SSLC 2024: ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್
ಬೆಂಗಳೂರು, ಮೇ 28: ರಾಜ್ಯದಲ್ಲಿ 2023-24ನೇ ಸಾಲಿನ ಎಸ್‌ಎಸ್ಎಲ್‌ಸಿ ಪೂರಕ ಪರೀಕ್ಷೆ-2 ಜೂನ್ 14ರಿಂದ ಆರಂಭವಾಗಲಿವೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುಡ್‌ನ್ಯೂಸ್ ನೀಡಿದೆ. ಪೂರಕ ಪರೀಕ್ಷೆ ಹಾಜರಾಗುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದೆ.
ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ನಡೆಯುವ ದಿನಾಂಕಗಳಲ್ಲಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಬಸ್ ಸೌಲಭ್ಯವನ್ನು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಮತ್ತು ಹಿಂದಿರುವಾಗ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಪ್ರವೇಶ ಪತ್ರವನ್ನು ತೋರಿಸಿ, ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕೆಎಸ್‌ಆರ್‌ಟಿಸಿ, ' ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಿನಾಂಕ 14.06.2024 ರಿಂದ ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗಳು ಪ್ರಾರಂಭವಾಗಲಿವೆ. ಈ ಸಂಬಂಧ ವಿದ್ಯಾರ್ಥಿಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಇತರೆ ವಿದ್ಯಾಸಂಸ್ಥೆಗಳಿಗೆ ಪರೀಕ್ಷಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ, ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿಸುವಂತೆ ಉಲ್ಲೇಖಿತ-1 ರ ಪತ್ರದಲ್ಲಿ ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯವರು ಕೋರಿರುತ್ತಾರೆ.
ಅದರನ್ವಯ ಕ.ರಾ.ರ.ಸಾ.ನಿಗಮವು, ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ನಡೆಯುವ ದಿನಾಂಕಗಳಂದು ಅಂದರೆ, ದಿನಾಂಕ 14.06.2024 ರಿಂದ 22.06.2024 ರವರೆಗೆ, ಪರೀಕ್ಷೆಗೆ ಹಾಜರಾಗುವ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ "ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರವೇಶ ಪತ್ರವನ್ನು" ತೋರಿಸಿ, ನಿಗಮದ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ, ನಿಗಮದ ಎಲ್ಲಾ ಚಾಲಕರು ಹಾಗೂ ನಿರ್ವಾಹಕರುಗಳಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುಮತಿಸಲು ಸೂಕ್ತ ತಿಳುವಳಿಕೆ ನೀಡಲು ಸೂಚಿಸಲಾಗಿದೆ. ಮುಂದುವರೆದು, ಪ್ರವೇಶ ಪತ್ರದ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣಾ ಮಾರ್ಗದಲ್ಲಿ ಪರೀಕ್ಷಾ ಕೇಂದ್ರಗಳಿದ್ದಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸದರಿ ಮಾರ್ಗಗಳಲ್ಲಿ ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳುವುದು' ಎಂದು ತಿಳಿಸಿದೆ.












Click it and Unblock the Notifications