KSRTC BUS: ಕೆಎಸ್‌ಆರ್‌ಟಿಸಿ ಈಗ ಏಷ್ಯಾದ ಅತ್ಯುತ್ತಮ ಉದ್ಯೋಗದಾತ!
ಕರ್ನಾಟಕದ ಹೆಮ್ಮೆಯ ಉದ್ಯಮಗಳಲ್ಲಿ ಕೆಎಸ್‌ಆರ್‌ಟಿಸಿ ಕೂಡ ಒಂದಾಗಿದ್ದು, ಸಾಕಷ್ಟು ದೊಡ್ಡ ಹೆಸರು ಗಳಿಸಿದೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಬಸ್‌ಗಳು ಎಷ್ಟೋ ಉತ್ತಮ. ಹೀಗೆ ಕಡಿಮೆ ಹಣದಲ್ಲೇ ಅತ್ಯುತ್ತಮವಾದ ಸೇವೆ ಕೊಡುವಲ್ಲಿ KSRTCಗೆ ದೊಡ್ಡ ಹೆಸರಿದೆ. ಇಂತಹ ಸಾರಿಗೆ ಸಂಸ್ಥೆಗೆ ಮತ್ತೊಂದು ಗರಿ ಸಿಕ್ಕಿದೆ. 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‌ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದೆ.
ಹೌದು, ಶಕ್ತಿ ಯೋಜನೆ ಬಳಿಕ ಕೆಎಸ್‌ಆರ್‌ಟಿಸಿ ಹೆಸರು ದೇಶದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ಇಷ್ಟುದಿನ ತನ್ನ ಉತ್ತಮ ಸೇವೆಯಿಂದಲೇ ಹೆಸರು ಗಳಿಸಿದ್ದ KSRTCಗೆ ಉಚಿತ ಬಸ್ ಸೇವೆ ಬಲ ತುಂಬಿದೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಈ ಹೊತ್ತಲ್ಲೇ ಉದ್ಯೋಗ ಕಲ್ಪಿಸುವ ಉತ್ತಮ ಬ್ರ್ಯಾಂಡ್ ಆಗಿಯೂ ಕೆಎಸ್‌ಆರ್‌ಟಿಸಿ ಗುರುತಿಸಿಕೊಂಡಿದೆ. ನಿತ್ಯ ಕೋಟ್ಯಂತರ ಜನರು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ನಂಬಿ ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಾರೆ. ಅದ್ರಲ್ಲೂ ಕರ್ನಾಟಕ ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ನಮ್ಮ ಕೆಎಸ್‌ಆರ್‌ಟಿಸಿಯ ಪಾತ್ರ ಹೆಮ್ಮೆಯದ್ದಾಗಿದೆ.

ಖುಷಿ ಹಂಚಿಕೊಂಡ ಕೆಎಸ್‌ಆರ್‌ಟಿಸಿ ಸಂಸ್ಥೆ
ಇನ್ನು 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರ್ಯಾಂಡ್‌ಗೆ ಕೆಎಸ್‌ಆರ್‌ಟಿಸಿ ಆಯ್ಕೆಯಾಗಿದ ಖುಷಿ ವಿಚಾರವನ್ನು ಸಂಸ್ಥೆ ಹಂಚಿಕೊಂಡಿದೆ. 'ಕೆಎಸ್‌ಆರ್‌ಟಿಸಿ 2023ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ Asia's Best Brand Employer Award ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳ ಅನುಷ್ಠಾನ ವರ್ಗದಲ್ಲಿ ಆಯ್ಕೆಯಾಗಿರುತ್ತದೆ. ಇಂದು 14ನೇ ಆವೃತ್ತಿಯ 18ನೇ ಉದ್ಯೋಗದಾತ ಬ್ರಾಂಡಿಂಗ್ ಪ್ರಶಸ್ತಿ ಪ್ರಕಟಿಸಲಾಗಿದ್ದು ನಿಗಮ ಈ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 17ರಂದು ಸಿಂಗಾಪೂರ್ ನಲ್ಲಿ ನಡೆಯಲಿದೆ.' ಎಂದು ಟ್ವೀಟ್ ಮಾಡಿದೆ.
ಕೆಎಸ್ ಆರ್ ಟಿ ಸಿಯು 2023 ನೇ ಸಾಲಿನ ಏಷ್ಯಾದ ಅತ್ಯುತ್ತಮ ಉದ್ಯೋಗದಾತ ಬ್ರಾಂಡ್ ಪ್ರಶಸ್ತಿಗೆ ಆಯ್ಕೆಯಾಗಿರುವ ಬಗ್ಗೆ. pic.twitter.com/FslAb0Z7hq
— KSRTC (@KSRTC_Journeys) August 8, 2023
ಸಾರಿಗೆ ಸಂಸ್ಥೆ ಆದಾಯದಲ್ಲಿ ಏರಿಕೆ!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ನೀರಿದ ಭರವಸೆಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕೂಡ ಒಂದು. ಹೀಗೆ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆ ಮೂಲಕ ಮಹಿಳೆಯರು ಅನುಕೂಲ ಪಡೆಯುವ ಜೊತೆಗೆ ಸಾರಿಗೆ ಸಂಸ್ಥೆಗಳ ಆದಾಯ ಕೂಡ ಇದೀಗ ಹೆಚ್ಚಾಗಿದೆ. ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಶೂನ್ಯ ದರದಲ್ಲೇ ಟಿಕೆಟ್ ನೀಡಲಾಗುತ್ತೆ. ಆದರೆ ಈ ಟಿಕೆಟ್ ಮೊತ್ತವನ್ನು ಸರ್ಕಾರ ಪಾವತಿಸುತ್ತಿದೆ. ಹೀಗಾಗಿ ರಾಜ್ಯ ಸಾರಿಗೆ ಸಂಸ್ಥೆಯ ವಿವಿಧ ವಿಭಾಗಗಳಿಗೆ ಭಾರಿ ಅನುಕೂಲವಾಗಿದೆ.

