ರಿಯಾಯಿತಿ ದರದ ರೇಷ್ಮೆ ಸೀರೆ: ನಂಬಿ ಹೋದವರು ಬೇಸ್ತು
ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ನಿಮಿತ್ತ ಶೇ 50ರ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟ ಮಾಡಲಾಗುವುದು ಎಂಬ ಕರ್ನಾಟಕ ರಾಜ್ಯ ರೇಷ್ಮೆ ಕೈಗಾರಿಕಾ ನಿಗಮದ (ಕೆಎಸ್ ಐಸಿ) ಜಾಹೀರಾತು ನಂಬಿ ಹೋದ ಗ್ರಾಹಕರು ಬೇಸ್ತುಬಿದ್ದಿದ್ದಾರೆ.
ಆಗಸ್ಟ್ 15ರಂದು 9,000 ರುಪಾಯಿ ಮೌಲ್ಯದ ರೇಷ್ಮೆ ಸೀರೆಗಳನ್ನು ಶೇ 50ರಷ್ಟು ರಿಯಾಯಿತಿ ದರಕ್ಕೆ, ಅಂದರೆ 4,500 ರುಪಾಯಿಗೆ ಮಾರುವುದಾಗಿ ನಿಗಮ ಪ್ರಕಟಿಸಿತ್ತು. ಮೈಸೂರು, ಬೆಂಗಳೂರಿನಲ್ಲಿರುವ ಕೆಎಸ್ ಐಸಿಯ 2 ಮಾರಾಟ ಕೇಂದ್ರಗಳು, ಚನ್ನಪಟ್ಟಣ ಮತ್ತು ದಾವಣಗೆರೆಯ ತಲಾ ಒಂದು ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಗಳು ದೊರೆಯಲಿವೆ ಎಂದು ತಿಳಿಸಿತ್ತು.
ಆದರೆ, ಅದನ್ನು ನಂಬಿ ಆಧಾರ್ ಕಾರ್ಡ್ ಸಹಿತ ಕೆಎಸ್‌ಐಸಿಗೆ ತೆರಳಿದ್ದ ಗ್ರಾಹಕರಿಗೆ ನಿರಾಶೆ ಕಾದಿತ್ತು. ಈ ದಿನ ರಿಯಾಯಿತಿ ಮಾರಾಟ ಇಲ್ಲ. ಅದನ್ನು ಮುಂದೂಡಲಾಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.

ಕಡಿಮೆ ಬೆಲೆಯಲ್ಲಿ ರೇಷ್ಮೆ ಸೀರೆ ಖರೀದಿ ಮಾಡಬಹುದು ಎಂಬ ಆಸೆಯೊಂದಿಗೆ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕೆಎಸ್ಐಸಿ ಮಳಿಗೆಗೆ ಬಂದಿದ್ದ ಗ್ರಾಹಕರು ಇದರಿಂದ ಸಿಟ್ಟಿಗೆದ್ದರು.
ಮಾರಾಟ ಇಲ್ಲ ಎಂದ ಮೇಲೆ ಜಾಹೀರಾತು ಏಕೆ ಕೊಡಬೇಕಿತ್ತು. ಮಾರಾಟ ಮುಂದೂಡಿರುವ ಬಗ್ಗೆ ಏಕೆ ತಕ್ಷಣ ಪ್ರಕಟಣೆ ನೀಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ರಿಯಾಯಿತಿ ದರದ ಮಾರಾಟವನ್ನು ಮುಂದೂಡುವಂತೆ ಸರ್ಕಾರದಿಂದ ಸೂಚನೆ ಬಂದಿದೆ ಎಂದು ಅಲ್ಲಿನ ಸಿಬ್ಬಂದಿ ಗ್ರಾಹಕರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ರಿಯಾಯಿತಿ ದರದ ಮಾರಾಟದ ಯೋಜನೆಯನ್ನು ಮುಂದೂಡಲಾಗಿದೆ ಎಂಬ ಕಾರಣ ನೀಡಿದರು.
ಈ ಸ್ಪಷ್ಟೀಕರಣದಿಂದ ಗ್ರಾಹಕರು ಮತ್ತಷ್ಟು ಕೆರಳಿದರು. ಚುನಾವಣೆ ಘೋಷಣೆಯಾಗಿ ಎಷ್ಟೋ ದಿನಗಳಾಗಿವೆ. ಆದರೆ, ನಿಗಮವು ಮೊನ್ನೆಯಷ್ಟೇ ರಿಯಾಯಿತಿ ದರದ ಮಾರಾಟವನ್ನು ಪ್ರಕಟಿಸಿತ್ತು, ಹಾಗಾದರೆ, ನೀತಿ ಸಂಹಿತೆ ಜಾರಿಯಲ್ಲಿರುವುದು ಇಷ್ಟು ದಿನದವರೆಗೆ ಅರಿವಿರಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮತ್ತೆ ರಿಯಾಯಿತಿ ದರದ ರೇಷ್ಮೆ ಸೀರೆ ಮಾರಾಟ ನಡೆಸುವುದಾಗಿಯೂ ನಿಗಮ ತಿಳಿಸಿತ್ತು.












Click it and Unblock the Notifications