ಶಿವಮೊಗ್ಗ: 1000 ರೂ. ಕೊಟ್ರೆ ಸಾಕು, ಮೊಬೈಲ್, ಪುಸ್ತಕ ನೋಡ್ಕೊಂಡು KSOU ಪರೀಕ್ಷೆ ಬರೀಬಹುದು! ವೈರಲ್‌ ವಿಡಿಯೋ ನೋಡಿ

ಶಿವಮೊಗ್ಗ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್‌ಒಯು) ನಡೆಸುವ ಪರೀಕ್ಷೆಗಳಲ್ಲಿ ಭಾರಿ ಅಕ್ರಮ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೆಎಸ್‌ಒಯು ಪ್ರಾದೇಶಿಕ ಕೇಂದ್ರದಲ್ಲಿ ಹಣ ಪಡೆದು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡಲು ಮುಕ್ತ ಅವಕಾಶ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ಫೋನ್ ಮತ್ತು ಪುಸ್ತಕಗಳನ್ನ ಇಟ್ಟುಕೊಂಡು ಯಾವುದೇ ಭಯವಿಲ್ಲದೆ ಪರೀಕ್ಷೆ ಬರೆಯುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಶಿಕ್ಷಣ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

KSOU Exam Irregularities In Shivamogga Pay Money To Copy Using Phones And Books Video Goes Viral

ಹಣ ಕೊಟ್ಟರೆ ವಿಐಪಿ ಸೌಲಭ್ಯ, ಇಲ್ಲದಿದ್ದರೆ ಸಾಮಾನ್ಯ ಕೊಠಡಿ

ಶಿವಮೊಗ್ಗ ಕೆಎಸ್‌ಒಯು ಕೇಂದ್ರದಲ್ಲಿ ನಡೆಯುತ್ತಿರುವ ಈ ಪರೀಕ್ಷಾ ಅಕ್ರಮ ಸಂಪೂರ್ಣವಾಗಿ ಒಂದು ವ್ಯವಸ್ಥಿತ ಜಾಲದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಹಣ ನೀಡಿದ ವಿದ್ಯಾರ್ಥಿಗಳಿಗೆ ಒಂದು ರೀತಿಯ ನಿಯಮವಿದ್ದರೆ, ಹಣ ನೀಡದ ವಿದ್ಯಾರ್ಥಿಗಳಿಗೆ ಮತ್ತೊಂದು ರೀತಿಯ ನಿಯಮ ಅನ್ವಯಿಸಲಾಗುತ್ತಿದೆ.

ಪರೀಕ್ಷಾ ಅಕ್ರಮಕ್ಕಾಗಿ ಲಂಚ ನೀಡಿದ ವಿದ್ಯಾರ್ಥಿಗಳನ್ನ ಎರಡನೇ ಮಹಡಿಯಲ್ಲಿರುವ ವಿಶೇಷ ಕೊಠಡಿಗಳಲ್ಲಿ ಕೂರಿಸಲಾಗುತ್ತಿತ್ತು. ಅಲ್ಲಿ ಅವರಿಗೆ ಮೊಬೈಲ್ ಫೋನ್ ಮತ್ತು ಪುಸ್ತಕಗಳನ್ನು ನೋಡಿ ಉತ್ತರ ಬರೆಯಲು ಸಕಲ ಸೌಲಭ್ಯ ಒದಗಿಸಲಾಗಿತ್ತು.

ಆದರೆ ಅದೇ ಹಣ ನೀಡಲು ನಿರಾಕರಿಸಿದ ವಿದ್ಯಾರ್ಥಿಗಳನ್ನ ಮೊದಲನೇ ಮಹಡಿಯಲ್ಲಿ ಕೂರಿಸಿ, ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಪರೀಕ್ಷೆ ಬರೆಸಲಾಗುತ್ತಿತ್ತು ಎಂಬ ಆಘಾತಕಾರಿ ವಿಚಾರ ಬಯಲಾಗಿದೆ.

ಪ್ರಾದೇಶಿಕ ನಿರ್ದೇಶಕ ಬಿ.ಎಂ. ಸ್ವಾಮಿ ನೇತೃತ್ವದಲ್ಲಿ ಅಕ್ರಮ?

ಈ ಸಂಪೂರ್ಣ ಪರೀಕ್ಷಾ ಅಕ್ರಮದ ಜಾಲವು ಕೆಎಸ್‌ಒಯು ಶಿವಮೊಗ್ಗ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಿ.ಎಂ. ಸ್ವಾಮಿ ಅವರ ನೇತೃತ್ವದಲ್ಲಿಯೇ ರಾಜಾರೋಷವಾಗಿ ನಡೆಯುತ್ತಿತ್ತು ಎಂಬ ಆರೋಪಗಳು ಕೇಳಿಬರುತ್ತಿವೆ.

