲಿಯೇ ಇರಲಿದೆ.
ಐತಿಹಾಸಿಕ ದೇವಾಲಯಗಳಿಗೆ ಭೇಟಿಗೆ ಅವಕಾಶ
ಇನ್ನೊಂದು ಪ್ಯಾಕೇಜ್ನಲ್ಲಿ ಕೋರವಂಗಲದ ಭೂಚೇಶ್ವರ ದೇವಾಲಯ, ಹಾರನಹಳ್ಳಿಯ ಕೇಶವ ಮತ್ತು ಸೋಮೇಶ್ವರ ದೇವಸ್ಥಾನಗಳು, ಮಾಲೇಕಲ್ಲು ತಿರುಪತಿ ದೇವಾಲಯ, ಜೇನುಕಲ್ಲು ಸಿದ್ದೇಶ್ವರ ಬೆಟ್ಟ, ಅರಸೀಕೆರೆ, ಶಾಂತಿಗ್ರಾಮ ಮತ್ತು ಗೆಂಡೆಕಟ್ಟೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಬಹುದು. 134 ಕಿ.ಮೀ. ಪ್ರಯಾಣದ ಈ ಪ್ಯಾಕೇಜ್ಗೆ ₹400 ದರ ನಿಗದಿಪಡಿಸಲಾಗಿದ್ದು, ಜೇನುಕಲ್ಲು ಸಿದ್ದೇಶ್ವರ ಬೆಟ್ಟದಲ್ಲಿ ದಾಸೋಹ ಲಭ್ಯವಿರುತ್ತದೆ.
ಶೆಟ್ಟಿಹಳ್ಳಿ ಚರ್ಚ್ ಮತ್ತು ಹೇಮಾವತಿ ಜಲಾಶಯವನ್ನು ವೀಕ್ಷಿಸಲು ಬಯಸುವವರಿಗಾಗಿ ಹಾಲುವಾಗಿಲು ಕಟ್ಟೆ, ಶೆಟ್ಟಿಹಳ್ಳಿ ಚರ್ಚ್, ಕೋನಾಪುರದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಗೊರೂರಿನ ಹೇಮಾವತಿ ಜಲಾಶಯ ಹಾಗೂ ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ಮತ್ತು ರಾಮೇಶ್ವರ ದೇವಸ್ಥಾನಗಳನ್ನು ಒಳಗೊಂಡ ಪ್ರವಾಸವನ್ನೂ ರೂಪಿಸಲಾಗಿದೆ. 143 ಕಿ.ಮೀ. ಪ್ರಯಾಣದ ಈ ಪ್ಯಾಕೇಜ್ಗೆ ₹400 ದರ ನಿಗದಿಪಡಿಸಲಾಗಿದೆ.
ಜಾವಗಲ್, ಅರಕೆರೆ, ಬೆಟ್ಟದಪುರ, ಬಾಣಾವರ ಮತ್ತು ಬಿಳಿಕಲ್ಲಿನ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುವ ಮತ್ತೊಂದು ಪ್ಯಾಕೇಜ್ ಕೂಡ ಲಭ್ಯವಿದೆ. ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯ, ಜಾವಗಲ್, ಶ್ರೀ ಚನ್ನಕೇಶವ ದೇವಸ್ಥಾನ, ಅರಕೆರೆ ಹಾಗೂ ವಿವಿಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳನ್ನು ಒಳಗೊಂಡ ಈ ಪ್ರವಾಸದ ಒಟ್ಟು ದೂರ 181 ಕಿ.ಮೀ. ಆಗಿದ್ದು, ಟಿಕೆಟ್ ದರ ₹500 ಆಗಿದೆ.
ಟಿಕೆಟ್, ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಹಾಸನದಿಂದ ಹೊರಡುವ ಟೂರ್ ಪ್ಯಾಕೇಜ್ ಬಸ್ಗಳು ಬೆಳಗ್ಗೆ 7.30ಕ್ಕೆ ನಗರ ಬಸ್ ನಿಲ್ದಾಣದಿಂದ ಹೊರಡಲಿವೆ. ಹಾಸನಾಂಬೆ ದರ್ಶನದ ವಿಶೇಷ ಪ್ಯಾಕೇಜ್ ಮಾತ್ರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಪ್ರವಾಸ ಮುಗಿಸಿ ಸಂಜೆ ಸುಮಾರು 7 ಗಂಟೆಗೆ ವಾಪಸ್ ತಲುಪಬಹುದು. ಹೆಚ್ಚಿನ ಮಾಹಿತಿ ಟಿಕೆಟ್ ಬುಕಿಂಗ್ ಭಕ್ತರು KSRTCಯ ಅಧಿಕೃತ ವೆಬ್ಸೈಟ್ www.ksrtc.in ಗೆ ಭೇಟಿ ನೀಡಬಹುದು. ಜೊತೆಗೆ 7760990518, 7760990519, 7760990520 ಮತ್ತು 7760990523 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.


Click it and Unblock the Notifications
