ಹಾಸನ : ಸೇತುವೆಯಿಂದ ಬಿದ್ದ ಕೆಎಸ್ಆರ್‌ಟಿಸಿ ಬಸ್
ಹಾಸನ, ಮಾರ್ಚ್ 21 : ಬೇಲೂರು ಬಳಿ ಕೆಎಸ್ಆರ್‌ಟಿಸಿ ಬಸ್ ಸೇತುವೆಯಿಂದ ಕೆಳಗೆ ಬಿದ್ದಿದೆ. 30 ವಿದ್ಯಾರ್ಥಿಗಳು ಸೇರಿದಂತೆ 44 ಪ್ರಯಾಣಿಕರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಸೋಮವಾರ ಬೆಳಗ್ಗೆ 8 ಗಂಟೆಗೆ ಸಕಲೇಶಪುರಿಂದ ಹೊರಟಿಟ್ಟ ಬಸ್ ಬೇಲೂರಿಗೆ ಬರುತ್ತಿತ್ತು. ಈ ಸಮಯದಲ್ಲಿ ಬಿಕ್ಕೋಡು-ವಾಟೆಹಳ್ಳ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಉರುಳಿದೆ.
ಅಪಘಾತದಲ್ಲಿ 30 ವಿದ್ಯಾರ್ಥಿಗಳು ಸೇರಿದಂತೆ 44 ಪ್ರಯಾಣಿಕರು ಗಾಯಗೊಂಡಿದ್ದು, ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ರಾಜ್ಯದ ನಗರಗಳಲ್ಲಿ ಮೇ ಅಂತ್ಯದ ವೇಳೆಗೆ ನಗರ ಸಾರಿಗೆ]

'ವಾಟೇಹಳ್ಳ ಸಮೀಪ ಬಸ್ ಬರುತ್ತಿದ್ದಾಗಲೇ ಕಟ-ಕಟ ಶಬ್ದ ಬಂತು ಆಕ್ಸೆಲ್ ಬ್ಲೇಡ್ ತುಂಡಾಗಿ ಬಸ್ ಹಳ್ಳಕ್ಕೆ ಉರುಳಿತು' ಎಂದು ಬಸ್ಸಿನ ನಿರ್ವಾಹಕ ಪ್ರದೀಪ್ ಹೇಳಿದ್ದಾರೆ. [13 KSRTC ಬಸ್ ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ]
ಅಪಘಾತದಲ್ಲಿ ಗಾಯಗೊಂಡವರಿಗೆ ಕೆಎಸ್ಆರ್‌ಟಿಸಿಯಿಂದ 1 ಸಾವಿರ ರೂ. ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಪ್ರಯಾಣಿಕರು ಹೆಚ್ಚಿನ ಪರಿಹಾರಕ್ಕೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.
ಈ ಅಪಘಾತದಲ್ಲಿ ಅರೇಹಳ್ಳಿಯ ನಿವಾಸಿ ತುಂಬು ಗರ್ಭಿಣಿ ಪ್ರಮೀಳಾ ಅವರು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.












Click it and Unblock the Notifications