ಪರೀಕ್ಷೆ ಆರಂಭವಾಗಿ ಸುಮಾರು ಅರ್ಧ ಗಂಟೆಯ ಬಳಿಕ ಕೊಠಡಿಗೆ ಆಗಮಿಸುತ್ತಿದ್ದ ಬಿ.ಎಂ. ಸ್ವಾಮಿ ಅವರು, ವಿದ್ಯಾರ್ಥಿಗಳ ಸಂಖ್ಯೆಯನ್ನ ಎಣಿಕೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ, ಹಣ ನೀಡಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಸಾಮೂಹಿಕ ನಕಲು ಮಾಡಲು ಖುದ್ದಾಗಿ ನಿಂತು ಮೇಲ್ವಿಚಾರಣೆ ನಡೆಸುತ್ತಿದ್ದರು ಎಂಬ ಆರೋಪವೂ ಅವರ ಮೇಲಿದೆ. ಇದು ವ್ಯವಸ್ಥೆಯ ದೊಡ್ಡ ವೈಫಲ್ಯವನ್ನು ಎತ್ತಿತೋರಿಸುತ್ತಿದೆ.

ಫೋನ್‌ಪೇ, ಗೂಗಲ್ ಪೇ ಮೂಲಕ ಪರೀಕ್ಷೆಯಲ್ಲಿ ನಕಲು ಮಾಡಲು ಲಂಚ ವಸೂಲಿ

ಪರೀಕ್ಷೆಯಲ್ಲಿ ನಕಲು ಮಾಡಲು ಅವಕಾಶ ನೀಡಿದ್ದಕ್ಕಾಗಿ ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ಬರೋಬರಿ 1,000 ರೂಪಾಯಿಗಳಂತೆ ಹಣ ವಸೂಲಿ ಮಾಡಲಾಗುತ್ತಿತ್ತು. ಪರೀಕ್ಷೆ ಮುಗಿದ ಬಳಿಕ ಪ್ರತಿದಿನ ಅಂದಾಜು 70 ರಿಂದ 100 ವಿದ್ಯಾರ್ಥಿಗಳಿಂದ ಈ ಹಣವನ್ನ ಸಂಗ್ರಹಿಸಲಾಗುತ್ತಿತ್ತು.

ಕಚೇರಿಯ ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕರಾದ (SDC) ವಿನಯ ಕೆ.ಜೆ., ನಿಂಗ ನಾಯಕ್, ಅಟೆಂಡರ್ ಯೋಗೇಶ್ ಗೌಡ ಹಾಗೂ ಡೇಟಾ ಎಂಟ್ರಿ ಆಪರೇಟರ್ ಹರೀಶ್ ಅವರು ಈ ಹಣ ವಸೂಲಿಯಲ್ಲಿ ಶಾಮೀಲಾಗಿದ್ದರು.

ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಈ ಅಕ್ರಮ ಹಣವನ್ನು ನಗದು ರೂಪದಲ್ಲಿ ಮಾತ್ರವಲ್ಲದೆ, ಪರೀಕ್ಷಾ ಕೇಂದ್ರದಲ್ಲಿಯೇ ಫೋನ್‌ಪೇ ಹಾಗೂ ಗೂಗಲ್ ಪೇ ಮೂಲಕವೂ ಸ್ವೀಕರಿಸಲಾಗುತ್ತಿತ್ತು.

ಶಿವಮೊಗ್ಗ ನಗರದ ಆಲ್ಕೊಳ ವೃತ್ತದ ಸಮೀಪವಿರುವ ಕೆಎಸ್‌ಒಯು ಪ್ರಾದೇಶಿಕ ಕಚೇರಿಯಲ್ಲಿಯೇ ಈ ಪರೀಕ್ಷಾ ಕೇಂದ್ರವಿದ್ದು, ಅಲ್ಲಿಯೇ ಈ ದೊಡ್ಡ ಮಟ್ಟದ ಅಕ್ರಮ ನಡೆದಿದೆ. ಮುಕ್ತ ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳು ಅಕ್ಟೋಬರ್ 7ರಂದು ಆರಂಭವಾಗಿದ್ದು, ನವೆಂಬರ್ 20ರವರೆಗೆ ನಡೆಯಲಿವೆ.

ಈ ಗಂಭೀರ ಆರೋಪಗಳ ಬೆನ್ನಲ್ಲೇ ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+