KSRTCಗೆ ಪ್ರತಿಷ್ಠಿತ 3 ಅಂತಾರಾಷ್ಟ್ರೀಯ ಪ್ರಶಸ್ತಿಗಳು, ಸಾಧನೆ ಏನೆಂದು ತಿಳಿಯಿರಿ
ಬೆಂಗಳೂರು, ನವೆಂಬರ್, 24: ನಮ್ಮ ರಾಜ್ಯದ ಅಂಬಾರಿ ಅಂತಲೇ ಹೆಸರುವಾಸಿಯಾಗಿರುವ ಕೆಎಸ್‌ಆರ್‌ಟಿಸಿ ಹಾಗಾಗ ಅತ್ಯುತ್ತಮ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಲೇ ಇದೆ. ಹಾಗೆಯೇ ಇದೀಗ ಇದೇ ಕೆಎಸ್ಆರ್ಟಿಸಿಗೆ ಪ್ರತಿಷ್ಠಿತ 3 ಅಂತಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಯಾವ ಉದ್ದೇಶಕ್ಕಾಗಿ ಈ ಪ್ರಶಸ್ತಿಗಳು ಲಭಿಸಿವೆ ಎಂದು ಇಲ್ಲಿ ತಿಳಿಯಿರಿ.
ಕರ್ನಾಟಕ ರಾಜ್ಯದ ಸಾರಿಗೆ ನಿಗಮವು ಜಾರಿ ಮಾಡಿರುವ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕೆ ಎರಡು ಪ್ರಶಸ್ತಿಗಳು ಬಂದಿವೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನ್ಯಾಷನಲ್ ಮೀಡಿಯಾ ಕಾನ್ಕ್ಲೇವ್‌ನ ಎರಡು ಪ್ರಶಸ್ತಿ ಹಾಗೂ ವರ್ಲ್ಡ್ ಮಾರ್ಕೆಟಿಂಗ್ ಕಾಂಗ್ರೆಸ್ನ ಗ್ಲೋಬಲ್ ಮಾರ್ಕೆಟಿಂಗ್ ಎಕ್ಸಲೆನ್ಸ್ ಒಂದು ಪ್ರಶಸ್ತಿ ಬಂದಿದೆ. ನವೆಂಬರ್ 23ರಂದು ಭುವನೇಶ್ವರ್ನ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯ ಸಭಾಂಗಣದಲ್ಲಿ ನಡೆದ ನ್ಯಾಷನಲ್ ಮೀಡಿಯಾ ಕಾನ್ಕ್ಲೇವ್ ಅವಾರ್ಡ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
ನ್ಯಾಷನಲ್ ಮೀಡಿಯಾ ಕಾನ್ಕ್ಲೇವ್ ಆಯೋಜಿಸಿದ್ದ 7ನೇ ನ್ಯಾಷನಲ್ ಮೀಡಿಯಾ ಕಾನ್ಕ್ಲೇವ್ ಅವಾರ್ಡ್, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಹಿತಿ ಸಾರ್ವಜನಿಕ ಸಂಪರ್ಕ, ಪಂಚಾಯತ್ ರಾಜ್, ಕುಡಿಯುವ ನೀರು ಹಾಗೂ ಅರಣ್ಯ ಮತ್ತು ಪರಿಸರ ಸಚಿವ ಪ್ರದೀಪ್ ಕುಮಾರ್ ಅಮತ್ ಹಾಗೂ ಉನ್ನತ ಶಿಕ್ಷಣ, ಸಹಕಾರ ಸಚಿವ ಅತನು ಸವ್ಯಸಾಚಿ ನಾಯಕ್ ಅವರು ನಿಗಮವು ಜಾರಿ ಮಾಡಿದ ವಿನೂತನ ವಾಹನಗಳ ಪುನಶ್ಚೇತನ ಯೋಜನೆ ಉಪಕ್ರಮ ಹಾಗೂ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ ಪ್ರಶಸ್ತಿಗಳನ್ನು ಸಂಸ್ಥೆಗೆ ಪ್ರಧಾನ ಮಾಡಿದರು.
ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಜಯಕರ ಶೆಟ್ಟಿ ಹಾಗೂ ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಂ. ಜಗದೀಶ್, ನಿಗಮದ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ವರ್ಲ್ಡ್ ಮಾರ್ಕೆಟಿಂಗ್ ಕಾಂಗ್ರೆಸ್ ಮುಂಬೈಯ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಆಯೋಜಿಸಿದ 10ನೇ ಆವೃತ್ತಿಯ ಗ್ಲೋಬಲ್ ಮಾರ್ಕೆಟಿಂಗ್ ಎಕ್ಸಲೆನ್ಸ್ ಪ್ರಶಸ್ತಿ-2023 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ KSRTC ಜಾರಿ ಮಾಡಿದ ಪ್ರತಿಷ್ಠಿತ ವಾಹನಗಳಾದ ಅಂಬಾರಿ ಉತ್ಸವ, ಪಲ್ಲಕ್ಕಿ ಮತ್ತು ವಿದ್ಯುತ್ ವಾಹನಗಳ ಬ್ರಾಂಡಿಂಗ್ ಉಪಕ್ರಮಕ್ಕಾಗಿ ಪ್ರಶಸ್ತಿ ಲಭಿಸಿತು. ಅಶುತೋಷ್ ಶರ್ಮ ಹಾಗೂ ಮಾಧುರಿ ಸಾಥೆ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಮಂಗಳೂರು ವಿಭಾಗದ ಹಿರಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಹಾಸನ ಪ್ರಾದೇಶಿಕ ಕಾರ್ಯಾಗಾರ ವ್ಯವಸ್ಥಾಪಕ ಎಸ್.ಆರ್. ಸತೀಶ್ ಬಾಬು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.












Click it and Unblock the Notifications