ವಾಯುವ್ಯ ಸಾರಿಗೆಗೆ ಸಿಕ್ಕಿದೆ ಬಂಪರ್!
ಪ್ರಮುಖವಾಗಿ ಕರ್ನಾಟಕದ ವಾಯುವ್ಯ ಸಾರಿಗೆ ಆದಾಯದಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶಕ್ತಿ ಯೋಜನೆ ಬಳಿಕ 2 ತಿಂಗಳಲ್ಲಿ ಮಹಿಳೆಯರಿಂದಲೇ 27 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಶಕ್ತಿ ಯೋಜನೆ ಬಳಿಕ 2 ತಿಂಗಳಲ್ಲಿ ಒಟ್ಟು 1 ಕೋಟಿ 54 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಹೀಗಾಗಿ ನಷ್ಟದ ಹಾದಿಯಲ್ಲಿದ್ದ ಸಾರಿಗೆ ನಿಗಮಕ್ಕೆ ಇದೀಗ ದುಪ್ಪಟ್ಟು ಆದಾಯ ಬಂದಿದೆ. ಯೋಜನೆ ಶುರುವಾದ ನಂತರ ಈವರೆಗೆ 1 ಕೋಟಿ 54 ಲಕ್ಷ ಜನ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿರುವುದು ಸಂಸ್ಥೆಗೆ ಹೊಸ ಚೇತರಿಕೆ ನೀಡಿದೆ.

ಒಟ್ನಲ್ಲಿ ರಾಜ್ಯದ ಶಕ್ತಿ ಯೋಜನೆ ಸದ್ದು ಮಾಡುವ ಸಂದರ್ಭದಲ್ಲೇ ರಾಜ್ಯ ಸಾರಿಗೆ ಸಂಸ್ಥೆ ಹೊಸ ಸಾಧನೆ ಮಾಡಿದೆ. ಕರ್ನಾಟಕದ ಹಲವು ಬ್ರ್ಯಾಂಡ್‌ಗಳು ಸದ್ದು ಮಾಡುವ ವೇಳೆ, ಕರ್ನಾಟಕ ಸಾರಿಗೆ ಸಂಸ್ಥೆಯೂ ಜಾಗತಿಕ ಮಟ್ಟದಲ್ಲಿ ಮತ್ತೆ ಸದ್ದು ಮಾಡುತ್ತಿದೆ. ಹಾಗೇ ಶಕ್ತಿ ಯೋಜನೆಗೆ ಕೊರತೆಯಾದ ಬಸ್‌ಗಳು ಹಾಗೂ ಸಿಬ್ಬಂದಿ ಕೊರೆತೆಯನ್ನೂ ನೀಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕ್ರಮ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿರುವ ಮಹಿಳಾ ಪ್ರಯಾಣಿಕರಿಗೆ ಮತ್ತಷ್ಟು ರಿಲೀಫ್ ನೀಡುವ ನಿರೀಕ್ಷೆ ಇದೆ.












Click it and Unblock the Notifications